‘ಟೆಕ್ನಿಕ್ ವಿಚಾರದಲ್ಲಿ ಧೋನಿಗಿಂತ ಕೊಹ್ಲಿ ಬೆಸ್ಟ್’; ವಿವಾದಕ್ಕೀಡಾದ ನಿತೀಶ್ ರೆಡ್ಡಿ ಹೇಳಿಕೆ

|

Updated on: Jun 02, 2024 | 6:53 PM

Nitish Reddy: ವಾಸ್ತವವಾಗಿ ಇತ್ತೀಚೆಗಷ್ಟೇ ನಿತೀಶ್ ರೆಡ್ಡಿ ಯುಟ್ಯೂಬ್ ಒಂದಕ್ಕೆ ಸಂದರ್ಶನ ನೀಡುತ್ತಿದ್ದರು. ಈ ವೇಳೆ ಅವರು ಧೋನಿ ಮತ್ತು ವಿರಾಟ್ ಬಗ್ಗೆ ನೀಡಿದ ಹೇಳಿಕೆ ಇದೀಗ ಭಾರಿ ವಿರೋಧಕ್ಕೊಳಗಾಗಿದೆ. ಈ 8 ಸೆಕೆಂಡ್ ವೀಡಿಯೋದಲ್ಲಿ ನಿತೀಶ್, ಧೋನಿಗೆ ಪ್ರತಿಭೆ ಇಲ್ಲ ಎಂದು ಮೊದಲು ಹೇಳಿದ್ದಾರೆ.

‘ಟೆಕ್ನಿಕ್ ವಿಚಾರದಲ್ಲಿ ಧೋನಿಗಿಂತ ಕೊಹ್ಲಿ ಬೆಸ್ಟ್’; ವಿವಾದಕ್ಕೀಡಾದ ನಿತೀಶ್ ರೆಡ್ಡಿ ಹೇಳಿಕೆ
ನಿತೀಶ್ ರೆಡ್ಡಿ, ಎಂ ಎಸ್ ಧೋನಿ
Follow us on

ನಿತೀಶ್ ರೆಡ್ಡಿ (Nitish Reddy).. ಈ ಬಾರಿಯ ಐಪಿಎಲ್​ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ ಯುವ ಆಲ್​ರೌಂಡರ್. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಹೈದರಾಬಾದ್ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದ್ದ ನಿತೀಶ್ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು. ಹೀಗಾಗಿ ಈ ಯುವ ಕ್ರಿಕೆಟಿಗನಿಗೆ ಶೀಘ್ರದಲ್ಲೇ ಟೀಂ ಇಂಡಿಯಾದಲ್ಲಿ (Team India) ಸ್ಥಾನ ಸಿಗುವುದು ಖಚಿತ ಎಂದು ಪರಿಣಿತರು ಹೇಳತೊಡಗಿದ್ದರು. ಆದರೆ ತನ್ನ ಆಟದ ಮೂಲಕ ಎಲ್ಲರನ್ನೂ ಸೆಳೆಯುವ ಕೆಲಸ ಮಾಡಬೇಕಿದ್ದ ನಿತೀಶ್ ರೆಡ್ಡಿ, ಎಲುಬಿಲ್ಲದ ನಾಲಗೆಯನ್ನು ಹರಿಬಿಟ್ಟು ಇದೀಗ ಭಾರೀ ವಿರೋಧಕ್ಕೊಳಗಾಗಿದ್ದಾರೆ.

ಧೋನಿ, ವಿರಾಟ್ ಬಗ್ಗೆ ನಿತೀಶ್ ಹೇಳಿದ್ದೇನು?

ವಾಸ್ತವವಾಗಿ ಇತ್ತೀಚೆಗಷ್ಟೇ ನಿತೀಶ್ ರೆಡ್ಡಿ ಯುಟ್ಯೂಬ್ ಒಂದಕ್ಕೆ ಸಂದರ್ಶನ ನೀಡುತ್ತಿದ್ದರು. ಈ ವೇಳೆ ಅವರು ಧೋನಿ ಮತ್ತು ವಿರಾಟ್ ಬಗ್ಗೆ ನೀಡಿದ ಹೇಳಿಕೆ ಇದೀಗ ಭಾರಿ ವಿರೋಧಕ್ಕೊಳಗಾಗಿದೆ. ಈ 8 ಸೆಕೆಂಡ್ ವೀಡಿಯೋದಲ್ಲಿ ನಿತೀಶ್, ಧೋನಿಗೆ ಪ್ರತಿಭೆ ಇಲ್ಲ ಎಂದು ಮೊದಲು ಹೇಳಿದ್ದಾರೆ. ಕೂಡಲೇ ತಮ್ಮ ತಪ್ಪನ್ನು ಸರಿಪಡಿಸಿಕೊಂಡ ಅವರು ಧೋನಿಗೆ ಪ್ರತಿಭೆ ಇದೆ ಆದರೆ ತಂತ್ರದ ವಿಷಯದಲ್ಲಿ ಅವರು ವಿರಾಟ್‌ಗಿಂತ ತುಂಬಾ ಹಿಂದೆ ಇದ್ದಾರೆ ಎಂದಿದ್ದಾರೆ. ಇದೀಗ ಧೋನಿ ಮತ್ತು ವಿರಾಟ್ ಬಗ್ಗೆ ನಿತೀಶ್ ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ನಿತೀಶ್ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಇದೀಗ ತನ್ನ ಅಜಾಗರುಕತೆಯಿಂದ ಆದ ಪ್ರಮಾದವನ್ನು ಸರಿಪಡಿಸಿಕೊಳ್ಳಲು ಮುಂದಾಗಿರುವ ನಿತೀಶ್, ನಾನು ಯಾವತ್ತೂ ಧೋನಿಯ ಅಭಿಮಾನಿ. ನನ್ನ ಸಂಪೂರ್ಣ ಹೇಳಿಕೆಯನ್ನು ವಿಡಿಯೋದಲ್ಲಿ ತೋರಿಸಿಲ್ಲ. ಕೇವಲ ಧೋನಿ ಬಗ್ಗೆ ನಾನು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಯಾರೋ ವದಂತಿಗಳನ್ನು ಹರಡಲು ಪ್ರಯತ್ನಿಸಿದ್ದಾರೆ. ಇಂತಹ ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ ಎಂದೂ ಅವರು ಮನವಿ ಮಾಡಿದ್ದಾರೆ.

ಸ್ಪಷ್ಟನೆ ನೀಡಿದ ನಿತೀಶ್

ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿರುವ ನಿತೀಶ್ ರೆಡ್ಡಿ ಯಾವ ಸಂದರ್ಭದಲ್ಲಿ ಧೋನಿ ಮತ್ತು ವಿರಾಟ್ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದ್ದಾರೆ. ‘ಸಂದರ್ಶನದಲ್ಲಿ ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಮನಸ್ಥಿತಿ ಮತ್ತು ಪ್ರತಿಭೆಯ ಬಗ್ಗೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ನಾನು, ಯಶಸ್ಸಿಗೆ ಪ್ರತಿಭೆಗಿಂತ ಮನಸ್ಥಿತಿ ಮುಖ್ಯವಾಗಿದೆ ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ನಾನು ಸಂದರ್ಶನದ ವೇಳೆ, ಈ ವಿಷಯವನ್ನು ವಿವರಿಸಲು ಧೋನಿಯ ಉದಾಹರಣೆಯನ್ನು ನೀಡಿದೆ. ವಿರಾಟ್ ಕೊಹ್ಲಿಯಂತೆ ಎಂಎಸ್ ಧೋನಿ ಬ್ಯಾಟಿಂಗ್ ತಂತ್ರವನ್ನು ಹೊಂದಿಲ್ಲದಿರಬಹುದು. ಇದರ ಹೊರತಾಗಿಯೂ, ಅವರು ಈ ಆಟದ ಲೆಜೆಂಡರಿ ಆಟಗಾರರಾಗಿದ್ದಾರೆ. ಏಕೆಂದರೆ ಅವರು ತಮ್ಮ ದೌರ್ಬಲ್ಯಗಳು ಮತ್ತು ಸಾಮರ್ಥ್ಯಗಳ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಈ ಕಾರಣಕ್ಕಾಗಿ ಅವರು ಈ ಪಂದ್ಯದಲ್ಲಿ ಚಾಂಪಿಯನ್ ಆಗಲು ಸಾಧ್ಯವಾಯಿತು ಎಂದು ಹೇಳಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ