
ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ನ ಫೈನಲ್ ಪಂದ್ಯದ ವೇಳೆ ಯುವರಾಜ್ ಸಿಂಗ್ ಹಾಗೂ ಟಿನೊ ಬೆಸ್ಟ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 148 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನ ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಅಂಬಾಟಿ ರಾಯುಡು ಭರ್ಜರಿ ಆರಂಭ ಒದಗಿಸಿದ್ದರು. 50 ಎಸೆತಗಳನ್ನು ಎದುರಿಸಿದ ರಾಯುಡು 74 ರನ್ ಬಾರಿಸಿದರೆ, ಸಚಿನ್ ತೆಂಡೂಲ್ಕರ್ 25 ರನ್ಗಳ ಕೊಡುಗೆ ನೀಡಿದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗುರ್ಕೀರತ್ ಸಿಂಗ್ ಮಾನ್ 14 ರನ್ ಗಳಿಸಿದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಯುವರಾಜ್ ಸಿಂಗ್ ಅಜೇಯ 13 ರನ್ ಬಾರಿಸಿದರು. ಈ ಮೂಲಕ ಇಂಡಿಯಾ ಮಾಸ್ಟರ್ಸ್ ತಂಡವು 17.1 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಪಂದ್ಯದ ಎರಡನೇ ಇನಿಂಗ್ಸ್ ವೇಳೆ, ಅಂದರೆ ಇಂಡಿಯಾ ಮಾಸ್ಟರ್ಸ್ ಬ್ಯಾಟಿಂಗ್ ವೇಳೆ ಯುವರಾಜ್ ಸಿಂಗ್ ಹಾಗೂ ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡ ಟಿನೊ ಬೆಸ್ಟ್ ನಡುವೆ ವಾಕ್ಸಮರ ನಡೆಯಿತು.
14ನೇ ಓವರ್‌ನ ಮೊದಲ ಎಸೆತದಲ್ಲಿ ಅಂಬಟಿ ರಾಯುಡು ಆಶ್ಲೇ ನರ್ಸ್ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಈ ವೇಳೆ ಥರ್ಟಿ ಯಾರ್ಡ್ ಸರ್ಕಲ್ನಲ್ಲಿದ್ದ ಟಿನೊ ಬೆಸ್ಟ್ ಅದೇನೊ ಗೊಣಗಿದ್ದಾರೆ. ಇತ್ತ ಕಡೆಯಿಂದ ಯುವರಾಜ್ ಸಿಂಗ್ ಕೂಡ ಪ್ರತ್ಯುತ್ತರ ನೀಡಿದ್ದಾರೆ.
ಪರಿಣಾಮ ಇಬ್ಬರ ನಡುವೆ ವಾಗ್ಯುದ್ಧ ಏರ್ಪಟ್ಟಿತು. ಅಲ್ಲದೆ ಇಬ್ಬರು ಸಹ ಭುಜಕ್ಕೆ ಭುಜ ನೀಡುವ ನೀಡುವ ಮೂಲಕ ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ಕೈಮೀರುತ್ತಿದೆ ಎಂದರಿತ ಅಂಪೈರ್ ಹಾಗೂ ಸಹ ಆಟಗಾರರು ಮಧ್ಯ ಪ್ರವೇಶಿಸುವ ಮೂಲಕ ಇಬ್ಬರನ್ನು ಶಾಂತಗೊಳಿಸಿದರು. ಇದೀಗ ಯುವರಾಜ್ ಸಿಂಗ್ ಹಾಗೂ ಟಿನೊ ಬೆಸ್ಟ್ ನಡುವಣ ವಾಕ್ಸಮರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
A heated moment between Yuvraj Singh and Tino Best during the IMLT20 final! 🥶🔥#Cricket #IMLT20 #YuvrajSingh #TinoBest
pic.twitter.com/nwI6dFZKEU— Zsports (@_Zsports) March 17, 2025
ಈ ವಾಕ್ಸಮರದ ಹೊರತಾಗಿಯೂ ಈ ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸುವ ಮೂಲಕ ಇಂಡಿಯಾ ಮಾಸ್ಟರ್ಸ್ ತಂಡವು ಚೊಚ್ಚಲ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.