ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ (Yuvraj Singh) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ಸಾರಿಗೆ ಖಾತೆಯ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಯುವರಾಜ್ ಸಿಂಗ್ ಕುಟುಂಬದವರನ್ನು ಭೇಟಿಯಾಗಿದ್ದರು. ಈ ಭೇಟಿಯ ಬೆನ್ನಲ್ಲೇ ಸಿಕ್ಸರ್ ಸಿಂಗ್ ಬಿಜೆಪಿ ಪರ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ.
ಪಂಜಾಬ್ನ ಗುರುದಾಸ್ಪುರ ಲೋಕಸಭಾ ಕ್ಷೇತ್ರದಿಂದ ಯುವರಾಜ್ ಸಿಂಗ್ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಯಿದ್ದು, ಇದೇ ಕಾರಣದಿಂದಾಗಿ ಅವರು ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗುರುರಾಸ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಬಾಲಿವುಡ್ ನಟ ಸನ್ನಿ ಡಿಯೋಲ್ ಜಯ ಸಾಧಿಸಿದ್ದರು. ಇದೀಗ ಹಾಲಿ ಸಂಸದರ ಸ್ಥಾನಕ್ಕೆ ಯುವರಾಜ್ ಸಿಂಗ್ ಅವರನ್ನು ಕರೆತರಲಾಗುತ್ತಿದೆ ಎಂಬ ವದಂತಿ ಹರಿದಾಡುತ್ತಿದೆ.
📍नई दिल्ली
भारत🇮🇳 के महान क्रिकेट🏏 खिलाड़ी रहे श्री @YUVSTRONG12 जी और उनकी माँ श्रीमती शबनम सिंह जी के साथ भेंट हुई। pic.twitter.com/MLCMqPMLU0
— Nitin Gadkari (@nitin_gadkari) February 9, 2024
ಇದಾಗ್ಯೂ ಯುವರಾಜ್ ಸಿಂಗ್ ಆಗಲಿ ಅಥವಾ ಅವರ ಕುಟುಂಬಸ್ಥರಾಗಲಿ ಈ ಸುದ್ದಿಯನ್ನು ಪುಷ್ಠೀಕರಿಸಿಲ್ಲ. ಹಾಗೆಯೇ ಈ ವಿಚಾರವನ್ನು ಅಲ್ಲೆಗಳೆದಿಲ್ಲ. ಹೀಗಾಗಿಯೇ ಯುವರಾಜ್ ಸಿಂಗ್ ಅವರ ರಾಜಕೀಯ ಎಂಟ್ರಿ ಸುದ್ದಿ ದಿನದಿಂದ ದಿನಕ್ಕೆ ಮಹತ್ವ ಪಡೆದುಕೊಳ್ಳುತ್ತಿದೆ.
ಈ ಸುದ್ದಿಯು ನಿಜವಾದಲ್ಲಿ, ಕ್ರಿಕೆಟ್ ಅಂಗಳದಿಂದ ರಾಜಕೀಯದಲ್ಲಿ ಇನಿಂಗ್ಸ್ ಆರಂಭಿಸಿದ ಕೆಲವೇ ಕೆಲವು ಆಟಗಾರರಲ್ಲಿ ಯುವರಾಜ್ ಸಿಂಗ್ ಹೆಸರು ಕೂಡ ಸೇರ್ಪಡೆಯಾಗಲಿದೆ. ಈಗಾಗಲೇ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ಪೂರ್ವ ದೆಹಲಿ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದರೆ, ಹರ್ಭಜನ್ ಸಿಂಗ್ ಎಎಪಿ ಪಕ್ಷದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಇನ್ನು ಮೊಹಮ್ಮದ್ ಅಝರುದ್ದೀನ್ ಮತ್ತು ಕೀರ್ತಿ ಆಜಾದ್ ಸೇರಿದಂತೆ ಹಲವಾರು ಮಾಜಿ ಕ್ರಿಕೆಟಿಗರು ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇದೀಗ ಯುವರಾಜ್ ಸಿಂಗ್ ಹೆಸರು ರಾಜಕೀಯ ಪಕ್ಷದೊಂದಿಗೆ ತಳುಕು ಹಾಕಿಕೊಂಡಿದ್ದು, ಅವರ ಮುಂದಿನ ನಡೆಯೇನು ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ.
ಇದನ್ನೂ ಓದಿ: IPL 2024: ಚಾನ್ಸ್ ಕೇಳಿದ್ರೂ ಕೊಡಲಿಲ್ಲ: ಯುವರಾಜ್ ಸಿಂಗ್ ಬೇಸರ..!
ಟೀಮ್ ಇಂಡಿಯಾ ಪರ 40 ಟೆಸ್ಟ್ ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್ 1900 ರನ್ ಹಾಗೂ 9 ವಿಕೆಟ್ಗಳನ್ನು ಕಬಳಿಸಿದ್ದಾರೆ. ಹಾಗೆಯೇ 304 ಏಕದಿನ ಪಂದ್ಯಗಳಿಂದ 8701 ರನ್ಸ್ ಹಾಗೂ 111 ವಿಕೆಟ್ಗಳನ್ನು ಪಡೆದಿದ್ದಾರೆ. ಇದರ ಜೊತೆಗೆ ಟಿ20 ಕ್ರಿಕೆಟ್ನಲ್ಲಿ 58 ಪಂದ್ಯಗಳನ್ನಾಡಿರುವ ಯುವಿ 1177 ರನ್ಸ್ ಹಾಗೂ 28 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇವೆಲ್ಲಕ್ಕಿಂತ ಮುಖ್ಯವಾಗಿ 2007ರ ಟಿ20 ವಿಶ್ವಕಪ್ ಹಾಗೂ 2011 ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಮಹತ್ವದ ಪಾತ್ರವಹಿಸಿದ್ದರು.