ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ದೃಢಪಟ್ಟಿದೆ. ಸ್ಪಿನ್ನರ್ ಯಜುವೇಂದ್ರ ಚಾಹಲ್(Yuzvendra Chahal) ಹಾಗೂ ಕರ್ನಾಟಕ ಮೂಲದ ಆಟಗಾರ ಕೃಷ್ಣಪ್ಪ ಗೌತಮ್ಗೆ(Krishnappa Gowtham) ಕೊರೊನಾ ಸೋಂಕು ತಗುಲಿದೆ. ಶ್ರೀಲಂಕಾ ಪ್ರವಾಸದಲ್ಲಿದ್ದ ಚಹಲ್ ಮತ್ತು ಗೌತಮ್ ಅವರು ಇತ್ತೀಚೆಗೆ ಕೃನಾಲ್ ಪಾಂಡ್ಯ ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರತ್ಯೇಕ ವಾಸದಲ್ಲಿದ್ದರು. ಆಟದ ಸಂದರ್ಭದಲ್ಲಿ ಈರ್ವರೂ ಕೃನಾಲ್ ಪಾಂಡ್ಯ ಸಂಪರ್ಕಕ್ಕೆ ಬಂದಿದ್ದರು ಎನ್ನಕಾಗಿದ್ದು, ಈರ್ವರೂ ಸಹ ಕೊನೇ ಎರಡು ಪಂದ್ಯಗಳಿಂದ ದೂರವಿದ್ದರು.
ಭಾರತವು ಕೊನೇ ಎರಡು ಪಂದ್ಯಗಳಿಂದ ಒಟ್ಟು ಎಂಟು ಆಟಗಾರರನ್ನು ಬದಲಿಸಿ ಕಣಕ್ಕಿಳಿದಿತ್ತು. ಕಾರಣ, ಅವರೆಲ್ಲರೂ ಕೃನಾಲ್ ಪಾಂಡ್ಯ ಅವರ ನೇರ ಸಂಪರ್ಕಕ್ಕೆ ಬಂದಿದ್ದರು. ಕೃನಾಲ್ ಪಾಂಡ್ಯ ಜುಲೈ 27ರಂದು ಸೋಂಕಿಗೆ ತುತ್ತಾಗಿದ್ದರು. ಅದರಿಂದಾಗಿ ಕೃನಾಲ್ ಸಂಪರ್ಕಕ್ಕೆ ಬಂದಿದ್ದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ, ಮನೀಷ್ ಪಾಂಡೆ, ದೀಪಕ್ ಚಾಹರ್, ಯಜುವೇಂದ್ರ ಚಾಹಲ್, ಇಶಾನ್ ಕಿಶನ್ ಹಾಗೂ ಕೃಷ್ಣಪ್ಪ ಗೌತಮ್ ಅವರನ್ನು ಕ್ವಾರಂಟೈನ್ನಲ್ಲಿರುವಂತೆ ಸೂಚಿಸಲಾಗಿತ್ತು. ಈಗ ಮತ್ತೆ ಅವರೆಲ್ಲರಿಗೂ ಸೋಂಕು ಪತ್ತೆ ಪರೀಕ್ಷೆ ನಡೆಸಿದ್ದು ಚಾಹಲ್ ಹಾಗೂ ಗೌತಮ್ಗೆ ಕೊರೊನಾ ಪಾಸಿಟಿವ್ ಬಂದಿದೆ.
ಇವರನ್ನು ಹೊರತುಪಡಿಸಿ ಉಳಿದವರು ಇಂದು ಭಾರತಕ್ಕೆ ಮರಳುವ ಸಾಧ್ಯತೆ ಇದೆ. ಗೌತಮ್ ಹಾಗೂ ಚಾಹಲ್ಗೆ ನಿನ್ನೆ (ಗುರುವಾರ) ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದ್ದು, ಇಂದು ನಡೆಸಿದಾಗ ಪಾಸಿಟಿವ್ ಬಂದಿದೆ. ಕೃನಾಲ್ ಪಾಂಡ್ಯ ಅವರನ್ನು ಐಸೋಲೇಷನ್ನಲ್ಲಿರುವಂತೆ ಸೂಚಿಸಲಾಗಿದ್ದು, ಉಳಿದ ಆಟಗಾರರು ತಮ್ಮ ಹೊಟೆಲ್ ಕೋಣಣೆಗಳಲ್ಲಿ ಉಳಿದುಕೊಂಡಿದ್ದಾರೆ.
ಶ್ರೀಲಂಕಾದಲ್ಲಿರುವ ಕೊರೊನಾ ನಿಯಮಾವಳಿಗಳ ಪ್ರಕಾರ ಪಾಸಿಟಿವ್ ಬಂದ ವ್ಯಕ್ತಿಗಳು ಕನಿಷ್ಠ ಹತ್ತು ದಿನಗಳ ಕಾಲ ಐಸೋಲೇಷನ್ನಲ್ಲಿರಬೇಕು. ನೆಗೆಟಿವ್ ವರದಿ ನಂತರ ದೇಶದಿಂದ ಹೊರ ಹೀಗಲು ಅನುಮತಿ ನೀಡಲಾಗುತ್ತದೆ. ಸೋಂಕಿತರ ಪ್ರಥಮ ಸಂಪರ್ಕಕ್ಕೆ ಬಂದವರು ಏಳು ದಿನಗಳ ಕಾಲ ಕ್ವಾರಂಟೈನ್ ಆಗಿದ್ದು, ನಂತರ ನೆಗೆಟಿವ್ ವರದಿ ಪಡೆದ ನಂತರ ಮರಳಬಹುದಾಗಿದೆ ಎಂದು ಇಎಸ್ಪಿಎನ್ ವರದಿ ಮಾಡಿದೆ.
ಇದನ್ನೂ ಓದಿ: Tokyo Olympics: ಭಾರತದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಅವರ ಒಲಂಪಿಕ್ಸ್ ಪದಕದ ಕನಸು ಭಗ್ನ
ಇದನ್ನೂ ಓದಿ: Tokyo Olympics: ಮಾಡು ಇಲ್ಲವೇ ಮಡಿ ಪಂದ್ಯ ಗೆದ್ದ ಭಾರತದ ವನಿತೆಯರ ಹಾಕಿ ತಂಡ; ಪದಕದಾಸೆ ಜೀವಂತ
(Yuzvendra Chahal and Krishnappa Gowtham tests Covid positive in Srilanka)
Published On - 12:59 pm, Fri, 30 July 21