
2025 ರ ಐಪಿಎಲ್ನಲ್ಲಿ (IPL 2025) ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (Yuzvendra Chahal) ಇದೀಗ ಇಂಗ್ಲೆಂಡ್‌ನಲ್ಲಿಯೂ ತಮ್ಮ ಬೌಲಿಂಗ್ ಚಮತ್ಕಾರವನ್ನು ತೋರಿಸುತ್ತಿದ್ದಾರೆ. ಚಾಹಲ್ ಮ್ಯಾಜಿಕಲ್ ಸ್ಪಿನ್ನಿಂದಾಗಿ ನಾರ್ಥಾಂಪ್ಟನ್‌ಶೈರ್ ತಂಡ ಒಂದು ಹಂತದಲ್ಲಿ ಸುಲಭವಾಗಿ ಗೆಲುವು ಸಾಧಿಸುವತ್ತ ಹೆಜ್ಜೆ ಹಾಕಿತ್ತು. ಆದರೆ ಕೆಂಟ್ ತಂಡದ ಬಾಲಂಗೋಚಿಗಳು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು. ವಾಸ್ತವವಾಗಿ ಟೀಂ ಇಂಡಿಯಾದಲ್ಲಿ ಪುನರಾಗಮನ ಮಾಡಲು ಪ್ರಯತ್ನಿಸುತ್ತಿರುವ ಚಾಹಲ್ ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ನಾರ್ಥಾಂಪ್ಟನ್‌ಶೈರ್ ಪರ ಆಡುತ್ತಿರುವ ಅವರು ಕೆಂಟ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಚಾಹಲ್ ಯಾವುದೇ ವಿಕೆಟ್ ಪಡೆಯಲಿಲ್ಲ, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಮುಖ 4 ವಿಕೆಟ್ ಕಬಳಿಸಿ ಅದ್ಭುತ ಪ್ರದರ್ಶನ ನೀಡಿದರು.
ಕೆಂಟ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಯುಜ್ವೇಂದ್ರ ಚಾಹಲ್ ಯಾವುದೇ ವಿಕೆಟ್ ಪಡೆಯಲಿಲ್ಲ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಕಮ್‌ಬ್ಯಾಕ್ ಮಾಡಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ಅದರಲ್ಲೂ ಚಾಹಲ್ ಚಮತ್ಕಾರ ಹೇಗಿತ್ತು ಎಂಬುದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನನ್ನಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ ಎಂಬುದನ್ನು ಚಾಹಲ್ ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ.
7.3 | @yuzi_chahal that is delightful! 🤩
Chahal removes the off stump of Singh with an absolute beauty! 🌀
Kent 29/2.
Watch live 👉 https://t.co/CU8uwtfknL pic.twitter.com/HMFPgiyRp3
— Northamptonshire Steelbacks (@NorthantsCCC) July 2, 2025
ವಾಸ್ತವವಾಗಿ ಚಾಹಲ್ ಕೆಂಟ್ ತಂಡದ ಎರಡನೇ ಇನ್ನಿಂಗ್ಸ್‌ನ ಎಂಟನೇ ಓವರ್ ಬೌಲ್ ಮಾಡಿದರು. ಈ ಓವರ್‌ನ ಮೂರನೇ ಎಸೆತದಲ್ಲಿ ಚಾಹಲ್ ಲೆಗ್ ಸ್ಪಿನ್ ಬೌಲಿಂಗ್ ಮಾಡಿದರು. ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಪಿಚ್ ಆದ ಕಾರಣ ಕೆಂಟ್ ಬ್ಯಾಟ್ಸ್‌ಮನ್ ಏಕಾನ್ಶ್ ಸಿಂಗ್ ಆ ಚೆಂಡನ್ನು ಡಿಫೆಂಡ್ ಮಾಡಲು ಪ್ರಯತ್ನಿಸಿದರು, ಆದರೆ ಚೆಂಡು ತುಂಬಾ ಸ್ಪಿನ್ ಆಗಿ ನೇರವಾಗಿ ಸ್ಟಂಪ್ಗೆ ಬಡಿಯಿತು. ಇದನ್ನು ನೋಡಿ ಏಕಾನ್ಶ್ ಸಿಂಗ್ ಕೂಡ ಆಶ್ಚರ್ಯಚಕಿತರಾದರು. ಈ ಪಂದ್ಯದಲ್ಲಿ, ಚಾಹಲ್ 30 ಓವರ್‌ಗಳಲ್ಲಿ 6 ಮೇಡನ್ ಓವರ್ ಬೌಲ್ ಮಾಡುವುದರ ಜೊತೆಗೆ 51 ರನ್ ನೀಡಿ 4 ವಿಕೆಟ್‌ಗಳನ್ನು ಪಡೆದರು.
ಚಾಹಲ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ, ನಾರ್ಥಾಂಪ್ಟನ್‌ಶೈರ್ ಒಂದು ಹಂತದಲ್ಲಿ ಗೆಲುವಿನ ಸಮೀಪಕ್ಕೆ ಬಂದಿತ್ತು. ಕೆಂಟ್ 135 ರನ್‌ಗಳಿಗೆ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತ್ತು, ಆದರೆ ಮ್ಯಾಥ್ಯೂ ಕ್ವಿನ್ ಮತ್ತು ಜೋ ಅವಿಸನ್ ಒಂಬತ್ತನೇ ವಿಕೆಟ್‌ಗೆ 25 ರನ್‌ಗಳ ಜೊತೆಯಾಟವನ್ನಾಡಿ ಪಂದ್ಯವನ್ನು ಡ್ರಾ ಮಾಡಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ, ಕೆಂಟ್ 6 ವಿಕೆಟ್‌ಗೆ 566 ರನ್ ಬಾರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಪ್ರತಿಯಾಗಿ, ನಾರ್ಥಾಂಪ್ಟನ್‌ಶೈರ್ 6 ವಿಕೆಟ್‌ಗೆ 722 ರನ್ ಕಲೆಹಾಕಿ ಮೊದಲ ಇನ್ನಿಂಗ್ಸ್ ಮುಗಿಸಿತು. ಈ ರೀತಿಯಾಗಿ, ನಾರ್ಥಾಂಪ್ಟನ್‌ಶೈರ್ 156 ರನ್‌ಗಳ ಮುನ್ನಡೆ ಪಡೆದುಕೊಂಡಿತು. ಇತ್ತ ಎರಡನೇ ಇನ್ನಿಂಗ್ಸ್‌ನಲ್ಲಿ ಕೆಂಟ್ ತಂಡ 8 ವಿಕೆಟ್‌ಗೆ 160 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಪಂದ್ಯದ ನಂತರ ಮಾತನಾಡಿದ ಯುಜ್ವೇಂದ್ರ ಚಾಹಲ್, ಕಳೆದ ಸೀಸನ್‌ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ 19 ವಿಕೆಟ್ ಪಡೆದಿದ್ದೆ. ಅಲ್ಲದೆ ಕಳೆದ ಆವೃತ್ತಿಯನ್ನು ನಾನು ತುಂಬಾ ಆನಂದಿಸಿದ್ದೆ, ಇದೀಗ ಮತ್ತೆ ಬಂದಿರುವುದಕ್ಕೆ ಸಂತೋಷವಾಗಿದೆ. ಡ್ರೆಸ್ಸಿಂಗ್ ಕೋಣೆಯ ವಾತಾವರಣ ಚೆನ್ನಾಗಿದೆ. ನಾನು ಮತ್ತೆ ಅದರ ಭಾಗವಾಗಲು ಉತ್ಸುಕನಾಗಿದ್ದೇನೆ. ನನ್ನ ತಂಡ ಗೆಲ್ಲಬೇಕೆಂದು ನಾನು ಬಯಸಿದ್ದೆ, ಆದರೆ ಅದು ಆಗಲಿಲ್ಲ. ಆದಾಗ್ಯೂ ನನ್ನ ಪ್ರದರ್ಶನದಿಂದ ನನಗೆ ಸಂತೋಷವಾಗಿದೆ ಎಂದು ಚಾಹಲ್ ಹೇಳಿದರು.
Published On - 2:38 pm, Fri, 4 July 25