
ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ (Yuzvendra Chahal – Dhanashree Verma) ನಡುವಣ ವೈಯುಕ್ತಿಕ ವಿಚಾರಗಳು ಕಳೆದ ಕೆಲ ದಿನಗಳಿಂದ ಚರ್ಚೆಯಲ್ಲಿದೆ. ಅದರಲ್ಲೂ ಇಬ್ಬರೂ ಡೈವೋರ್ಸ್ ಆಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಈ ಸುದ್ದಿಗಳಿಗೆ ಖುದ್ದು ಧನಶ್ರೀ ಹಾಗೂ ಚಹಾಲ್ ಅವರೇ ಪ್ರತಿಕ್ರಿಯಿಸಿರುವ ಮೂಲಕ ಎಲ್ಲಾ ವದಂತಿಗಳನ್ನು ತಳ್ಳಿಹಾಕಿದ್ದರು. ಇದೀಗ ಪತ್ನಿಯ ಜೊತೆಗಿನ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಟೀಮ್ ಇಂಡಿಯಾ ಸ್ಪಿನ್ನರ್ ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಎಂದು ಸಾರಿದ್ದಾರೆ.
ಆದರೆ ಈ ವಿಡಿಯೋ ಮೂಲಕ ಚಹಾಲ್ ಮತ್ತೊಂದು ಟ್ವಿಸ್ಟ್ ನೀಡಿದ್ದಾರೆ. ಅಂದರೆ ಈ ವಿಡಿಯೋದಲ್ಲಿ ನಾನು ಒಂದು ತಿಂಗಳ ಕಾಲ ತವರಿಗೆ ಹೋಗುತ್ತಿದ್ದೇನೆ ಎಂದು ಧನಶ್ರೀ ಲಿಪ್ ಸಿಂಕ್ ಮಾಡಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ಚಹಾಲ್ ‘ದೀವಾನಾ’ ಚಿತ್ರದ ‘ತೇರಿ ಇಸ್ಸಿ ಅದ ಕೊ ಸನಮ್, ಮುಜ್ಕೊ ತೋ ಪ್ಯಾರ್ ಆಯಾ’ ಹಾಡಿಗೆ ಕುಣಿದು ಕುಪ್ಪಳಿಸುತ್ತಿರುವುದು ಕಾಣಬಹುದು.
ತಮಾಷೆಗಾಗಿ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇತ್ತೀಚೆಗೆ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಯಾಗಿತ್ತು. ಧನಶ್ರೀ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ‘ಚಹಾಲ್’ ಎಂಬ ಉಪನಾಮವನ್ನು ತೆಗೆದುಹಾಕಿದ್ದರು. ಮತ್ತೊಂದೆಡೆ ಚಹಾಲ್ ಹೊಸ ಜೀವನವು ಲೋಡ್ ಆಗುತ್ತಿದೆ…ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು. ಇದರೊಂದಿಗೆ ಚಹಾಲ್ ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ. ಇಬ್ಬರೂ ದೂರವಾಗುತ್ತಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು.
ಈ ಊಹಾಪೋಹಗಳು ಮಹತ್ವ ಪಡೆದುಕೊಳ್ಳುತ್ತಿದ್ದಂತೆ, ನಮ್ಮ ವೈಯುಕ್ತಿಕ ಜೀವನಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವದಂತಿಗಳನ್ನು ನಂಬಬೇಡಿ ಎಂದು ಚಹಾಲ್ ತಿಳಿಸಿದ್ದರು. ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ, ಸುಳ್ಳು ಸುದ್ದಿಗಳನ್ನು ಹರಬೇಡಿ ಎಂದು ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದರು.
ಇನ್ನು ಧನಶ್ರೀ ವರ್ಮಾ ಕೂಡ ಸುದೀರ್ಘ ಪೋಸ್ಟ್ ಹಾಕುವ ಮೂಲಕ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಹರಿದಾಡಿದ್ದ ಸುದ್ದಿಗಳ ಬಗ್ಗೆ ಮೌನ ಮುರಿದಿದ್ದರು. ಅಲ್ಲದೆ ನಾನು ಚಹಾಲ್ ಈಗಲೂ ಜೊತೆಗಿದ್ದೇವೆ ಎಂದು ತಿಳಿಸಿದ್ದರು. ಈ ಪೋಸ್ಟ್‌ಗೆ ಖುದ್ದು ಯುಜ್ವೇಂದ್ರ ಚಹಾಲ್ ಮೈ ವುಮನ್ ಎಂದು ಕಾಮೆಂಟ್ ಮಾಡುವ ಮೂಲಕ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ್ದರು.