ನ್ಯೂಜಿಲೆಂಡ್​ಗೆ ಹಾರಿದ ಟೀಂ ಇಂಡಿಯಾ; ವಿಮಾನ ನಿಲ್ದಾಣದಲ್ಲೇ ನಿದ್ರೆಗೆ ಜಾರಿದ ಸೂರ್ಯ, ಪಂತ್, ಚಾಹಲ್

| Updated By: ಪೃಥ್ವಿಶಂಕರ

Updated on: Nov 13, 2022 | 3:26 PM

IND vs NZ: ನವೆಂಬರ್ 18 ಶುಕ್ರವಾರದಿಂದ ಟಿ20 ಸರಣಿ ಆರಂಭವಾಗಲಿದೆ. ಸರಣಿಯ ಎರಡನೇ ಪಂದ್ಯವು ಭಾನುವಾರ, ನವೆಂಬರ್ 20 ರಂದು ನಡೆಯಲಿದೆ. ಅಂತಿಮ ಪಂದ್ಯವು ಮಂಗಳವಾರ, ನವೆಂಬರ್ 22 ರಂದು ನಡೆಯಲಿದೆ.

ನ್ಯೂಜಿಲೆಂಡ್​ಗೆ ಹಾರಿದ ಟೀಂ ಇಂಡಿಯಾ; ವಿಮಾನ ನಿಲ್ದಾಣದಲ್ಲೇ ನಿದ್ರೆಗೆ ಜಾರಿದ ಸೂರ್ಯ, ಪಂತ್, ಚಾಹಲ್
Image Credit source: insidesport
Follow us on

ಟಿ20 ವಿಶ್ವಕಪ್ (T20 World Cup) ಸೆಮಿಫೈನಲ್‌ನಲ್ಲಿ ಸೋತ ನಂತರ ಟೀಂ ಇಂಡಿಯಾ (Team India) ತನ್ನ ಮುಂದಿನ ಪ್ರವಾಸಕ್ಕೆ ತೆರಳಿದೆ. ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದು, ಈ ಪ್ರವಾಸದಲ್ಲಿ ಉಭಯ ತಂಡಗಳ ನಡುವೆ 3 ಟಿ20 ಹಾಗೂ 3 ಏಕದಿನ ಸರಣಿಗಳು ನಡೆಯಲಿವೆ. ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ (Hardik Pandya) ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಸರಣಿಗೆ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಈಗ ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡ್​ಗೆ ಟೀಂ ಇಂಡಿಯಾ ನಿರ್ಗಮಿಸಿದ್ದು, ಈ ನಡುವೆ ಟೀಂ ಇಂಡಿಯಾ ಆಟಗಾರರ ಫೋಟೋವೊಂದು ಸಖತ್ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ತಂಡದ ಕೆಲ ಆಟಗಾರರು ವಿಮಾನ ನಿಲ್ದಾಣದ ನೆಲದ ಮೇಲೆ ಮಲಗಿರುವುದನ್ನು ನಾವು ಕಾಣಬಹುದಾಗಿದೆ.

ವಿಮಾನ ನಿಲ್ದಾಣದಲ್ಲಿ ಮಲಗಿದ ಆಟಗಾರರು

ಈ ಫೋಟೋದಲ್ಲಿ ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ ಮತ್ತು ಯುಜ್ವೇಂದ್ರ ಚಹಾಲ್ ಇದ್ದಾರೆ. ಈ ಫೋಟೋದಲ್ಲಿರುವಂತೆ ಸೂರ್ಯ ಗೋಡೆಗೆ ಒರಗಿಕೊಂಡು ನಿದ್ರಿಸುತ್ತಿದ್ದಾರೆ. ರಿಷಬ್ ಪಂತ್ ಸೂರ್ಯನ ಕಾಲಿನ ಮೇಲೆ ತಲೆಯಿಟ್ಟು ಮಲಗಿದ್ದಾರೆ ಮತ್ತು ಚಾಹಲ್ ಪಂತ್ ಮೇಲೆ ತಲೆಯಿಟ್ಟು ಮಲಗಿದ್ದಾರೆ. ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸರಣಿ ಯಾವಾಗ ಪ್ರಾರಂಭ?

ನವೆಂಬರ್ 18 ಶುಕ್ರವಾರದಿಂದ ಟಿ20 ಸರಣಿ ಆರಂಭವಾಗಲಿದೆ. ಸರಣಿಯ ಎರಡನೇ ಪಂದ್ಯವು ಭಾನುವಾರ, ನವೆಂಬರ್ 20 ರಂದು ನಡೆಯಲಿದೆ. ಅಂತಿಮ ಪಂದ್ಯವು ಮಂಗಳವಾರ, ನವೆಂಬರ್ 22 ರಂದು ನಡೆಯಲಿದೆ. ನಂತರ ಏಕದಿನ ಸರಣಿಯು ನವೆಂಬರ್ 25 ರಿಂದ ಆರಂಭವಾಗಲಿದೆ. ಏಕದಿನ ಸರಣಿಯಲ್ಲಿ ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಈ ಮೂರು ಪಂದ್ಯಗಳು ಕ್ರಮವಾಗಿ ನವೆಂಬರ್ 25, 27 ಮತ್ತು 30 ರಂದು ನಡೆಯಲಿವೆ. ಏಕದಿನ ಸರಣಿಗೆ ಶಿಖರ್ ಧವನ್ ನಾಯಕರಾಗಿರುತ್ತಾರೆ. ಈ ಸಂಪೂರ್ಣ ಪ್ರವಾಸದಲ್ಲಿ, ಖಾಯಂ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಆರ್ ಅಶ್ವಿನ್ ಅವರಂತಹ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ

ಟಿ20 ಸರಣಿಗೆ ಟೀಂ ಇಂಡಿಯಾ

ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ), ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್.

ಏಕದಿನ ಸರಣಿಗೆ ಟೀಂ ಇಂಡಿಯಾ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ಶಿಖರ್ ಧವನ್ (ನಾಯಕ), ರಿಷಬ್ ಪಂತ್ (ಉಪನಾಯಕ), ಶುಭಮನ್ ಗಿಲ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಶಹಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ಉಮ್ರಾನ್ ಮಲಿಕ್, ಕುಲದೀಪ್ ಸೇನ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್ ಮತ್ತು ಅರ್ಷದೀಪ್ ಸಿಂಗ್.