
ಐಸಿಸಿ ಟಿ20 ವಿಶ್ವಕಪ್‌ಗಾಗಿ (T20 World Cup) ಜಿಂಬಾಬ್ವೆ ತನ್ನ 15 ಮಂದಿಯ ತಂಡವನ್ನು ಪ್ರಕಟಿಸಿದೆ. 37 ವರ್ಷದ ಕ್ರೇಗ್ ಎರ್ವಿನ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದಿಂದ ಹೊರಗುಳಿದಿದ್ದ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರ್ಬಾನಿ ವಿಶ್ವಕಪ್‌ಗೆ ಮರಳಿದ್ದಾರೆ. ಜಿಂಬಾಬ್ವೆ ಸೂಪರ್ 12 ಗೆ ಹೋಗಲು ಗುಂಪು ಸುತ್ತಿನಲ್ಲಿ ಆಡಬೇಕಾಗಿದೆ. ಜಿಂಬಾಬ್ವೆ ಬಿ ಗುಂಪಿನಲ್ಲಿದ್ದು, ಈ ಗುಂಪಿನಲ್ಲಿ ಐರ್ಲೆಂಡ್, ಸ್ಕಾಟ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಸ್ಥಾನ ಪಡೆದಿವೆ.
ಕ್ರೇಗ್ ಎರ್ವಿನ್ ನಾಯಕತ್ವ
ತಂಡದ ನಾಯಕ ಕ್ರೇಗ್ ಎರ್ವಿನ್ ಕೂಡ ಇಂಜುರಿಯಿಂದ ಚೇತರಿಸಿಕೊಂಡ ನಂತರ ತಂಡಕ್ಕೆ ಪುನರಾಗಮನ ಮಾಡುತ್ತಿದ್ದಾರೆ. ಕ್ರೇಗ್ ಹೊರತಾಗಿ, ಟೆಂಡೈ ಚಟಾರಾ, ವೆಲ್ಲಿಂಗ್ಟನ್ ಮಸ್ಕಡ್ಜಾ ಮತ್ತು ಮಿಲ್ಟನ್ ಶುಂಭ ಕೂಡ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಎಂಟ್ರಿಕೊಟ್ಟಿದ್ದಾರೆ. ಮತ್ತೊಂದೆಡೆ ಭುಜದ ಗಾಯದಿಂದ ಚೇತರಿಸಿಕೊಂಡಿರುವ ಶುಂಭ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ತಂಡದಲ್ಲಿ ಅನುಭವಿ ಆಟಗಾರರಾದ ರೆಗಿಸ್ ಚಕಬ್ವಾ, ಸಿಕಂದರ್ ರಜಾ ಮತ್ತು ಶಾನ್ ವಿಲಿಯಮ್ಸ್ ಇದ್ದರೆ, ಬ್ರಾಡ್ಲಿ ಇವಾನ್ಸ್, ಟೋನಿ ಮುನ್ಯೊಂಗಾ ಮತ್ತು ಕ್ಲೈನ್ ಮದನಾಡೆ ಅವರಿಗೂ ಅವಕಾಶ ಸಿಕ್ಕಿದೆ. ಐವರು ಮೀಸಲು ಆಟಗಾರರ ಹೆಸರನ್ನು ಕೂಡ ತಂಡ ಪ್ರಕಟಿಸಿದ್ದು, ತಡಿವಾನಾಸೆ ಮರುಮಣಿ, ಇನ್ನೋಸೆಂಟ್ ಕಿಯಾ, ಕೆವಿನ್ ಕಸುಜಾ, ವಿಕ್ಟರ್ ನ್ಯಾಚಿ ಮತ್ತು ತನಕಮ್ ಚಿವಾಂಗ ಅವರು ಮೀಸಲು ಆಟಗಾರರಾಗಿ ಆಸ್ಟ್ರೇಲಿಯಾಕ್ಕೆ ತಂಡದೊಂದಿಗೆ ಹೋಗಲಿದ್ದಾರೆ.
ಅಕ್ಟೋಬರ್ 17ರಂದು ಜಿಂಬಾಬ್ವೆ ಪಯಣ ಆರಂಭ
ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ ಪಯಣ ಅಕ್ಟೋಬರ್ 17 ರಂದು ಆರಂಭವಾಗಲಿದೆ.ಬಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಹೋಬರ್ಟ್‌ನಲ್ಲಿ ನಡೆಯಲಿದ್ದು, ಇದರ ನಂತರ, ತಂಡವು ಅಕ್ಟೋಬರ್ 19 ರಂದು ವೆಸ್ಟ್ ಇಂಡೀಸ್ ಮತ್ತು ಅಕ್ಟೋಬರ್ 21 ರಂದು ಸ್ಕಾಟ್ಲೆಂಡ್ ಅನ್ನು ಎದುರಿಸಲಿದೆ. ಗುಂಪಿನಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಸೂಪರ್ 12ಗೆ ಅರ್ಹತೆ ಪಡೆಯಲಿವೆ. ವಿಶ್ವಕಪ್‌ಗೂ ಮುನ್ನ ಜಿಂಬಾಬ್ವೆ ತಂಡವು ಶ್ರೀಲಂಕಾ ಮತ್ತು ನಮೀಬಿಯಾ ವಿರುದ್ಧ ಅಕ್ಟೋಬರ್ 10 ಮತ್ತು 13 ರಂದು ಅಭ್ಯಾಸ ಪಂದ್ಯದಲ್ಲಿ ಆಡಲಿದೆ. ಶ್ರೀಲಂಕಾ, ಯುಎಇ, ನೆದರ್ಲ್ಯಾಂಡ್ಸ್ ಮತ್ತು ನಮೀಬಿಯಾ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಗುಂಪು ಸುತ್ತಿನ ನಂತರ, ಸೂಪರ್ 12 ಸುತ್ತು ಪ್ರಾರಂಭವಾಗುತ್ತದೆ. ಟಿ20ಯ ಅಗ್ರ 8 ತಂಡಗಳು ಸೂಪರ್ 12ರಲ್ಲಿ ನೇರ ಪ್ರವೇಶ ಪಡೆದಿವೆ.
ಟಿ20 ವಿಶ್ವಕಪ್‌ಗೆ ಜಿಂಬಾಬ್ವೆ ತಂಡ: ಎರ್ವಿನ್ ಕ್ರೇಗ್, ಬರ್ಲೆ ರಿಯಾನ್, ಚಕಬ್ವಾ ರೆಗಿಸ್, ಚಟಾರಾ ಟೆಂಡೈ, ಅವಾನ್ಸ್ ಬ್ರಾಡ್ಲಿ, ಜೊಂಗ್ವೆ ಲ್ಯೂಕ್, ಮದನಾಡೆ ಕ್ಲೈವ್, ಮಧಿವೈರ್ ವೆಸ್ಲಿ, ಮಸಕಡ್ಜಾ ವೆಲ್ಲಿಂಗ್ಟನ್, ಮುನ್ಯೊಂಗಾ ಟೋನಿ, ಮುಜರ್ಬಾನಿ ಬ್ಲೆಸಿಂಗ್, ನಾಗರ್ವಾ ರಿಚರ್ಡ್, ಸಿಕಂದರ್ ರಾಜಾ ಮತ್ತು ವಿಲ್ರಿಯಾ ಶಾಮ್ಸ್ಟನ್,
ಮೀಸಲು ಆಟಗಾರರು- ಚಿವಾಂಗಾ ತನಕಾ, ಇನ್ನೋಸೆಂಟ್ ಕಿಯಾ, ಕಸುಜಾ ಕೆವಿನ್, ಮರುಮಣಿ ತಡಿವಾನಾಸೆ ಮತ್ತು ನ್ಯೌಚಿ ವಿಕ್ಟರ್