
ಬರೋಬ್ಬರಿ 11 ವರ್ಷಗಳು… ಝಿಂಬಾಬ್ವೆ ತಂಡವು ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದು ದಶಕವೇ ಕಳೆದಿವೆ. ಈ ಬಾರಿಯಾದರೂ ಗೆಲ್ಲುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಐರ್ಲೆಂಡ್ ತಂಡ ಆಘಾತ ನೀಡಿದೆ. ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಝಿಂಬಾಬ್ವೆ ಮುಗ್ಗರಿಸಿದೆ. ಅದರಲ್ಲೂ ಗೆಲ್ಲಬಹುದಾಗಿದ್ದ ಪಂದ್ಯವನ್ನು ಆತಿಥೇಯರು ಕೈಚೆಲ್ಲಿಕೊಂಡಿದ್ದಾರೆ.
ಏಕೆಂದರೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 260 ರನ್ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಝಿಂಬಾಬ್ವೆ ಮೊದಲ ಇನಿಂಗ್ಸ್ನಲ್ಲಿ 267 ರನ್ ಪೇರಿಸಿತ್ತು.
ಇನ್ನು 7 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಐರ್ಲೆಂಡ್ ತಂಡ ಕಲೆಹಾಕಿದ್ದು 298 ರನ್ಗಳು ಮಾತ್ರ. ಅದರಂತೆ ಝಿಂಬಾಬ್ವೆ ತಂಡಕ್ಕೆ ಗೆಲ್ಲಲು ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 292 ರನ್ಗಳ ಅವಶ್ಯಕತೆ ಮಾತ್ರವಿತ್ತು.
ಈ ಗುರಿಯನ್ನು ಬೆನ್ನತ್ತಿದ ಝಿಂಬಾಬ್ವೆ ತಂಡವು 228 ರನ್ಗಳಿಗೆ ಆಲೌಟ್ ಆಗುವ ಮೂಲಕ 63 ರನ್ಗಳಿಂದ ಸೋಲೊಪ್ಪಿಕೊಂಡಿದೆ. ಇದರೊಂದಿಗೆ ತವರಿನಲ್ಲಿ ದಶಕದ ಬಳಿಕ ಟೆಸ್ಟ್ ಗೆಲ್ಲುವ ಝಿಂಬಾಬ್ವೆ ತಂಡದ ಕನಸು ಕೂಡ ಕಮರಿದೆ.
ಝಿಂಬಾಬ್ವೆ ತಂಡವು ಕೊನೆಯ ಬಾರಿ ತವರಿನಲ್ಲಿ ಟೆಸ್ಟ್ ಪಂದ್ಯ ಗೆದ್ದಿದ್ದು 2013 ರಲ್ಲಿ. ಪಾಕಿಸ್ತಾನ್ ತಂಡವನ್ನು 24 ರನ್ಗಳಿಂದ ಸೋಲಿಸಿ ಝಿಂಬಾಬ್ವೆ ಐತಿಹಾಸಿಕ ಸಾಧನೆ ಮಾಡಿತ್ತು. ಇದಾದ ಬಳಿಕ ತವರಿನಲ್ಲಿ ಗೆಲುವು ಎಂಬುದು ಝಿಂಬಾಬ್ವೆ ಪಾಲಿಗೆ ಮರೀಚಿಕೆಯಾಗಿದೆ.
ಈ 11 ವರ್ಷಗಳ ನಡುವೆ ಝಿಂಬಾಬ್ವೆ ಪಡೆ ತವರಿನಲ್ಲಿ 17 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ 13 ಮ್ಯಾಚ್ಗಳಲ್ಲಿ ಸೋಲನುಭವಿಸಿದರೆ, 4 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು ಶ್ರೇಷ್ಠ ಸಾಧನೆ.
ಇದೀಗ ಝಿಂಬಾಬ್ವೆ ತಂಡವು ತವರಿನಲ್ಲಿ ಟೆಸ್ಟ್ ಪಂದ್ಯ ಗೆಲ್ಲದೇ 11 ವರ್ಷ, 4 ತಿಂಗಳು, 28 ದಿನಗಳು ಕಳೆದಿವೆ. ಈ ದೀರ್ಘಾವಧಿಯ ಸೋಲಿನ ಸರಪಳಿಯನ್ನು ಕಳಚುವುದೇ ಈಗ ಝಿಂಬಾಬ್ವೆ ತಂಡದ ಮುಂದಿರುವ ಅತೀ ದೊಡ್ಡ ಸವಾಲು.
ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್..!
ಝಿಂಬಾಬ್ವೆ ಟೆಸ್ಟ್ ತಂಡ: ಕ್ರೇಗ್ ಎರ್ವಿನ್ (ನಾಯಕ), ಬೆನ್ ಕರನ್ , ತಕುಡ್ಜ್ವಾನಾಶೆ ಕೈಟಾನೊ , ನಿಕ್ ವೆಲ್ಚ್ , ಬ್ರಿಯಾನ್ ಬೆನ್ನೆಟ್ , ಜೊನಾಥನ್ ಕ್ಯಾಂಪ್ಬೆಲ್, ವೆಸ್ಲಿ ಮಾಧೆವೆರೆ , ನ್ಯಾಶಾ ಮಾಯಾವೊ (ವಿಕೆಟ್ ಕೀಪರ್) , ನ್ಯೂಮನ್ ನ್ಯಾಮ್ಹುರಿ , ರಿಚರ್ಡ್ ನಾಗರವಾ , ಬ್ಲೆಸ್ಸಿಂಗ್ ಮುಝರಾಬಾನಿ , ಟ್ರೆವರ್ ಗ್ವಾಂಡು, ಜಾಯ್ಲಾರ್ಡ್ ಗುಂಬಿ , ಸೀನ್ ವಿಲಿಯಮ್ಸ್ , ವಿಕ್ಟರ್ ನ್ಯಾಯುಚಿ , ವಿನ್ಸೆಂಟ್ ಮಸೆಕೆಸಾ.