ಐಪಿಎಲ್ ಸೀಸನ್ಗಳಲ್ಲಿ ಅನಲಿಸ್ಟ್ ಆಗಿ ಕೆಲಸ ಮಾಡುವ ಆಸ್ಟ್ರೇಲಿಯಾದ ಬ್ರೆಟ್ ಲೀ, ಚೆನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ತಂಡದ ಆಟಗಾರರ ಮೇಲಿಡುವ ನಂಬಿಕೆ ಮತ್ತು ವೈಫಲ್ಯಗಳ ಹೊರತಾಗಿಯೂ ಅವರನ್ನು ಹುರಿದುಂಬಿಸಿ ಬೆಂಬಲಿಸುವುದನ್ನು ಮನಸಾರೆ ಕೊಂಡಾಡಿದ್ದಾರೆ.
ಸಿಎಸ್ಕೆ ಓಪನರ್ ಶೇನ್ ವಾಟ್ಸನ್ ನಿಸ್ಸಂದೇಹವಾಗಿ ಅತ್ಯುತ್ತಮ ಆಟಗಾರ. ಅಸಲಿಗೆ ಅವರೊಬ್ಬ ಆಲ್ರೌಂಡರ್ ಅಂತ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ಈ ಸೀಸನ್ನಲ್ಲಿ ಅವರು ಕೇವಲ ಬ್ಯಾಟಿಂಗ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ವಯಸ್ಸಾಗುತ್ತಿರುವುದರಿಂದ ವ್ಯಾಟೊ ಬೌಲಿಂಗ್ ಮಾಡದಿರಲು ನಿರ್ಧರಿಸಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಈ ಬಾರಿಯ ಸೀಸನ್ನಲ್ಲಿ ವಾಟ್ಸನ್ ಯಾವ ಮಟ್ಟಿಗೆ ಫೇಲಾಗಲಾರಂಭಿಸಿದ್ದರೆಂದರೆ, ತಮ್ಮನ್ನು ಡ್ರಾಪ್ ಮಾಡುವುದು ನಿಶ್ವಿತ ಅಂತ ಭಾವಿಸಿದ್ದರು. ಆದರೆ ನಾಯಕ ಧೋನಿಗೆ ಮಾತ್ರ ತಮ್ಮ ಓಪನರ್ ಮೇಲಿನ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಹಾಗಾಗೇ ಧೋನಿ, ಆಸ್ಟ್ರೇಲಿಯಾದ ಈ ಮಾಜಿ ಆಟಗಾರನನ್ನು ಆಡುವ ಎಲೆವೆನ್ನಲ್ಲಿ ಮುಂದುವರಿಸಿದರು.
ವಾಟ್ಸನ್ ಸಹ ತಮ್ಮ ನಾಯಕನ ವಿಶ್ವಾಸವನ್ನು ಅದ್ಹೇಗೆ ಉಳಿಸಿಕೊಂಡರೆನ್ನುವುದು ರವಿವಾರದಂದು ಕಿಂಗ್ಸ್ ಎಲೆವೆನ್ ಪಂಜಾಬ್ ವಿರುದ್ಧ ಆಡಿದ ಪಂದ್ಯದಲ್ಲಿ ವಿದಿತವಾಯಿತು. ಗೆಲ್ಲಲು 175 ರನ್ ಮೊತ್ತದ ಬೆನ್ನಟ್ಟಿದ ಸಿಎಸ್ಕೆ ವಿಕೆಟ್ ನಷ್ಟವಿಲ್ಲದೆ, ಇನ್ನೂ 14 ಎಸೆತಗಳು ಬಾಕಿಯಿರುವಂತೆಯೇ ಗುರಿ ಸಾಧಿಸಿತು. ವಾಟ್ಸನ್ 53 ಎಸೆತಗಳಲ್ಲಿ 83 ರನ್ ಬಾರಿಸಿದರೆ, ಅವರ ಜೊತೆಗಾರ ಫಫ್ ಡು ಪ್ಲೆಸ್ಸಿ ಸಹ 53 ಎಸೆತಗಳನ್ನಾಡಿ 87 ರನ್ ಬಾರಿಸಿದರು. ಈ ಪಂದ್ಯದ ನಂತರವೇ ಲೀ, ಧೋನಿಯ ನಾಯಕತ್ವದ ಬಗ್ಗೆ ಗುಣಗಾನ ಮಾಡಿದ್ದು.
‘‘ವಾಟ್ಸನ್ರನ್ನು ಬೆಂಬಲಿಸಿ ಅವರಿಗೆ ಮತ್ತೊಂದು ಅವಕಾಶ ಕಲ್ಪಸಿದ ಧೋನಿ ಪ್ರಶಂಸಾರ್ಹರು. ಆ ವಿಶ್ವಾಸವನ್ನು ಉಳಿಸಿಕೊಂಡ ವ್ಯಾಟೊ ಅಧಿಕಾರಯುತ ಬ್ಯಾಟಿಂಗ್ ಪ್ರದರ್ಶಿಸಿದರು. ರವಿವಾರದಂದು ಅಕ್ಷರಶಃ ಬೆಂಕಿಯುಗುಳಿದ ವ್ಯಾಟೊ, ಫಾರ್ಮ್ನಲ್ಲಿದ್ದರೆ ಯಾವ ಹೊಡೆತವನ್ನಾದರೂ ಆಡಬಲ್ಲರು,’’ ಎಂದು ಲೀ ಹೇಳಿದ್ದಾರೆ.