ಬರೊಬ್ಬರಿ ನಾಲ್ಕು ತಿಂಗಳ ಕ್ರಿಕೆಟ್ ಉಪವಾಸದ ಬಳಿಕ ಕ್ರಿಕೆಟ್ ಪ್ರಿಯರಿಗೆ ಇಂದಿನಿಂದ ಮತ್ತೆ ವಸಂತ ಕಾಲ ಬೀಸಿದಂತಾಗಿದೆ. ಯಾಕಂದ್ರೆ ಕೊರೊನಾ ಲಾಕ್ಡೌನ್ನಿಂದ ಕ್ರಿಕೆಟ್ ಪಂದ್ಯಾವಳಿಗಳಿಲ್ಲದೇ ಬೇಸತ್ತಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಟೆಸ್ಟ್ ಕ್ರಿಕೆಟ್ನ ಭೂರಿ ಭೋಜನ ಸವಿಯೋಕೆ ಇನ್ನೇನು ಕೆಲವೇ ಗಂಟೆಗಳು ಮಾತ್ರ ಬಾಕಿಯಿದೆ.
ವಿಶ್ವದಾದ್ಯಂತ ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ಕ್ರಿಕೆಟ್ ಲೋಕ ಅಕ್ಷರಷಃ ಸ್ತಬ್ದವಾಗಿ ಹೋಗಿತ್ತು. ಆದ್ರೀಗ ಅಂತರಾಷ್ಟ್ರೀಯ ಕ್ರಿಕೆಟ್ಗೆ ಮರುಜನ್ಮ ನೀಡಲು ವೇಲ್ಸ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಕೊರೊನಾ ಕೋಲಾಹಲದ ಮಧ್ಯೆಯೂ ಕ್ರಿಕೆಟ್ ನಡೆಸ್ಬಹುದು ಅನ್ನೋದಕ್ಕೆ ಇಂದು ನಡೆಯೋ ಟೆಸ್ಟ್ ಪಂದ್ಯವೇ ಸಾಕ್ಷಿಯಾಗ್ತಿದೆ.
ಆಂಗ್ಲರ ನಾಡಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಇಂದು ಸೌಥಾಂಪ್ಟನ್ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನಾಡೋದಕ್ಕೆ ಕಣಕ್ಕಿಳಿಯುತ್ತಿವೆ. ಕೊರೊನಾ ಸಾಂಕ್ರಾಮಿಕದ ನಡುವೆಯೂ ಕ್ರಿಕೆಟ್ ಆಡ್ಬಹುದು ಅನ್ನೋದನ್ನ ಸಾಬೀತು ಪಡಿಸೋ ನಿಟ್ಟಿನಲ್ಲಿ, ವೇಲ್ಸ್ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹಲವು ಕಟ್ಟಿ ನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ.
ಕೊರೊನಾ ಸೋಂಕಿನಿಂದ ಈ ಪಂದ್ಯಕ್ಕೆ ಯಾವುದೇ ಅಡಚಣೆ ಆಗದಂತೆ ಎಚ್ಚರ ವಹಿಸಲಾಗಿದ್ದು, ಮುಚ್ಚಿದ ಕ್ರೀಡಾಂಗಣದಲ್ಲಿ ಸರಣಿಯ ಎಲ್ಲ ಪಂದ್ಯಗಳನ್ನು ಆಯೋಜಿಸಲಾಗ್ತಿದೆ. ಜೊತೆಗೆ ಎರಡೂ ತಂಡಗಳ ಆಟಗಾರರು ಕಡ್ಡಾಯ 14 ದಿನಗಳ ಕ್ವಾರಂಟೈನ್‌ಗೆ ಒಳಪಟ್ಟು, ಸೋಂಕು ಪತ್ತೆಯ ಪರೀಕ್ಷೆಯಲ್ಲಿ ಸೋಂಕು ಇಲ್ಲವೆಂದು ದೃಢ ಪಟ್ಟ ನಂತರವೇ ಪಂದ್ಯದಲ್ಲಿ ಆಡೋ ಅವಕಾಶ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಪಂದ್ಯ ಬೆಳಗ್ಗೆ 11ಗಂಟೆಗೆ ಶುರುವಾಗಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3.30ಕ್ಕೆ ಆಟ ಶುರುವಾಗಲಿದೆ.
ಇನ್ನು ಆಟಗಾರರ ಸುರಕ್ಷತೆಗಾಗಿ ವಿಕೆಟ್ ಉರುಳಿದಾಗ ಕ್ರಿಕೆಟಿಗರೆಲ್ಲ ಒಂದೆಡೆ ಗುಂಪು ಗೂಡಿ ಕೈ ತಟ್ಟಿ ಸಂಭ್ರಮಿಸುವಂತಿಲ್ಲ. ಓಡಿ ಬಂದು ತಬ್ಬಿಕೊಳ್ಳುವುದು, ಬೌಲರ್‌ಗಳ ಹಾಗೂ ಕ್ಯಾಚ್ ಪಡೆದವರ ಮೈಮೇಲೆ ಏರಿ ಹೋಗುವುದಕ್ಕೆ ಕಡಿವಾಣ ಹಾಕಲಾಗಿದೆ. ಬೇಕಿದ್ರೆ ಮೊಣಕೈ ಸ್ಪರ್ಶಕ್ಕೆ ಯಾವುದೇ ಅಡ್ಡಿ ಇಲ್ಲ. ಹಾಗೇ ಕಾಲಿಗೆ ಕಾಲನ್ನು ತಾಗಿಸಲೂಬಹುದು.
ಇದಕ್ಕಾಗಿ ಕಳೆದ 15 ದಿನಗಳಿಂದ ಎರಡೂ ತಂಡಗಳು ಭರ್ಜರಿ ಅಭ್ಯಾಸವನ್ನೇ ಮಾಡಿವೆ. ಇನ್ನು ಸುದೀರ್ಘಾವಧಿಯ ನಂತರದ ಲೈವ್ ಕ್ರಿಕೆಟ್ ವೀಕ್ಷಿಸಲು ಹಾತೊರೆಯುತ್ತಿರುವ ಕ್ರಿಕೆಟ್ ಪ್ರೇಮಿಗಳು ಇಂಗ್ಲೆಂಡ್ ಕಡೆಗೆ ಮುಖಮಾಡಿ ಕುಳಿತಿದ್ದಾರೆ ಎಂದರೆ ತಪ್ಪಾಗಲಾರದು
Published On - 10:14 am, Wed, 8 July 20