ಮಿಂಚಿದ ರಾಹುಲ್: ಕನ್ನಡಿಗರ ತಂಡ ಕನ್ನಡದ ತಂಡವನ್ನು ಬಗ್ಗು ಬಡಿಯಿತು

|

Updated on: Sep 24, 2020 | 11:40 PM

ಇಂದಿನ ಇಂಡಿಯನ್ ಪ್ರಿಮೀಯರ್ ಲೀಗ್ ಪಂದ್ಯ ಇಬ್ಬರು ನಾಯಕರ ತದ್ವಿರುದ್ಧ ಮುಖಗಳನ್ನು ಪರಿಚಯಿಸಿತು. ಕಿಂಗ್ಸ್ ಎಲೆವೆನ್ ಪಂಜಾಬ್​ನ ನಾಯಕ ಕೆ ಎಲ್ ರಾಹುಲ್ ಆತ್ಮವಿಶ್ವಾಸದ ಪ್ರತಿರೂಪವಾಗಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಎಲ್ಲೋ ಕಳೆದುಹೋದವರಂತಿದ್ದರು. ಕೊಹ್ಲಿ ಎರಡು ಬಾರಿ ರಾಹುಲ್ ನೀಡಿದ ಕ್ಯಾಚನ್ನು ನೆಲಸಮ ಮಾಡಿದ್ದು ಅವರ ಮನಸ್ಥಿತಿಯ ದ್ಯೋತಕವಾಗಿತ್ತು. ಅದರ ಸಂಪೂರ್ಣ ಲಾಭ ಪಡೆದ ರಾಹುಲ್ ಅತ್ಯಾಕರ್ಷಕ ಶತಕ ಬಾರಿಸಿದ್ದೂ ಅಲ್ಲದೆ ಜಾಣ್ಮೆಯ ನಾಯಕತ್ವ ಪ್ರದರ್ಶಿಸಿ ಬೆಂಗಳೂರನ್ನು ಸುಲಭವಾಗಿ 97 ರನ್​ಗಳಿಂದ ಸೋಲಿಸುವಲ್ಲಿ […]

ಮಿಂಚಿದ ರಾಹುಲ್: ಕನ್ನಡಿಗರ ತಂಡ ಕನ್ನಡದ ತಂಡವನ್ನು ಬಗ್ಗು ಬಡಿಯಿತು
Follow us on

ಇಂದಿನ ಇಂಡಿಯನ್ ಪ್ರಿಮೀಯರ್ ಲೀಗ್ ಪಂದ್ಯ ಇಬ್ಬರು ನಾಯಕರ ತದ್ವಿರುದ್ಧ ಮುಖಗಳನ್ನು ಪರಿಚಯಿಸಿತು. ಕಿಂಗ್ಸ್ ಎಲೆವೆನ್ ಪಂಜಾಬ್​ನ ನಾಯಕ ಕೆ ಎಲ್ ರಾಹುಲ್ ಆತ್ಮವಿಶ್ವಾಸದ ಪ್ರತಿರೂಪವಾಗಿದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಎಲ್ಲೋ ಕಳೆದುಹೋದವರಂತಿದ್ದರು. ಕೊಹ್ಲಿ ಎರಡು ಬಾರಿ ರಾಹುಲ್ ನೀಡಿದ ಕ್ಯಾಚನ್ನು ನೆಲಸಮ ಮಾಡಿದ್ದು ಅವರ ಮನಸ್ಥಿತಿಯ ದ್ಯೋತಕವಾಗಿತ್ತು. ಅದರ ಸಂಪೂರ್ಣ ಲಾಭ ಪಡೆದ ರಾಹುಲ್ ಅತ್ಯಾಕರ್ಷಕ ಶತಕ ಬಾರಿಸಿದ್ದೂ ಅಲ್ಲದೆ ಜಾಣ್ಮೆಯ ನಾಯಕತ್ವ ಪ್ರದರ್ಶಿಸಿ ಬೆಂಗಳೂರನ್ನು ಸುಲಭವಾಗಿ 97 ರನ್​ಗಳಿಂದ ಸೋಲಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಗೆಲ್ಲಲು 207 ರನ್ ಗಳಿಸಬೇಕಿದ್ದ ಕೊಹ್ಲಿ ಪಡೆ ಆರಂಭದಲ್ಲೇ ಭಾರಿ ಆಘಾತಕ್ಕೆ ಸಿಲುಕಿತು. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಮಿಂಚಿದ್ದ ದೇವದತ್ ಪಡಿಕ್ಕಲ್, ಜೊಷುವ ಫಿಲಿಪ್ ಮತ್ತು ಕೊಹ್ಲಿ ಮೂರನೇ ಓವರ್ ಮುಗಿಯವದರೊಳಗೆ ಡಗ್ಔಟ್​ಗೆ ವಾಪಸ್ಸಾದರು. ಸ್ಕೋರು 4/3.

ಅದಾದ ನಂತರ ಆರನ್ ಫಿಂಚ್ ಮತ್ತು ಎಬಿ ಡಿ ವಿಲಿಯರ್ಸ್ ನಾಲ್ಕನೇ ವಿಕೆಟ್​ಗೆ 49 ರನ್ ಸೇರಿಸಿ ಪರಿಸ್ಥಿತಿಯನ್ನು ಕೊಂಚ ಸುಧಾರಿಸಿದರು. 21 ಎಸೆತಗಳಲ್ಲಿ 20 ರನ್ ಬಾರಿಸಿದ ಫಿಂಚ್ ಯುವ ಬೌಲರ್ ರವಿ ಬಿಷ್ಣೊಯ್​ಗೆ ವಿಕೆಟ್ ಒಪ್ಪಿಸಿದರು. ಆರ್​ಸಿಬಿಯ ಏಕೈಕ ಆಶಾಕಿರಣವಾಗಿದ್ದ ಡಿ ವಿಲಿಯರ್ಸ್ 28 ರನ್ (18 4X4 1X6) ಗಳಿಸಿ ಸ್ಪಿನ್ನರ್ ಮುರುಗನ್ ಅಶ್ವಿನ್ ಎಸೆತವನ್ನು ಮೈದಾನದಾಚೆ ಕಳಸುವ ಪ್ರಯತ್ನದಲ್ಲಿ ವಿಫಲರಾಗಿ ಸರ್ಫ್ರಾಜ್ ಖಾನ್ ಕ್ಯಾಚಿತ್ತು ಔಟಾದರು. ಅವರ ನಿರ್ಗಮನದ ನಂತರ ಮಿಕ್ಕಿದ್ದೆಲ್ಲ ಕೇವಲ ಔಪಚಾರಿಕತೆಯಾಗಿತ್ತು. ಬೆಂಗಳೂರು 20 ಓವರ್​ಗಳನ್ನು ಪೂರ್ತಿಯಾಗಿ ಆಡಲು ವಿಫಲವಾಗಿ ಕೇವಲ 17 ಓವರ್​ಗಳಲ್ಲಿ 109 ರನ್​ಗಳಿಗೆ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು.

ಅಶ್ವಿನ್ 21 ರನ್​ಗಳಿಗೆ 3 ವಿಕೆಟ್ ಪಡೆದು ಅತ್ಯಂತ ಯಶಸ್ವೀ ಬೌಲರ್ ಎನಿಸಿದರೆ ಬಿಷ್ಣೊಯ್​ ಮತ್ತೊಮ್ಮೆ ಮಿಂಚಿ 32 ರನ್​ಗಳಿಗೆ 3 ವಿಕೆಟ್ ಪಡೆದರು. ಶೆಲ್ಡನ್ ಕಾರ್ಟೆಲ್ 2 ಮತ್ತು ಮೊಹಮ್ಮದ್ ಶಮಿ 1 ವಿಕೆಟ್ ಪಡೆದರು.

ಇದಕ್ಕೆ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಕಳಿಸಲ್ಪಟ್ಟ ಪಂಜಾಬ್​ಗೆ ನಾಯಕ ರಾಹುಲ್ ಮತ್ತು ಮಾಯಾಂಕ್ ಅಗರ್​ವಾಲ್ 57 ರನ್​ಗಳ ಉತ್ತಮ ಆರಂಭ ಒದಗಿಸಿದರು. ಮತ್ತೊಂದು ಅರ್ಧ ಶತಕ ಬಾರಿಸುವ ನಿರೀಕ್ಷೆ ಹುಟ್ಟಿಸಿದ್ದ ಅಗರ್​ವಾಲ್ (26 20 4X4) ಯುಜ್ವೇಂದ್ರ ಚಹಲ್ ಮೊದಲ ಓವರ್​ನಲ್ಲಿ ಚೆಂಡಿನ ಸ್ಪಿನ್ ಗುರುತಿಸಲಾಗದೆ ಬೋಲ್ಡ್ ಆದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸಿಗೆ ಬಂದ ನಿಕೊಲಾಸ್ ಪೂರನ್ (17 18 1X4 ) ಹೆಚ್ಚಿನದೇನೂ ಸಾಧಿಸಲಿಲ್ಲವಾದರೂ ಎರಡನೇ ವಿಕೆಟ್​ಗೆ ರಾಹುಲ್​ರೊಂದಿಗೆ 57 ರನ್ ಸೇರಿಸಿದರು.

ರಾಹುಲ್ ಅವರ ಬ್ಯಾಟಿಂಗ್ ಆಕ್ರಮಣಕಾರಿ ಮತ್ತು ಮನಮೋಹಕವಾಗಿತ್ತು, ಶಾಟ್ ಸೆಲೆಕ್ಷನ್​ನಲ್ಲಿ ಅವರು ಎಂಥ ನೈಪುಣ್ಯತೆ ಮೆರೆದರೆಂದರೆ ಒಂದು ಹೊಡೆತವೂ ಸ್ಲಾಗ್ ಅನಿಸಲಿಲ್ಲ. ಎಲ್ಲವೂ ಪರಿಪೂರ್ಣ ಕ್ರಿಕೆಟಿಂಗ್ ಹೊಡೆತಗಳಾಗಿದ್ದವು. ಅವರ ಮೊದಲ ಅರ್ಧ ಶತಕ 38 ಎಸೆತಗಳಲ್ಲಿ ಬಂದರೆ ಎರಡನೆಯದ್ದು ಕೇವಲ 24 ಎಸೆತಗಳಲ್ಲಿ ಬಂತು. ಅಂದರೆ ಶತಕವನ್ನು 62 ಎಸೆತಗಳಲ್ಲಿ ಪೂರೈಸಿದರು. ನಂತರದ 32 ರನ್​ಗಳು ಕೇವಲ 7 ಎಸೆತಗಳಲ್ಲಿ ಬಂದವು. ರಾಹುಲ್ ಮತ್ತು ಇನ್ನೊಬ್ಬ ಕನ್ನಡಿಗ ಕರುಣ್ ನಾಯರ್ ಕೊನೆಯ ಮೂರು ಓವರ್​ಗಳಲ್ಲಿ ಬರೋಬ್ಬರಿ 60 ರನ್ ಚಚ್ಚಿದರು. 132 ರನ್​ಗಳೊಂದಿಗೆ ಅಜೇಯರಾಗುಳಿದ ರಾಹುಲ್ 14 ಬೌಂಡರಿ ಮತ್ತು 7 ಸಿಕ್ಸರ್​ಗಳನ್ನು ಬಾರಿಸಿದರು. ಅವರ ಹೊಡೆತಗಳನ್ನು ಮನಸಾರೆ ಆನಂದಿಸುತ್ತಿದ್ದ ಪಂಜಾಬ್ ಫ್ರಾಂಚೈಸಿ ಮಾಲೀಕರಲ್ಲೊಬ್ಬರಾಗಿರುವ ಪ್ರೀಟಿ ಜಿಂಟಾ ಎದ್ದು ನಿಂತು ಚಪ್ಪಾಳೆ ತಟ್ಟುತ್ತಿದ್ದ ದೃಶ್ಯ ಕೂಡ ರಾಹುಲ್​ರ ಬ್ಯಾಟಿಂಗ್​ನಂತೆಯೇ ಸುಂದರವಾಗಿತ್ತು. ಅವರು ಪಂದ್ಯದ ವ್ಯಕ್ತಿ ಪ್ರಶಸ್ತಿಗೆ ಪಾತ್ರರಾಗಿದ್ದು ಆಶ್ಚರ್ಯವೇನೂ ಅಲ್ಲ.   

ಅಂತಿಮವಾಗಿ ಪಂಜಾಬ್ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ಗೆ 206 ರನ್ ಕಲೆ ಹಾಕಿತು. ಬೆಂಗಳೂರು ಪರ ಶಿವಂ ದುಬೆ 33 ರನ್ ನೀಡಿ 2 ವಿಕೆಟ್ ಪಡೆದರೆ, 1 ವಿಕೆಟ್ ಪಡೆದ ಯುಜ್ವೇಂದ್ರ ಚಹಲ್ ತನ್ನ 4 ಓವರ್​ಗಳಲ್ಲಿ ಕೇವಲ 25 ರನ್ ನೀಡಿ ಮಿತವ್ಯಯಿ ಎನಿಸಿದರು