ಮೊಹಮ್ಮದ್ ಸಿರಾಜ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಲಿದ್ದಾರೆ. ಈ ಬಗ್ಗೆ ಮೊಹಮ್ಮದ್ ಸಿರಾಜ್ ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ನಡುವೆ ವಿರಾಟ್ ಕೊಹ್ಲಿ ಎದುರು ಬೌಲಿಂಗ್ ಮಾಡಲು ಸಾಧ್ಯವಾಗದ ಕಾರಣ ಮೊಹಮ್ಮದ್ ಸಿರಾಜ್ ಆರ್‌ಸಿಬಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅನೇಕ ಬಳಕೆದಾರರು ಈ ಪೋಸ್ಟ್ ಅನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು Avirat18 ಅವರು ವೈರಲ್ ಪೋಸ್ಟ್ ಅನ್ನು ಹಂಚಿಕೊಂಡು, ‘‘ಐಪಿಎಲ್ 2025 ರಲ್ಲಿ ಆರ್‌ಸಿಬಿ ವಿರುದ್ಧ ಎರಡು ಪಂದ್ಯಗಳನ್ನು ಆಡಲು ನನಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ಆ ಪಂದ್ಯದಲ್ಲಿ ನಾನು ವಿರಾಟ್ ಭಾಯ್ ಅವರ ಮುಂದೆ ಬೌಲಿಂಗ್ ಮಾಡಬೇಕಾಗುತ್ತದೆ. ನನಗೆ ಆ ರೀತಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ವೈರಲ್ ಹಕ್ಕು ಸುಳ್ಳು ಎಂದು ಕಂಡುಬಂದಿದೆ. ಮೊಹಮ್ಮದ್ ಸಿರಾಜ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಹೇಳಿಕೆ ಹುಸಿಯಾಗಿದೆ. ವಾಸ್ತವವಾಗಿ ಸಿರಾಜ್ ಅಂತಹ ಯಾವುದೇ ಹೇಳಿಕೆ ನೀಡಿಲ್ಲ. ಮೊಹಮ್ಮದ್ ಸಿರಾಜ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕುರಿತು ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರಷ್ಟೆ.
ವೈರಲ್ ಕ್ಲೈಮ್‌ನ ಸತ್ಯವನ್ನು ತಿಳಿಯಲು, ನಾವು ಸಂಬಂಧಿತ ಕೀವರ್ಡ್‌ಗಳೊಂದಿಗೆ ಗೂಗಲ್ ನಲ್ಲಿ ಹುಡುಕಿದ್ದೇವೆ. ಆದರೆ, ಸಿರಾಜ್ ಅವರ ಈ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮಾಧ್ಯಮ ವರದಿಯು ನಮಗೆ ಕಂಡುಬಂದಿಲ್ಲ. ಮೊಹಮ್ಮದ್ ಸಿರಾಜ್ ಅಂತಹ ಯಾವುದೇ ಹೇಳಿಕೆ ನೀಡಿದ್ದರೆ ಅದು ಹೆಡ್ ಲೈನ್ ಆಗುತ್ತಿತ್ತು. ಆದರೆ ಅಂತಹ ಯಾವುದೇ ಸುದ್ದಿ ಅಥವಾ ಪೋಸ್ಟ್ ನಮಗೆ ಕಂಡುಬಂದಿಲ್ಲ.
ತನಿಖೆಯನ್ನು ಮುಂದಕ್ಕೆ ತೆಗೆದುಕೊಂಡು, ನಾವು ಮೊಹಮ್ಮದ್ ಸಿರಾಜ್ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಅನ್ನು ಹುಡುಕಿದ್ದೇವೆ. ಇಲ್ಲಿಯೂ ನಮಗೆ ವೈರಲ್ ಕ್ಲೈಮ್‌ಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಕಂಡುಬಂದಿಲ್ಲ. ಆದರೆ, ನಾವು 26 ನವೆಂಬರ್ 2024 ರಂದು ಮೊಹಮ್ಮದ್ ಸಿರಾಜ್ ಅವರ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಒಂದನ್ನು ಕಂಡುಕೊಂಡಿದ್ದೇವೆ. ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಅವರು ಆರ್ಸಿಬಿನಲ್ಲಿ ತಮ್ಮ ಪ್ರಯಾಣದ ಬಗ್ಗೆ ಹೇಳಿದ್ದಾರೆ. ಪೋಸ್ಟ್‌ನಲ್ಲಿ ಅವರು ತಮ್ಮ ಅಭಿಮಾನಿಗಳು ಮತ್ತು ತಂಡಕ್ಕೆ ಧನ್ಯವಾದ ಹೇಳಿದ್ದಾರೆ.
‘‘ನನ್ನ ಪ್ರೀತಿಯ ಆರ್‌ಸಿಬಿಗೆ, ಆರ್‌ಸಿಬಿ ಜೊತೆಗಿನ 7 ವರ್ಷಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ದಿನಗಳು. ಆರ್‌ಸಿಬಿ ಶರ್ಟ್‌ನಲ್ಲಿ ನನ್ನ ಸಮಯವನ್ನು ಹಿಂತಿರುಗಿ ನೋಡಿದಾಗ ನನ್ನ ಹೃದಯವು ಕೃತಜ್ಞತೆ, ಪ್ರೀತಿ ಮತ್ತು ಭಾವುಕತೆಯಿಂದ ತುಂಬಿದೆ. ನಾನು ಮೊದಲು RCB ಜರ್ಸಿಯನ್ನು ಧರಿಸಿದಾಗ, ಇಂತಹದೊಂದು ಬಂಧ ರೂಪುಗೊಳ್ಳಲಿದೆ ಎಂದು ಭಾವಿಸಿರಲಿಲ್ಲ. ಅಲ್ಲದೆ ನಾನು RCB ಪರ ಕಣಕ್ಕಿಳಿದು ಎಸೆದ ಮೊದಲ ಎಸೆತ, ತೆಗೆದುಕೊಂಡ ಪ್ರತಿ ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಹಂಚಿಕೊಂಡ ಪ್ರತಿ ಕ್ಷಣ ಎಲ್ಲವೂ ಅತ್ಯದ್ಭುತ. ಇದರ ನಡುವೆ ಕೆಲ ಏರಿಳಿತಗಳಿವೆ. ಆದರೆ ಎಲ್ಲದರಲ್ಲೂ ಒಂದು ವಿಷಯ ಸ್ಥಿರವಾಗಿತ್ತು. ಅದುವೇ ನಿಮ್ಮ ಅಚಲ ಬೆಂಬಲ. RCB ನನ್ನ ಪಾಲಿಗೆ ಕೇವಲ ಫ್ರಾಂಚೈಸಿ ಆಗಿರಲಿಲ್ಲ, ಅದಕ್ಕಿಂತ ಹೆಚ್ಚು. ಅದೊಂದು ಭಾವನೆ, ಹೃದಯ ಬಡಿತ, ಮನೆಯಂತೆ ಭಾಸವಾಗುವ ಕುಟುಂಬ.
ಪಂದ್ಯಗಳಲ್ಲಿ ಸೋತಾಗ ಪದಗಳಲ್ಲಿ ವಿವರಿಸಲಾಗದಷ್ಟು ನೋವಿನಲ್ಲಿ ರಾತ್ರಿಗಳನ್ನು ಕಳೆದಿದ್ದೇನೆ. ಆದರೆ ಸ್ಟ್ಯಾಂಡ್‌ಗಳಲ್ಲಿ ನಿಮ್ಮ ಧ್ವನಿಗಳು, ಸಾಮಾಜಿಕ ಮಾಧ್ಯಮದಲ್ಲಿನ ನಿಮ್ಮ ಸಂದೇಶಗಳು, ನಿಮ್ಮ ನಿರಂತರ ನಂಬಿಕೆ ನನ್ನನ್ನು ಹೊಸ ಉತ್ಸಾಹದಿಂದ ಆಡುವಂತೆ ಮಾಡುತ್ತಿತ್ತು. RCB ಅಭಿಮಾನಿಗಳಾದ ನೀವು ಈ ತಂಡದ ಆತ್ಮ. ನೀವು ತರುವ ಶಕ್ತಿ, ನೀವು ನೀಡುವ ಪ್ರೀತಿ, ನೀವು ತೋರಿಸುವ ನಂಬಿಕೆ, ಇದಕ್ಕೆ ಸಾಟಿಯಿಲ್ಲ. ನಾವು ಸೋತಾಗ, ನೀವು ಕಣ್ಣೀರು ಹಾಕುವುದನ್ನು ನಾನು ನೋಡಿದ್ದೇನೆ. ಆರ್‌ಸಿಬಿ ಅಭಿಮಾನಿಗಳೇ ನಿಮ್ಮಂತಹ ಫ್ಯಾನ್ಸ್ ಈ ಜಗತ್ತಿನಲ್ಲಿ ಯಾರೂ ಇಲ್ಲ. ನಿಮ್ಮ ಪ್ರೀತಿ, ನಿಮ್ಮ ಸಮರ್ಪಣೆ, ನಿಮ್ಮ ನಿಷ್ಠೆ-ಇದು ನನ್ನ ಜೀವನದುದ್ದಕ್ಕೂ ನಾನು ಪಾಲಿಸುತ್ತೇನೆ. ನಾನು ಈಗ ನನ್ನ ವೃತ್ತಿಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟರೂ, ಆರ್‌ಸಿಬಿ ಯಾವಾಗಲೂ ನನ್ನ ಹೃದಯದ ಭಾಗದಲ್ಲಿರುತ್ತದೆ. ಇದು ವಿದಾಯ ಅಲ್ಲ – ಇದು ನನ್ನ ಧನ್ಯವಾದಗಳು.’’ ಎಂದು ಬರೆದುಕೊಂಡಿದ್ದರು.
ಟಿವಿ9 ಕನ್ನಡ ವೆಬ್‌ಸೈಟ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರು ಹಂಚಿಕೊಂಡ ಪೋಸ್ಟ್‌ಗೆ ಸಂಬಂಧಿಸಿದ ಸುದ್ದಿಯನ್ನೂ ನಾವು ಕಂಡುಕೊಂಡಿದ್ದೇವೆ. 27 ನವೆಂಬರ್ 2024 ರಂದು ಪ್ರಕಟವಾದ ಸುದ್ದಿಯಲ್ಲಿಯೂ ಸಹ, ವೈರಲ್ ಹಕ್ಕುಗೆ ಸಂಬಂಧಿಸಿದ ಯಾವುದೇ ಮಾಹಿತಿ ಕಂಡುಬಂದಿಲ್ಲ.
ಇಡೀ ವಿಶ್ವದಲ್ಲೇ ನಿಮ್ಮಂತಹ ಅಭಿಮಾನಿಗಳಿಲ್ಲ: RCB ಅಭಿಮಾನಿಗಳಿಗೆ ಸಿರಾಜ್ ಭಾವನಾತ್ಮಕ ಪತ್ರ
ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಮೊಹಮ್ಮದ್ ಸಿರಾಜ್ ಹೆಸರಿನಲ್ಲಿ ವೈರಲ್ ಆಪಾದಿತ ಹೇಳಿಕೆ ಸುಳ್ಳು ಎಂದು ಕಂಡುಬಂದಿದೆ. ಸಿರಾಜ್ ಅವರು ಖಂಡಿತವಾಗಿಯೂ ಆರ್‌ಸಿಬಿ ಕುರಿತು ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಆದರೆ ವೈರಲ್ ಹೇಳಿಕೆಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಮಾಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಜನರು ತಪ್ಪು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Mon, 16 December 24