ವಿಶ್ವ ದಾಖಲೆಯ ಶತಕ ಸಿಡಿಸಿದ ಫಾಫ್ ಡುಪ್ಲೆಸಿಸ್
Faf Du Plessis Records: ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಯಾಟಲ್ ಓರ್ಕಾಸ್ ತಂಡವು 20 ಓವರ್ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿಯನ್ನು ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ಫಾಫ್ ಡುಪ್ಲೆಸಿಸ್ ಅವರ ಶತಕದ ನೆರವಿನೊಂದಿಗೆ 18.3 ಓವರ್ಗಳಲ್ಲಿ ಚೇಸ್ ಮಾಡಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Updated on: Jun 20, 2026 | 8:08 AM

ಟಿ20 ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ ದಾಂಡಿಗ ಫಾಫ್ ಡುಪ್ಲೆಸಿಸ್ (Faf Du Plessis) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಸಹ 41ನೇ ವಯಸ್ಸಿನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಎಂಬುದು ವಿಶೇಷ. ಅಲ್ಲದೆ ಈ ಶತಕದೊಂದಿಗೆ ಡುಪ್ಲೆಸಿಸ್ ಪೌಲ್ ಕಾಲಿಂಗ್ವುಡ್ ಅವರ ವರ್ಲ್ಡ್ ರೆಕಾರ್ಡ್ ಅನ್ನು ಅಳಿಸಿ ಹಾಕಿದ್ದಾರೆ. (PC: MLC)

ಡಲ್ಲಾಸ್ನಲ್ಲಿ ನಡೆದ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ ನಾಲ್ಕನೇ ಸೀಸನ್ನ ಮೊದಲ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಹಾಗೂ ಸಿಯಾಟಲ್ ಓರ್ಕಾಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಸಿಯಾಟಲ್ ಓರ್ಕಾಸ್ ಪರ ಟಿಮ್ ಸೈಫರ್ಟ್ (104) ಸೆಂಚುರಿ ಸಿಡಿಸಿದ್ದರು. ಈ ಸೆಂಚುರಿ ನೆರವಿನೊಂದಿಗೆ ಸಿಯಾಟಲ್ ಓರ್ಕಾಸ್ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 220 ರನ್ ಕಲೆಹಾಕಿತು. (PC: MLC)

221 ರನ್ಗಳ ಕಠಿಣ ಗುರಿ ಪಡೆದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಫಾಫ್ ಡುಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಡುಪ್ಲೆಸಿಸ್ ಸಿಕ್ಸ್-ಫೋರ್ಗಳೊಂದಿಗೆ ಅಬ್ಬರಿಸಿದರು. ಪರಿಣಾಮ ಫಾಫ್ ಬ್ಯಾಟ್ನಿಂದ ಕೇವಲ 45 ಎಸೆತಗಳಲ್ಲಿ ಶತಕ ಮೂಡಿಬಂತು. (PC: MLC)

ಈ ಶತಕದೊಂದಿಗೆ ಫಾಫ್ ಡುಪ್ಲೆಸಿಸ್ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸೆಂಚುರಿ ಸಿಡಿಸಿದ ಅತ್ಯಂತ ಹಿರಿಯ ಬ್ಯಾಟರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಇಂಗ್ಲೆಂಡ್ನ ಪೌಲ್ ಕಾಲಿಂಗ್ವುಡ್ ಹೆಸರಿನಲ್ಲಿತ್ತು. (PC: MLC)

2017 ರಲ್ಲಿ ಕೌಂಟಿ ಕ್ರಿಕೆಟ್ನಲ್ಲಿ ಡರ್ಹಾಮ್ ತಂಡದ ಪರ ಕಣಕ್ಕಿಳಿದಿದ್ದ ಪೌಲ್ ಕಾಲಿಂಗ್ವುಡ್ ಭರ್ಜರಿ ಸೆಂಚುರಿ ಸಿಡಿಸಿದ್ದರು. ಈ ವೇಳೆ ಅವರ ವಯಸ್ಸು 41 ವರ್ಷ, 65 ದಿನಗಳಾಗಿತ್ತು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಅತ್ಯಂತ ಹಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. (PC: SportsInfo)

ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಫಾಫ್ ಡುಪ್ಲೆಸಿಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸಿಯಾಟಲ್ ಓರ್ಕಾಸ್ ವಿರುದ್ಧ ಓಪನರ್ ಆಗಿ ಕಣಕ್ಕಿಳಿದ ಡುಪ್ಲೆಸಿಸ್ ಕೇವಲ 52 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 9 ಫೋರ್ಗಳೊಂದಿಗೆ ಅಜೇಯ 113 ರನ್ ಬಾರಿಸಿದ್ದಾರೆ. ಈ ಮೂಲಕ 41 ವರ್ಷ, 340 ದಿನಗಳ ವಯಸ್ಸಿನ ಫಾಫ್ ಡುಪ್ಲೆಸಿಸ್ ಟಿ20 ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಅತ್ಯಂತ ಹಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: MLC)




