
ಪೋರ್ಚುಗೀಸ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್ ಲೋಕದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟುಹಾಕಿದ್ದಾರೆ. ಲಕ್ಷ ಚಂದಾದಾರರನ್ನು ಪಡೆಯಲು ತಿಂಗಳು ಗಟ್ಟಲೇ ಕಾಯಬೇಕಾದ ಸನ್ನಿವೇಶದ ಹೊರತಾಗಿಯೂ ಈ ಫುಟ್ಬಾಲ್ ಲೆಜೆಂಡ್ ಕೆಲವೇ ಕೆಲವು ಗಂಟೆಗಳಲ್ಲಿ ಬರೋಬ್ಬರಿ 30 ಮಿಲಿಯನ್ಗೂ ಅಂದರೆ 3 ಕೋಟಿಗೂ ಅಧಿಕ ಸಂಖ್ಯೆಯ ಚಂದಾದಾರರನ್ನು ಪಡೆದುಕೊಂಡಿದ್ದಾರೆ. ವಾಸ್ತವವಾಗಿ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ‘ಯುಆರ್ ಕ್ರಿಸ್ಟಿಯಾನೋ’ ಎಂಬ ಯೂಟ್ಯೂಬ್ ಚಾನೆಲ್ವೊಂದನ್ನು ಆರಂಭಿಸಿದ್ದಾರೆ. ಈ ಯೂಟ್ಯೂಬ್ ಚಾನೆಲ್ ಆರಂಭಿಸಿ ಕೆಲವೇ ಗಂಟೆಗಳಾಗಿದ್ದರೂ, ಚಂದಾದಾರರ ವಿಷಯದಲ್ಲಿ ರೊನಾಲ್ಡೊ ಒಂದರ ಹಿಂದೆ ಒಂದರಂತೆ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. ಇದರ ಜೊತೆಗೆ ರೊನಾಲ್ಡೊ ಇದೀಗ ಯೂಟ್ಯೂಬ್‌ನಲ್ಲಿ ಮಿಸ್ಟರ್ ಬೀಸ್ಟ್ ಅವರ ದೊಡ್ಡ ದಾಖಲೆಯನ್ನು ಸಹ ಮುರಿದಿದ್ದಾರೆ.
ರೊನಾಲ್ಡೊ ಆಗಸ್ಟ್ 21 ರಂದು ಅಂದರೆ ಕೇವಲ 2 ದಿನಗಳ ಹಿಂದೆ ‘ಯುಆರ್ ಕ್ರಿಸ್ಟಿಯಾನೋ’ ಎಂಬ ಹೆಸರಿನ ಅಧಿಕೃತ ಯೂಟ್ಯೂಬ್ ಚಾನೆಲ್ ಆರಂಭಿಸಿದರು. ಈ ಸುದ್ದಿ ಎಷ್ಟು ವೇಗವಾಗಿ ಹಬ್ಬಿತೋ, ಅಷ್ಟೇ ವೇಗವಾಗಿ ಈ ಚಾನೆಲ್ಗೆ ಚಂದಾದಾರರಾಗುವವರ ಸಂಖ್ಯೆಯೂ ಹೆಚ್ಚಾಯಿತು. ಕೇವಲ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ರೊನಾಲ್ಡೊ ಯೂಟ್ಯೂಬ್ ಚಾನೆಲ್ 20 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದ್ದು, ಈ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಇಷ್ಟು ಸಂಖ್ಯೆಯ ಚಂದಾದಾರರನ್ನು ಪಡೆದ ಮೊದಲ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಪಾತ್ರರಾಗಿದ್ದಾರೆ.
ಯೂಟ್ಯೂಬ್‌ನಲ್ಲಿ ವೇಗವಾಗಿ 20 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದ ದಾಖಲೆಯು ಈ ಹಿಂದೆ ಮಿಸ್ಟರ್ ಬೀಸ್ಟ್ ಹೆಸರಿನಲ್ಲಿತ್ತು. ಮಿಸ್ಟರ್ ಬೀಸ್ಟ್ ಎಂದೇ ಖ್ಯಾತರಾಗಿರುವ ಜಿಮ್ಮಿ ಡೊನಾಲ್ಡ್ ಸನ್ ಅವರು ತಮ್ಮ ಯೂಟ್ಯೂಬ್ ಚಾನೆಲ್ ಆರಂಭಿಸಿದ ಎರಡೇ ವರ್ಷಗಳಲ್ಲಿ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಇದೀಗ ಈ ವಿಚಾರದಲ್ಲಿ ರೊನಾಲ್ಡೊ, ಜಿಮ್ಮಿ ಡೊನಾಲ್ಡ್ ಸನ್ ಅವರನ್ನು ಹಿಂದಿಕ್ಕಿದ್ದಾರೆ.
ಇಷ್ಟೇ ಅಲ್ಲದೆ ರೊನಾಲ್ಡೊ, ಯೂಟ್ಯೂಬ್ ಚಾನೆಲ್ ಆರಂಭಿಸಿದ ಕೇವಲ 22 ನಿಮಿಷಗಳಲ್ಲಿ ಬೆಳ್ಳಿ, 90 ನಿಮಿಷಗಳಲ್ಲಿ ಗೋಲ್ಡನ್ ಮತ್ತು 12 ಗಂಟೆಗಳಲ್ಲಿ ಡೈಮಂಡ್ ಪ್ಲೇ ಬಟನ್ ಪಡೆದಿದ್ದಾರೆ. ವಾಸ್ತವವಾಗಿ ಒಬ್ಬ ಯೂಟ್ಯೂಬರ್ 1 ಲಕ್ಷ ಚಂದಾದಾರರನ್ನು ಪಡೆದರೆ ಸಿಲ್ವರ್ ಪ್ಲೇ ಬಟನ್, 1 ಮಿಲಿಯನ್ ಅಂದರೆ 10 ಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಪಡೆದರೆ ಗೋಲ್ಡ್ ಪ್ಲೇ ಬಟನ್ ಮತ್ತು 10 ಮಿಲಿಯನ್ ಅಂದರೆ 1 ಕೋಟಿ ಸಬ್‌ಸ್ಕ್ರೈಬರ್‌ಗಳನ್ನು ಪಡೆದರೆ ಡೈಮಂಡ್ ಪ್ಲೇ ಬಟನ್ ಅನ್ನು ಯೂಟ್ಯೂಬ್ನಿಂದ ಪ್ರಶಸ್ತಿ ರೂಪದಲ್ಲಿ ನೀಡಲಾಗುತ್ತದೆ.
ಇದೀಗ ರೊನಾಲ್ಡೊ, ಕೇವಲ 12 ಗಂಟೆಗಳಲ್ಲಿ ಯೂಟ್ಯೂಬ್ ನೀಡುವ ಈ ಮೂರು ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಯೂಟ್ಯೂಬ್ನಿಂದ ಈ ಪ್ರಶಸ್ತಿ ಸಿಕ್ಕಿದನ್ನು ರೊನಾಲ್ಡೊ ತಮ್ಮ ಪುತ್ರಿಯರೊಂದಿಗೆ ಹಂಚಿಕೊಂಡಿದ್ದು, ಇದರ ವಿಡಿಯೋವನ್ನು ರೊನಾಲ್ಡೊ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರೊನಾಲ್ಡೊ ಅವರ ಚಾನೆಲ್‌ನಲ್ಲಿ ಇದುವರೆಗೆ 19 ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ.
A present for my family ❤️ Thank you to all the SIUUUbscribers! ➡️ https://t.co/d6RaDnAgEW pic.twitter.com/keWtHU64d7
— Cristiano Ronaldo (@Cristiano) August 21, 2024
ವರದಿಗಳ ಪ್ರಕಾರ, ಯೂಟ್ಯೂಬರ್‌ಗಳಿಗೆ 1 ಮಿಲಿಯನ್ (10 ಲಕ್ಷ) ವೀಕ್ಷಣೆಗಾಗಿ ಸುಮಾರು 6 ಸಾವಿರ ಡಾಲರ್ (ಸುಮಾರು 5 ಲಕ್ಷ ರೂ.) ನೀಡಲಾಗುತ್ತದೆ. ಇದರರ್ಥ ಒಂದು ದಿನದಲ್ಲಿ ರೊನಾಲ್ಡೊ ಸುಮಾರು $300,000 ಅಂದರೆ ರೂ.2.51 ಕೋಟಿ ರೂಗಳನ್ನು ಸಂಪಾಧಿಸಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:07 pm, Fri, 23 August 24