- Kannada News Photo gallery Cricket photos Dinesh Karthik apologises for ignoring dhoni for his all-time India XI kannada news
Dinesh Karthik: ‘ದೊಡ್ಡ ತಪ್ಪಾಗಿದೆ ಕ್ಷಮಿಸಿ’; ಕೈಮುಗಿದ ಕ್ಷಮೆಯಾಚಿಸಿದ ದಿನೇಶ್ ಕಾರ್ತಿಕ್! ಕಾರಣವೇನು?
Dinesh Karthik: ದಿನೇಶ್ ಕಾರ್ತಿಕ್ ಹೆಸರಿಸಿದ ತಮ್ಮ ಅತ್ಯುತ್ತಮ ಸಾರ್ವಕಾಲಿಕ ಇಂಡಿಯಾ ತಂಡದಲ್ಲಿ ಧೋನಿಯನ್ನು ಆಯ್ಕೆ ಮಾಡಿರಲಿಲ್ಲ. ಧೋನಿಯನ್ನು ನಿರ್ಲಕ್ಷಿಸಿದ ಕಾರ್ತಿಕ್ ನಿರ್ಧಾರ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿತು. ಎಂಎಸ್ ಧೋನಿಯನ್ನು ತಂಡದಲ್ಲಿ ಆಯ್ಕೆ ಮಾಡದಿದಕ್ಕಾಗಿ ದಿನೇಶ್ ಕಾರ್ತಿಕ್ ಸಾಕಷ್ಟು ಟೀಕೆಗೊಳಗಾಗಿದ್ದರು.
Updated on: Aug 23, 2024 | 6:27 PM

ಟೀಂ ಇಂಡಿಯಾದ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದು, ಇದೀಗ ವಿದೇಶಿ ಟಿ20 ಲೀಗ್ನತ್ತ ಮುಖಮಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಆಡಲಿರುವ ಎಸ್ಎ ಟಿ20 ಲೀಗ್ನಲ್ಲಿ ಕಾರ್ತಿಕ್ ಪಾರ್ಲ್ ರಾಯಲ್ಸ್ ತಂಡದ ಪರ ಕಣಕ್ಕಿಳಿಯಲ್ಲಿದ್ದಾರೆ. ಈ ನಡುವೆ ಕಾರ್ತಿಕ್ ತಾವು ಮಾಡಿಕೊಂಡ ದೊಡ್ಡ ಎಡವಟ್ಟಿನಿಂದಾಗಿ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ವಾಸ್ತವವಾಗಿ ದಿನೇಶ್ ಕಾರ್ತಿಕ್ ಕಳೆದ ವಾರ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಅತ್ಯುತ್ತಮ ಆಲ್ ಫಾರ್ಮ್ಯಾಟ್ ಇಂಡಿಯಾ XI ಅನ್ನು ಆಯ್ಕೆ ಮಾಡಿದ್ದರು. ಆದರೆ ಈ ಸಂದರ್ಶನದ ಎಪಿಸೋಡ್ ಪ್ರಕಟವಾದ ಬಳಿಕ ಕಾರ್ತಿಕ್ ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೋಪಕ್ಕೆ ಗುರಿಯಾಗಬೇಕಾಗಿದೆ. ತನ್ನಿಂದಾದ ಪ್ರಮಾದದಿಂದ ಇದೀಗ ಎಚ್ಚೆತ್ತುಕೊಂಡಿರುವ ಡಿಕೆ, ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದಾರೆ.

ಅಷ್ಟಕ್ಕೂ ಕಾರ್ತಿಕ್ ಏಕೆ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ ಎಂಬುದನ್ನು ನೋಡುವುದಾದರೆ.. ಡಿಕೆ ಹೆಸರಿಸಿದ ತಮ್ಮ ಅತ್ಯುತ್ತಮ ಆಲ್ ಫಾರ್ಮ್ಯಾಟ್ ಇಂಡಿಯಾ ತಂಡದಲ್ಲಿ ಧೋನಿಯನ್ನು ಆಯ್ಕೆ ಮಾಡಿಲ್ಲ. ಧೋನಿಯನ್ನು ನಿರ್ಲಕ್ಷಿಸಿದ ಕಾರ್ತಿಕ್ ನಿರ್ಧಾರವು ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿತು. ಎಂಎಸ್ ಧೋನಿಯನ್ನು ತಂಡದಲ್ಲಿ ಆಯ್ಕೆ ಮಾಡದಿದಕ್ಕಾಗಿ ದಿನೇಶ್ ಕಾರ್ತಿಕ್ ಸಾಕಷ್ಟು ಟೀಕೆಗೊಳಗಾಗಿದ್ದರು.

ಇದೀಗ ತನ್ನಿಂದಾಗಿರುವ ತಪ್ಪಿಗೆ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿ, ಈ ಘಟನೆಯ ಬಗ್ಗೆ ವಿವರಣೆ ನೀಡಿರುವ ಡಿಕೆ, ‘ತಂಡವನ್ನು ಆಯ್ಕೆ ಮಾಡುವಾಗ ನಾನು ಧೋನಿ ಹೆಸರನ್ನು ಸಂಪೂರ್ಣವಾಗಿ ಮರೆತಿದ್ದೇನೆ. ಆದರೆ ಈ ವೀಡಿಯೋ ಲೈವ್ ಆದ ನಂತರವೇ ಅದು ನನ್ನ ಅರಿವಿಗೆ ಬಂತು. ಧೋನಿ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಹೀಗಾಗಿ ಧೋನಿಯನ್ನು ತಂಡಕ್ಕೆ ಸೇರಿಸಿಕೊಳ್ಳದಿದ್ದಕ್ಕೆ ನನ್ನನ್ನು ಕ್ಷಮಿಸಿ ಎಂದು ಡಿಕೆ ಅಭಿಮಾನಿಗಳ ಬಳಿ ಮೊರೆ ಇಟ್ಟಿದ್ದಾರೆ.

ಮುಂದುವರೆದು ಮಾತನಾಡಿದ ಡಿಕೆ, ನಾನು ಆಯ್ಕೆ ಮಾಡಿದ ತಂಡದಲ್ಲಿ ರಾಹುಲ್ ದ್ರಾವಿಡ್ ಇದ್ದಾರೆ. ಹೀಗಾಗಿ ಹಲವರು ನಾನು ದ್ರಾವಿಡ್ ಅವರನ್ನು ವಿಕೆಟ್‌ಕೀಪರ್ ಆಗಿ ಆಯ್ಕೆ ಮಾಡಿದ್ದೇನೆ ಎಂದುಕೊಂಡಿದ್ದಾರೆ. ಆದರೆ ವಾಸ್ತವವಾಗಿ, ನಾನು ರಾಹುಲ್ ದ್ರಾವಿಡ್ ಅವರನ್ನು ವಿಕೆಟ್ ಕೀಪರ್ ಆಗಿ ಆಯ್ಕೆ ಮಾಡಿರಲಿಲ್ಲ.

ವಿಕೆಟ್ ಕೀಪರ್ ಆಗಿರುವ ನಾನು ನನ್ನ ತಂಡದಲ್ಲಿ ವಿಕೆಟ್ ಕೀಪರ್ ಅನ್ನು ಆಯ್ಕೆ ಮಾಡಲು ಮರೆತಿದ್ದೇನೆ. ಇದು ದೊಡ್ಡ ತಪ್ಪು. ಇಂತಹ ತಪ್ಪನ್ನು ನಾನು ಮಾಡಬಾರದಿತ್ತು. ಧೋನಿ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು, ಅವರು ಭಾರತದಲ್ಲಿ ಮಾತ್ರವಲ್ಲದೆ ಯಾವುದೇ ಸ್ವರೂಪದಲ್ಲಿ ಆಡಲು ಅರ್ಹರು. ಇದೀಗ ನನ್ನ ತಪ್ಪನ್ನು ನಾನು ಸರಿಪಡಿಸಿಕೊಳ್ಳುತ್ತಿದ್ದು, ನನ್ನ ತಂಡದಲ್ಲಿ ಧೋನಿಯವರನ್ನು 7ನೇ ಕ್ರಮಾಂಕದಲ್ಲಿ ಇರಿಸಿದ್ದು, ತಂಡದ ನಾಯಕತ್ವವನ್ನೂ ಅವರಿಗೆ ವಹಿಸಿದ್ದೇನೆ ಎಂದಿದ್ದಾರೆ.

ಇನ್ನು ಕಾರ್ತಿಕ್ ಅವರ ಸಾರ್ವಕಾಲಿಕ ಭಾರತ ತಂಡದಲ್ಲಿ, ರೋಹಿತ್ ಶರ್ಮಾ ಮತ್ತು ವೀರೇಂದ್ರ ಸೆಹ್ವಾಗ್ ಆರಂಭಿಕರಾಗಿ ಆಯ್ಕೆಯಾಗಿದ್ದರೆ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯನ್ನು ಮಧ್ಯಮ ಕ್ರಮಾಂಕಕ್ಕೆ ಆಯ್ಕೆ ಮಾಡಿದ್ದಾರೆ. ಯುವರಾಜ್ ಸಿಂಗ್ ಮತ್ತು ರವೀಂದ್ರ ಜಡೇಜಾ ಇಬ್ಬರು ಆಲ್‌ರೌಂಡರ್‌ಗಳಾಗಿದ್ದು, ಇಬ್ಬರು ಸ್ಪಿನ್ನರ್‌ಗಳಾಗಿ ರವಿಚಂದ್ರನ್ ಅಶ್ವಿನ್ ಮತ್ತು ಅನಿಲ್ ಕುಂಬ್ಳೆ ಸ್ಥಾನ ಪಡೆದಿದ್ದಾರೆ. ಹಾಗೆಯೇ ವೇಗದ ಬೌಲರ್‌ಗಳ ಕೋಟಾದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಜಹೀರ್ ಖಾನ್ ಸ್ಥಾನ ಪಡೆದಿದ್ದಾರೆ.




