ಆಟಗಾರರ ನಡುವಿನ ಬಾಂಧವ್ಯಗಳು ಮನಸ್ಸಿಗೆ ಮುದ ನೀಡುತ್ತವೆ

|

Updated on: Oct 20, 2020 | 7:00 PM

ಇಂಡಿಯನ್ ಪ್ರಿಮೀಯರ್ ಲೀಗ್, ಪ್ರೇಕ್ಷಕರಿಗೆ ಒದಗಿಸುವ ಕ್ರಿಕೆಟ್ ರಸದೌತಣದ ಜೊತೆ ಹಲವಾರು ಬಾಂಧವ್ಯಗಳಿಗೆ ಸಾಕ್ಷಿಯಾಗಿದೆ. ಭಾರತೀಯ ಮತ್ತು ವಿದೇಶದ ಆಟಗಾರರ ನಡುವೆ ಅವಿನಾಭಾವ ಸಂಬಂಧ ಹುಟ್ಟಲು ಕಾರಣವಾಗಿದೆ. ರಾಯಲ್ ಚಾಲೆಂಜರ್ಸ್ ಟೀಮಿಗೆ ಆಡುವ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾ ಮೂಲದ ಎಬಿ ಡಿ ವಿಲಿಯರ್ಸ್ ಮಧ್ಯೆಯಿರುವ ಸ್ನೇಹ ಮತ್ತು ಪರಸ್ಪರ ಆದರ ನೆನೆಪಿಸಿಕೊಂಡರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಈ ಬಗೆಯ ಸ್ನೇಹದ ಹಲವಾರು ಉದಾಹರಣೆಗಳು ನಮಗೆ ಸಿಗುತ್ತವೆ. ನಿನ್ನೆ ಅಂದರೆ ಸೋಮವಾರದಂದು ಅಬು ಧಾಬಿಯ ಶೇಖ್ ಜಾಯೆದ್ […]

ಆಟಗಾರರ ನಡುವಿನ ಬಾಂಧವ್ಯಗಳು ಮನಸ್ಸಿಗೆ ಮುದ ನೀಡುತ್ತವೆ
Follow us on

ಇಂಡಿಯನ್ ಪ್ರಿಮೀಯರ್ ಲೀಗ್, ಪ್ರೇಕ್ಷಕರಿಗೆ ಒದಗಿಸುವ ಕ್ರಿಕೆಟ್ ರಸದೌತಣದ ಜೊತೆ ಹಲವಾರು ಬಾಂಧವ್ಯಗಳಿಗೆ ಸಾಕ್ಷಿಯಾಗಿದೆ. ಭಾರತೀಯ ಮತ್ತು ವಿದೇಶದ ಆಟಗಾರರ ನಡುವೆ ಅವಿನಾಭಾವ ಸಂಬಂಧ ಹುಟ್ಟಲು ಕಾರಣವಾಗಿದೆ. ರಾಯಲ್ ಚಾಲೆಂಜರ್ಸ್ ಟೀಮಿಗೆ ಆಡುವ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ಆಫ್ರಿಕಾ ಮೂಲದ ಎಬಿ ಡಿ ವಿಲಿಯರ್ಸ್ ಮಧ್ಯೆಯಿರುವ ಸ್ನೇಹ ಮತ್ತು ಪರಸ್ಪರ ಆದರ ನೆನೆಪಿಸಿಕೊಂಡರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ.

ಈ ಬಗೆಯ ಸ್ನೇಹದ ಹಲವಾರು ಉದಾಹರಣೆಗಳು ನಮಗೆ ಸಿಗುತ್ತವೆ. ನಿನ್ನೆ ಅಂದರೆ ಸೋಮವಾರದಂದು ಅಬು ಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಚೆನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಪಂದ್ಯ ಮುಕ್ತಾಯಗೊಂಡ ನಂತರ ನಡೆದ ಘಟನೆಯನ್ನು ನೆನಪಿಗೆ ತಂದುಕೊಳ್ಳಿ. ತಮ್ಮ 200ನೇ ಐಪಿಎಲ್ ಕಾಣಿಸಿಕೊಂಡು ಟೂರ್ನಿಯ ಇತಿಹಾಸದಲ್ಲಿ ಅತಿಹೆಚ್ಚು ಗೇಮ್​ಗಳನ್ನಾಡಿರುವ ಹಿರಿಮೆಗೆ ಪಾತ್ರರಾದ ಚೆನೈ ನಾಯಕ ಮಹೇಂದ್ರಸಿಂಗ್ ಧೋನಿ ಅದೇ ಮ್ಯಾಚ್​ನಲ್ಲಿ ಸಂಜು ಸ್ಯಾಮ್ಸನ್ ನೀಡಿದ ಕ್ಯಾಚನ್ನು ಡೈವ್ ಮಾಡಿ ಅಮೋಘವಾಗಿ ಹಿಡಿದು ಈ ಟೂರ್ನಿಯಲ್ಲಿ ತಮ್ಮ 150ನೇ ಬಲಿ ಪಡೆದರು.

ಜೊಸ್ ಬಟ್ಲರ್ ಅವರ ಉತ್ಕೃಷ್ಟ ಬ್ಯಾಟಿಂಗ್​ನಿಂದ (ಅಜೇಯ 70 ರನ್) ಈ ಪಂದ್ಯವನ್ನು ರಾಯಲ್ಸ್ ಸುಲಭವಾಗಿ 7 ವಿಕೆಟ್​ಗಳಿಂದ ಗೆದ್ದಾಗ ಬಟ್ಲರ್​ಗೆ ಪಂದ್ಯದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಸೂಕ್ತವಾಗಿತ್ತು. ಆದರೆ, ಇಂಗ್ಲೆಂಡ್​ನ ಆಟಗಾರನಿಗೆ ಅಂದು ಮತ್ತೊಂದು ಬಹುಮಾನ ಕೂಡ ಸಿಕ್ಕಿತು. ಈ ಉಡುಗೊರೆ ಅವರಿಗೆ ಎಷ್ಟು ಖುಷಿ ನೀಡಿದೆಯೆಂದರೆ, ಅದರೆ ಇಮೇಜನ್ನು ತಮ್ಮ ಟ್ವಿಟ್ಟರ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿ, ‘ಆಕಾಶದಲ್ಲಿ ಹಾರಾಡುತ್ತಿರುವೆ’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ, ಉಡುಗೊರೆ ಯಾವುದು ಅಂತ ನೀವು ಊಹಿಸಿರಲಿಕ್ಕೂ ಸಾಕು.

ಹೌದು, ತಮ್ಮ 200 ನೇ ಪಂದ್ಯದಲ್ಲಿ ಧರಿಸಿದ್ದ 7 ನಂಬರಿನ ಜೆರ್ಸಿಯನ್ನು ಧೋನಿ, ಬಟ್ಲರ್ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಅದನ್ನು ಪಡೆದ ನಂತರ ಸಂತೋಷದಿಂದ ಕುಣಿದಾಡಿದ ಬಟ್ಲರ್ ಕೊನೆವರೆಗೂ ಅದನ್ನು ಭದ್ರವಾಗಿ ಕಾಪಾಡಿಕೊಳ್ಳುವುದಾಗಿ ಹೇಳಿದ್ದಾರೆ. ಆಟಗಾರರ ನಡವೆ ಹೀಗೆ ಏರ್ಪಡುವ ಬಾಂಧವ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಇಂಥ ಘಟನೆಗಳು ಇತ್ತೀಚಿನ ವರ್ಷಗಳಲ್ಲಿ ಮಾತ್ರ ನಡೆಯುತ್ತಿವೆಯೆಂದು ನೀವು ಭಾವಿಸಿದ್ದರೆ ಅದು ತಪ್ಪು. ಮೊದಲಿನಿಂದಲೂ ಅವು ನಡೆದುಕೊಂಡು ಬರುತ್ತಿವೆ.

ಸುಮಾರು 40 ವರ್ಷಗಳ ಹಿಂದೆ, ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸ ಬಂದಾಗ ಚೆನೈನಲ್ಲಿ ನಡೆಯುತ್ತಿದ್ದ ಟೆಸ್ಟ್​ನಲ್ಲಿ ಭಾರತದ ವಿಖ್ಯಾತ ಆರಂಭ ಆಟಗಾರ ಸುನಿಲ್ ಗವಾಸ್ಕರ್, ಟೆಸ್ಟ್ ಕ್ರಿಕೆಟ್​ನಲ್ಲಿ ಆಗ ಅತಿ ಹೆಚ್ಚು ಶತಕಗಳನ್ನು (29) ಬಾರಿಸಿದ ದಾಖಲೆ ಹೊಂದಿದ್ದ ಸರ್ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಉತ್ತಮಪಡಿಸುವ ಹಂತದಲ್ಲಿದ್ದಾಗ ಅಂದರೆ ತಮ್ಮ ಕರೀಯರ್​ನ 30 ನೇ ಶತಕ ಬಾರಿಸುವ ಹೊಸ್ತಿಲಲ್ಲಿದ್ದಾಗ ವಿಂಡೀಸ್ ವಿಕೆಟ್​ಕೀಪರ್ ಜೆಫ್ರಿ ಡೂಜಾನ್ ಸನ್ನಿಗೆ, ‘‘ಶತಕ ಬಾರಿಸಿದ ನಂತರ ನಿಮ್ಮ ಬ್ಯಾಟನ್ನು ಯಾರಿಗಾದರೂ ಉಡುಗೊರೆಯಾಗಿ ನೀಡುವ ಬಗ್ಗೆ ಆಲೋಚನೆ ಮಾಡಿದ್ದರೆ ದಯವಿಟ್ಟು ಒಮ್ಮೆ ಹಿಂದೆ ತಿರುಗಿ ನೋಡಿ,’’ ಎಂದು ಹೇಳಿದರಂತೆ. ಸನ್ನಿ, ಶತಕ ಬಾರಿಸಿ ಔಟಾದ ನಂತರ ಬ್ಯಾಟನ್ನು ಡೂಜಾನ್​ಗೆ ಗಿಫ್ಟ್​ ರೂಪದಲ್ಲಿ ನೀಡಿದರು.