ಪ್ರಸಿದ್ಧ ಭಾರತೀಯ ಓಟಗಾರ ಮಿಲ್ಖಾ ಸಿಂಗ್ ಅವರು ಶುಕ್ರವಾರ (ಜೂನ್ 18) ತಮ್ಮ 91 ನೇ ವಯಸ್ಸಿನಲ್ಲಿ ಕೊರೊನಾ ವೈರಸ್ನಿಂದ ನಿಧನರಾದರು. ಮಿಲ್ಖಾ ಸಿಂಗ್ ಅವರ ಪತ್ನಿ ನಿರ್ಮಲಾ ಕೌರ್ ಸಹ ಐದು ದಿನಗಳ ಹಿಂದೆ ಕೊರೊನಾದಿಂದ ನಿಧನರಾದರು. ಶನಿವಾರ ಮಿಲ್ಖಾ ಅವರು ಸಕಲ ಸರ್ಕಾರಿ ಗೌರವದೊಂದಿಗೆ ಪಂಚಭೂತಗಳಲ್ಲಿ ವಿಲೀನರಾದರು. ಅವರ ಅಂತಿಮ ಯಾತ್ರೆಯಲ್ಲಿ ಮಿಲ್ಖಾ ಅವರ ಕೈಯಲ್ಲಿ ಪತ್ನಿ ನಿರ್ಮಲ್ ಕೌರ್ ಅವರ ಫೋಟೋ ಇತ್ತು. ಈ ದೃಶ್ಯ ದಂಪತಿಗಳ ನಡುವೆ ಇದ್ದ ಅಗಾದವಾದ ಪ್ರೀತಿಯನ್ನು ನೆನಪಿಸುವಂತಿತ್ತು. ಏತನ್ಮಧ್ಯೆ, ಮಿಲ್ಖಾ ಅವರ ಅಂತಿಮ ಯಾತ್ರೆಯಲ್ಲಿನ ಈ ಫೋಟೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ ಮತ್ತು ಈ ಫೋಟೋವನ್ನು ನೋಡಿದ ನಂತರ ಎಲ್ಲರೂ ಭಾವುಕರಾಗಿದ್ದಾರೆ.
ಮಿಲ್ಖಾ ಭಾರತೀಯ ಸೇನೆಯಲ್ಲಿ ನಿವೃತ್ತ ಅಧಿಕಾರಿಯಾಗಿದ್ದರಿಂದ ಅವರನ್ನು ರಾಜ್ಯ ಸರ್ಕಾರದ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಅವರ ಮಗ ಮತ್ತು ಭಾರತದ ಸ್ಟಾರ್ ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಅವರು ಮಿಲ್ಖಾ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಏತನ್ಮಧ್ಯೆ, ಅವರ ಪತ್ನಿ ನಿರ್ಮಲಾ ಕೂಡ ಸಾವನ್ನಪ್ಪಿದ್ದರಿಂದ ಅವರ ಫೋಟೋವನ್ನು ಮಿಲ್ಖಾ ಅವರೊಂದಿಗೆ ಇರಿಸಲಾಗಿತ್ತು.
ಸೆಹ್ವಾಗ್ ಭಾವನಾತ್ಮಕ ಟ್ವೀಟ್
ಮಿಲ್ಖಾ ಸಿಂಗ್ ಅವರ ಕೊನೆಯ ಪಯಣದಲ್ಲಿ ಪತ್ನಿ ಜೊತೆಗಿನ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಿಲ್ಖಾ ಸಿಂಗ್ ಅವರು ಪತ್ನಿ ತೀರಿಕೊಂಡ ಐದು ದಿನಗಳ ನಂತರ ನಿಧನರಾದರು. ಅವರ ಕೊನೆಯ ಪ್ರಯಾಣದಲ್ಲಿ ಅವರ ಹೆಂಡತಿಯ ಫೋಟೋ, ಪತ್ನಿಯೊಂದಿಗೆ ಮಿಲ್ಖಾ ಅವರು ಜಗತ್ತನ್ನು ತೊರೆಯುತ್ತಿದ್ದಾರೆ. ಈ ದೃಶ್ಯವು ನಿಜವಾದ ಪ್ರೀತಿಯ ಸಮಕೇತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Milkha Singh ji passed away 5 days after his wife’s death.
His Wife’s photo is in his hands during his last journey. He sprinted to be with his beloved Nirmal Kaur ji.
Love and light, a life well lived and deserves to be celebrated for years to come #MilkhaSinghji pic.twitter.com/0DWE8Dz8pi— Virender Sehwag (@virendersehwag) June 19, 2021
ಮಿಲ್ಖಾ ಸಿಂಗ್ ಹಾಗೂ ನಿರ್ಮಲ್ ಕೌರ್ ಮೊದಲ ಭೇಟಿ
ಮಿಲ್ಖಾ ಸಿಂಗ್ ಹಾಗೂ ನಿರ್ಮಲ್ ಕೌರ್ ಪರಸ್ಪರ ಭೇಟಿಯಾಗಿದ್ದು ಮೈದಾನದಲ್ಲೇ. ಕೌರ್ ಭೇಟಿಗೂ ಮುನ್ನವೇ ಮಿಲ್ಖಾ ಹೆಸರು ಸಾಕಷ್ಟು ತರುಣಿಯರೊಂದಿಗೆ ತಳುಕು ಹಾಕಿಕೊಂಡಿತ್ತಾದರೂ ಕೊನೆಗೆ ಪ್ರೀತಿ ಮೊಳಕೆಯೊಡೆದಿದ್ದು ಇವರಿಬ್ಬರ ನಡುವೆಯೇ. ಮೂವರು ಯುವತಿಯರ ಜತೆ ಮಿಲ್ಖಾ ಹೆಸರು ಗಾಢವಾಗಿ ಕೇಳಿ ಬಂತಾದರೂ ಅದ್ಯಾವುದೂ ವಿವಾಹದ ತನಕ ಮುಂದುವರೆಯಲಿಲ್ಲ. ಅಷ್ಟರಲ್ಲಾಗಲೇ ಮಿಲ್ಖಾ ಕಣ್ಣಿಗೆ ಬಿದ್ದಿದ್ದ ವಾಲಿಬಾಲ್ ಆಟಗಾರ್ತಿ ಕೌರ್ ಅತ್ಯುತ್ತಮ ಅಥ್ಲೀಟ್ನನ್ನು ಕಣ್ಣ ಹೊಳಪಲ್ಲೇ ಸೋಲಿಸಿಬಿಟ್ಟಿದ್ದರು.
ಇವರಿಬ್ಬರ ನಡುವಿನ ಮೊದಲ ಭೇಟಿ ನಡೆದಿದ್ದು ವಿದೇಶದ ನೆಲದಲ್ಲಿ. ಶ್ರೀಲಂಕಾದ ಕೊಲಂಬೋದಲ್ಲಿ 1955ರಲ್ಲಿ ಭಾರತೀಯ ವಾಲಿಬಾಲ್ ತಂಡದ ನಾಯಕಿ ನಿರ್ಮಲ್ ಕೌರ್ ಅವರನ್ನು ಉದ್ಯಮಿಯೊಬ್ಬರು ಏರ್ಪಡಿಸಿದ್ದ ಔತಣಕೂಟದಲ್ಲಿ ಮಿಲ್ಖಾ ಭೇಟಿ ಮಾಡಿದ್ದರು. ಮೊದಲ ಭೇಟಿಯಲ್ಲೇ ರೋಮಾಂಚಿತಗೊಂಡಿದ್ದ ಮಿಲ್ಖಾ ಸಿಂಗ್, ನಿರ್ಮಲ್ ಕೌರ್ಗೆ ತನ್ನ ಹೃದಯವನ್ನು ಕೊಟ್ಟಿದ್ದರಾದರೂ ತಕ್ಷಣವೇ ಪರಸ್ಪರ ಪ್ರೀತಿಯಲ್ಲಿ ಬೀಳುವುದು ಸಾಧ್ಯವಾಗಿರಲಿಲ್ಲ. ಸಂದರ್ಶನವೊಂದರಲ್ಲಿ ಮಿಲ್ಖಾ ಸಿಂಗ್ ಹೇಳಿಕೊಂಡಂತೆ, ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ಸಾಕಷ್ಟು ಮಾತುಕತೆಗಳಾಗಿದ್ದವಂತೆ. ಆದರೆ, ಆಗಿನ ಕಾಲದ ಮಾಮೂಲಿ ರೀತಿಯಲ್ಲಿ ಪತ್ರ ಬರೆಯುತ್ತಾ ಕೂರದೇ ಮಿಲ್ಖಾ ನೇರವಾಗಿ ಹೋಗಿ ಕೌರ್ ಕೈ ಮೇಲೆ ತಾವು ಉಳಿದುಕೊಂಡಿದ್ದ ರೂಮ್ ನಂಬರ್ ಬರೆದು ಬಂದಿದ್ದರಂತೆ.
ಆ ಭೇಟಿಯಲ್ಲೂ ಪ್ರೀತಿ ಅಧಿಕೃತವಾಗಿ ಆರಂಭವಾಗಲಿಲ್ಲ
1955ರ ಮೊದಲ ಭೇಟಿ ನಂತರ ಅವರಿಬ್ಬರೂ ಮತ್ತೆ ಮುಖಾಮುಖಿಯಾಗಿದ್ದು 1958ರಲ್ಲಿ. ಆದರೆ, ಆ ಭೇಟಿಯಲ್ಲೂ ಪ್ರೀತಿ ಅಧಿಕೃತವಾಗಿ ಆರಂಭವಾಗಲಿಲ್ಲ. ಬದಲಾಗಿ ಅದಾದ ಎರಡು ವರ್ಷಗಳ ನಂತರ ಅಂದರೆ 1960ರಲ್ಲಿ ಇಬ್ಬರೂ ಪರಸ್ಪರ ಒಪ್ಪಿ ಪ್ರೀತಿಯ ಪ್ರಯಾಣ ಆರಂಭಿಸಿದ್ದರು. ಅದಾಗಲೇ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದ ಮಿಲ್ಖಾ ತನ್ನ ಹೃದಯ ಕದ್ದ ಕೌರ್ ಅವರನ್ನ ದೆಹಲಿಯ ನ್ಯಾಶನಲ್ ಸ್ಟೇಡಿಯಂನಲ್ಲಿ ಭೇಟಿಯಾಗಿದ್ದರು. ಅವರಿಬ್ಬರ ಮಧ್ಯೆ ಪ್ರೀತಿ ಶುರುವಾಗುವುದಕ್ಕೆ ಕಾಫಿ ಒಂದು ನೆಪವಾಯಿತಾದರೂ, ಅದಾದ ನಂತರ ಅಂತಹ ಸಾಕಷ್ಟು ಭೇಟಿಗಳು ಜರುಗಿಹೋದವು.
ಇಬ್ಬರೂ ಕ್ರೀಡೆಯಲ್ಲಿ ಸಾಧನೆ ಮಾಡಿದವರು, ಪರಸ್ಪರ ಪ್ರೀತಿ ಹಂಚಿಕೊಂಡವರಾದರೂ ಅದನ್ನು ಮುಂದುವರೆಸುವುದಕ್ಕೆ ಇಬ್ಬರಿಗೂ ಸಾಕಷ್ಟು ಅಡೆತಡೆಗಳಿದ್ದವು. ವಿಶೇಷವೆಂದರೆ ಆ ತಡೆಗೋಡೆಯನ್ನು ಕೆಡವಲು ಅಂದಿನ ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಪ್ರತಾಪ್ ಸಿಂಗ್ ಖೈರಾನ್ ಸ್ವ ಇಚ್ಛೆಯಿಂದ ಮುಂದೆ ಬಂದಿದ್ದರು. ನಿರ್ಮಲ್ ಕೌರ್ ಹಿಂದೂ ಸಂಪ್ರದಾಯದವರಾಗಿದ್ದು, ಮಿಲ್ಖಾ ಸಿಂಗ್ ಸಿಖ್ ಸಮುದಾಯಕ್ಕೆ ಸೇರಿದವರಾದ ಕಾರಣ ಅವರ ನಡುವಿನ ಪ್ರೀತಿ ಮದುವೆಗೆ ತಿರುಗುವುದು ಸುಲಭವಿರಲಿಲ್ಲ. ಈ ವಿಷಯವನ್ನು ನಂಬಲು ನಿರ್ಮಲ್ ತಂದೆಯೂ ಸಿದ್ಧರಿರಲಿಲ್ಲ. ಆ ಹಂತದಲ್ಲಿ ಪಂಜಾಬ್ನ ಮುಖ್ಯಮಂತ್ರಿಯವರೇ ಮುಂದೆ ಬಂದು ಎರಡೂ ಕುಟುಂಬದ ಮನವೊಲಿಸಿ 1962ರಲ್ಲಿ ವಿವಾಹ ನೆರವೇರಲು ಕಾರಣರಾದರು.
ಮೈದಾನದಲ್ಲಿ ಎದುರಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ತಮ್ಮ ತಂಡಕ್ಕೆ ಶಕ್ತಿ ತುಂಬುತ್ತಿದ್ದ ಇಬ್ಬರೂ, ಸಾಂಸಾರಿಕ ಜೀವನದಲ್ಲೂ ಪರಸ್ಪರ ಸಹಕಾರದೊಂದಿಗೆ ಹೆಜ್ಜೆ ಹಾಕಲಾರಂಭಿಸಿದರು. ಆ ಅದಮ್ಯ ಪ್ರೀತಿಯ ಫಲವಾಗಿಯೇ ಇಬ್ಬರೂ ಸುದೀರ್ಘ ದಾಂಪತ್ಯದ ಸವಿಯುಂಡರು. ಇವರಿಬ್ಬರ ಪ್ರೇಮದ ಫಲವಾಗಿ ಮೋನಾ ಸಿಂಗ್, ಅಲೀಜಾ ಗ್ರೋವರ್, ಸೋನಿಯಾ ಸಾನ್ವಲ್ಕಾ ಎಂಬ ಮೂವರು ಪುತ್ರಿಯರು ಹಾಗೂ ಜೀವ್ ಮಿಲ್ಖಾ ಸಿಂಗ್ ಎಂಬ ಓರ್ವ ಪುತ್ರ ಇದ್ದಾರೆ. ತಂದೆಯ ಸಾಧನೆಯ ಹಾದಿಯಲ್ಲೇ ಸಾಗಿದ ಜೀವ್ ಮಿಲ್ಖಾ ಸಿಂಗ್ ತಂದೆಯಂತೆಯೇ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಗಾಲ್ಫ್ ಆಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಜೀವ್ ಮಿಲ್ಖಾ ಸಿಂಗ್ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಮಿಲ್ಖಾ ಸಿಂಗ್ರಿಂದ ಸಿಕ್ಕ ಕೊಡುಗೆಯೆಂದರೂ ತಪ್ಪಾಗಲಾರದು.