ಭಾರತದಲ್ಲಿ ಹಾಕಿ ಕ್ರೀಡೆ ಬಗ್ಗೆ ಹೊಸ ಕ್ರೇಝ್ ಶುರುವಾಗಿದೆ. ಇಂತಹದೊಂದು ಸಂಚಲನ ಸೃಷ್ಟಿಸಿದ್ದು ಪುರುಷರ ಹಾಕಿ ತಂಡ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ಮಿಂಚಿದ್ದ ಭಾರತೀಯ ತಂಡ, ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಕಂಚಿನ ಪದಕ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಷ್ಟೇ ಅಲ್ಲದೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯನ್ನೂ ಗೆಲ್ಲುವ ಮೂಲಕ ಪರಾಕ್ರಮ ಮೆರೆದಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಗೆಲುವುಗಳೊಂದಿಗೆ ಯುವ ಸಮೂಹವನ್ನು ಸೆಳೆದಿರುವ ಹಾಕಿ ಕ್ರೀಡೆಯನ್ನು ಮತ್ತೊಂದು ಮಜಲಿನತ್ತ ಕೊಂಡೊಯ್ಯಲು ಭಾರತೀಯ ಹಾಕಿ ಫೆಡರೇಷನ್ ಮುಂದಾಗಿದೆ.
ಇದಕ್ಕಾಗಿ 11 ವರ್ಷಗಳ ಹಿಂದೆ ಶುರುವಾಗಿದ್ದ ಹಾಕಿ ಇಂಡಿಯಾ ಲೀಗ್ ಪುನರಾಂಭಿಸಲು ಯೋಜನೆ ರೂಪಿಸಿದೆ. 2013 ರಿಂದ 2018 ರವರೆಗೆ ದೇಶೀಯ ಅಂಗಳದಲ್ಲಿ ಹಾಕಿ ಇಂಡಿಯಾ ಲೀಗ್ ಅನ್ನು ಆಯೋಜಿಸಲಾಗಿತ್ತು. ಆರಂಭದಲ್ಲಿ ಯಶಸ್ಸಿನತ್ತ ಸಾಗಿದ್ದ ಈ ಲೀಗ್ಗೆ ಆ ಬಳಿಕ ಆರ್ಥಿಕ ಸಮಸ್ಯೆ ಎದುರಾಗಿತ್ತು. ಹೀಗಾಗಿ 6ನೇ ಸೀಸನ್ ಬಳಿಕ ಹಾಕಿ ಲೀಗ್ ಅನ್ನು ಆಯೋಜಿಸಲಾಗಿರಲಿಲ್ಲ. ಇದೀಗ ಫ್ರಾಂಚೈಸಿ ಆಧಾರಿತ ಲೀಗ್ಗೆ ಮತ್ತೆ ಚಾಲನೆ ನೀಡಲು ಹಾಕಿ ಇಂಡಿಯಾ ಫೆಡರೇಷನ್ ನಿರ್ಧರಿಸಿದೆ.
ಹಾಕಿ ಇಂಡಿಯಾ ಫೆಡರೇಷನ್ 3640 ಕೋಟಿ ರೂ. ಯೋಜನೆಯೊಂದಿಗೆ ಮುಂದಿನ 10 ವರ್ಷಗಳ ಕಾಲ ಹಾಕಿ ಇಂಡಿಯಾ ಲೀಗ್ ಆಯೋಜಿಸಲು ಪ್ಲ್ಯಾನ್ ರೂಪಿಸಿದೆ. ಈ ಮೂಲಕ ಕಳೆದ ಬಾರಿಯಂತೆ ಈ ಸಲ ಟೂರ್ನಿ ಅರ್ಧದಲ್ಲೇ ಅಂತ್ಯವಾಗುವುದಿಲ್ಲ ಎಂದು ಫ್ರಾಂಚೈಸಿಗಳಿಗೆ ಖಾತ್ರಿಪಡಿಸಿದೆ. ಅಲ್ಲದೆ ಹೊಸ ಪ್ರಾಯೋಜಕತ್ವವನ್ನು ಸೆಳೆಯಲು ಮುಂದಾಗಿದೆ.
ಈ ಬಾರಿಯ ಹಾಕಿ ಇಂಡಿಯಾ ಲೀಗ್ನಲ್ಲಿ ಪುರುಷರ 8 ತಂಡಗಳನ್ನು ಕಣಕ್ಕಿಳಿಯಲಿದೆ. ಇದರೊಂದಿಗೆ 6 ಮಹಿಳಾ ತಂಡಗಳು ಸಹ ಎಚ್‌ಐಎಲ್ ಟೂರ್ನಿಯಲ್ಲಿ ಭಾಗವಹಿಸಲಿದೆ. ಈ ಮೂಲಕ ಹಾಕಿ ಪ್ರಿಯರಿಗೆ ಪೈಪೋಟಿಯ ಭರ್ಜರಿ ರಸದೌತಣ ನೀಡಲು ಹಾಕಿ ಇಂಡಿಯಾ ಫೆಡರೇಷನ್ ಯೋಜನೆ ರೂಪಿಸಿದೆ.
ಹಾಕಿ ಇಂಡಿಯಾ ಲೀಗ್ನ ಹೊಸ ಸೀಸನ್ ಡಿಸೆಂಬರ್ 28 ರಿಂದ ಶುರುವಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಫೆಬ್ರವರಿ 5 ರಂದು ನಡೆಯಲಿದೆ. ಹಾಗೆಯೇ ಮಹಿಳಾ ಟೂರ್ನಿಯ ಫೈನಲ್ ಮ್ಯಾಚ್ 26 ಜನವರಿ 2025 ರಂದು ಜರುಗಲಿದೆ.
ಇದನ್ನೂ ಓದಿ: ಟೀಮ್ ಇಂಡಿಯಾ ಪರ ಕಣಕ್ಕಿಳಿದರೆ ಅನ್ಕ್ಯಾಪ್ಡ್ ಪಟ್ಟಿಯಿಂದ ಮೂವರು ಹೊರಕ್ಕೆ..!
ಮೇಲೆ ತಿಳಿಸಿದಂತೆ ಈ ಬಾರಿಯ ಹಾಕಿ ಇಂಡಿಯಾ ಲೀಗ್ನಲ್ಲಿ 8 ಪುರುಷರ ತಂಡಗಳು, 6 ಮಹಿಳಾ ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ 24 ಆಟಗಾರರು ಇರಲಿದ್ದಾರೆ. ಈ ಆಟಗಾರರ ಹರಾಜು ಪ್ರಕ್ರಿಯೆ ಡಿಸೆಂಬರ್ 25 ರಂದು ನಡೆಯಲಿದೆ.