ಎರಡು ದಶಕಗಳಿಗೂ ಹೆಚ್ಚು ಕಾಲ ಟೆನಿಸ್ (Tennis) ಅಂಗಳದಲ್ಲಿ ರಾಣಿಯಂತೆ ಮೆರೆದಿದ್ದ ಸ್ಟಾರ್ ಟೆನಿಸ್ ಪಟು ಸೆರೆನಾ ವಿಲಿಯಮ್ಸ್ (Serena Williams) ತಮ್ಮ ಅಭಿಮಾನಿ ಬಳಗಕ್ಕೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಟೆನಿಸ್ ಬದುಕಿಗೆ ವಿದಾಯ ಹೇಳುವುದಾಗಿ ಕಳೆದ ಆಗಸ್ಟ್‌ನಲ್ಲಿ ಹೇಳಿಕೊಂಡಿದ್ದ ಸೆರೆನಾ, ಈಗ ನಾನು ಟೆನಿಸ್‌ನಿಂದ ನಿವೃತ್ತಿಯಾಗಿಲ್ಲ ಎನ್ನುವ ಮೂಲಕ ಎಲ್ಲರಲ್ಲೂ ಅಚ್ಚರಿಸಿ ಮೂಡಿಸಿರುವುದಲ್ಲದೆ ಮತ್ತೆ ಕ್ರೀಡೆಗೆ ಮರಳುವ ಸಾಧ್ಯತೆ ಇದೆ ಎಂಬ ಸೂಚನೆ ನೀಡಿದ್ದಾರೆ. ಈ ಹಿಂದೆ ನಡೆದ 2022ರ ಯುಸ್ ಓಪನ್ ಪಂದ್ಯಾವಳಿಯೇ ಸೆರೆನಾ ಅವರ ವೃತ್ತಿ ಜೀವನದ ಕೊನೆಯ ಟೂರ್ನಿ ಎಂದು ಬಿಂಬಿಸಲಾಗಿತ್ತು. ಆದರೆ ಈಗ ತಮ್ಮ ನಿರ್ಧಾರದಿಂದ ಸೆರೆನಾ ಹಿಂದೆ ಸರಿದಿರುವುದು ಸ್ಪಷ್ಟವಾಗಿ ಗೋಚರವಾಗಿದೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ತನ್ನ ಸಂಸ್ಥೆಯಾದ ಸೆರೆನಾ ವೆಂಚರ್ಸ್ ಪ್ರಚಾರದ ವೇಳೆ ಮಾತನಾಡಿದ ಸೆರೆನಾ, ನಾನು ಟೆನಿಸ್‌ನಿಂದ ನಿವೃತ್ತಿಯಾಗಿಲ್ಲ ಎಂದು ಹೇಳುವ ಮೂಲಕ ತಾನು ಮತ್ತೆ ಟೆನಿಸ್ ಕೋರ್ಟ್ಗೆ ಹಿಂದಿರುಗುವ ಸಾಧ್ಯತೆಗಳು ತುಂಬಾ ಹೆಚ್ಚಿವೆ ಎಂದಿದ್ದಾರೆ.
ಈ ಹಿಂದೆ ನಡೆದ ಯುಸ್ ಓಪನ್ನ ಮೂರನೇ ಸುತ್ತಿನಲ್ಲಿ ಸೋಲನನುಭವಿಸಿದ್ದ ಸೆರೆನಾ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಲು ಬಯಸಿದ್ದರು. ಟೆನಿಸ್ ಅಂಗಳದಲ್ಲಿ ದಾಖಲೆಯ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಸೆರೆನಾ, 24ನೇ ಗ್ರ್ಯಾಂಡ್ ಸ್ಲಾಮ್ ಗೆಲ್ಲುವುದರೊಂದಿಗೆ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಲು ಬಯಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದಿದ್ದ ಈ ಪಂದ್ಯದಲ್ಲಿ ಅನುಭವಿ ಸೆರೆನಾ ವಿಲಿಯಮ್ಸ್ ವಿರುದ್ದ ಅಜ್ಲಾ ಟೊಮ್ಲಜಾನೊವಿಕ್ ಉತ್ತಮ ಪ್ರದರ್ಶನ ನೀಡಿದ್ದರು. 7-5, 6-7(4), 6-1 ಸೆಟ್‌ಗಳಿಂದ ಮಣಿಸುವ ಮೂಲಕ ಅಂತಿಮವಾಗಿ ಅಜ್ಲಾ ಗೆಲುವಿನ ನಗೆ ಬೀರಿದ್ದರು. ಹೀಗಾಗಿ ಸೋನಿನೊಂದಿಗೆ ಟೆನಿಸ್ ಕೋರ್ಟ್ ತೊರೆದಿದ್ದ ಸೆರೆನಾಗೆ ಇಡೀ ಟೆನಿಸ್ ಜಗತ್ತೆ ಕಣ್ಣೀರಿನ ವಿದಾಯ ಹೇಳಿತ್ತು.
ಇದನ್ನೂ ಓದಿ: Serena Williams: ಸೋಲಿನೊಂದಿಗೆ ಟೆನಿಸ್ ಅಂಗಳಕ್ಕೆ ವಿದಾಯ ಹೇಳಿದ ಸೆರೆನಾ
ಸೋಶಿಯಲ್ ಮೀಡಿಯಾದಲ್ಲಿ ವಿದಾಯದ ಮಾಹಿತಿ
ತಮ್ಮ ನಿವೃತ್ತಿಯ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ವಿಸ್ತೃತವಾಗಿ ಬರೆದುಕೊಂಡಿದ್ದ ಸೆರೆನಾ, ನಿವೃತ್ತಿ ಎಂಬ ಪದವನ್ನು ನಾನು ಎಂದಿಗೂ ಇಷ್ಟಪಟ್ಟಿಲ್ಲ. ಇದು ನನಗೆ ಆಧುನಿಕ ಪದದಂತೆ ಭಾಸವಾಗುವುದಿಲ್ಲ. ನಾನು ಇದನ್ನು ಪರಿವರ್ತನೆ ಎಂದು ಭಾವಿಸುತ್ತೇನೆ, ಆದರೆ ನಾನು ಆ ಪದವನ್ನು ಹೇಗೆ ಬಳಸುತ್ತೇನೆ ಎಂಬುದರ ಕುರಿತು ಸೂಕ್ಷ್ಮವಾಗಿರಲು ಬಯಸುತ್ತೇನೆ. ಬಹುಶಃ ನಾನು ಏನನ್ನು ಮಾಡುತ್ತಿದ್ದೇನೆ ಎಂಬುದನ್ನು ವಿವರಿಸಲು ಅತ್ಯುತ್ತಮ ಪದವು ವಿಕಾಸವಾಗಿದೆ. ನಾನು ಟೆನಿಸ್‌ನಿಂದ ದೂರವಾಗಿ, ನನಗೆ ಮುಖ್ಯವಾದ ಇತರ ವಿಷಯಗಳ ಕಡೆಗೆ ವಿಕಸನಗೊಳ್ಳುತ್ತಿದ್ದೇನೆ ಎಂದು ಹೇಳಲು ಇಷ್ಟಪಡುತ್ತೇನೆ. ಕೆಲವು ವರ್ಷಗಳ ಹಿಂದೆ ನಾನು ಸದ್ದಿಲ್ಲದೆ ಸೆರೆನಾ ವೆಂಚರ್ಸ್, ವೆಂಚರ್ ಕ್ಯಾಪಿಟಲ್ ಸಂಸ್ಥೆಯನ್ನು ಪ್ರಾರಂಭಿಸಿದೆ. ಅದರ ನಂತರ ನಾನು ಕುಟುಂಬವನ್ನು ಪ್ರಾರಂಭಿಸಿದೆ. ನಾನು ಈಗ ಆ ಕುಟುಂಬವನ್ನು ಬೆಳೆಸಲು ಬಯಸುತ್ತೇನೆ ಎಂದು ವೋಗ್‌ಗೆ ಬರೆದ ಅಂಕಣದಲ್ಲಿ ಸೆರೆನಾ ಬರೆದುಕೊಂಡಿದ್ದರು.
ಸೆರೆನಾ ವೃತ್ತಿ ಜೀವನದ ಸಾಧನೆಗಳು
ಆರು ಯುಎಸ್ ಓಪನ್ ಪ್ರಶಸ್ತಿ
ಸೆರೆನಾ ಅವರು ಆರು ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದು ಕ್ರಮವಾಗಿ, 1999, 2002, 2008, 2012, 2013, 2014 ರಲ್ಲಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
10 ಬಾರಿ ಯುಎಸ್ ಓಪನ್ ಫೈನಲಿಸ್ಟ್
ಸೆರೆನಾ 10 ಯುಎಸ್ ಓಪನ್ ಫೈನಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ, ಅವುಗಳಲ್ಲಿ ಆರರಲ್ಲಿ ಗೆದ್ದಿದ್ದಾರೆ. ಏತನ್ಮಧ್ಯೆ, ವಿಲಿಯಮ್ಸ್ ಟೂರ್ನಿಯಲ್ಲಿ 14 ಬಾರಿ ಸೆಮಿಸ್ ಹಂತವನ್ನು ತಲುಪಿದ್ದಾರೆ. ಅವರು ಕೊನೆಯ ಬಾರಿಗೆ 2014 ರಲ್ಲಿ ಯುಎಸ್ ಓಪನ್ ಗೆದ್ದಿದ್ದರು. 2020 ರಲ್ಲಿ, ಸೆರೆನಾ ಯುಎಸ್ ಓಪನ್ ಸೆಮಿಫೈನಲ್‌ನಲ್ಲಿ ಬೆಲರೂಸಿಯಾದ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಸೋಲನುಭವಿಸಿದ್ದರು.
ವಿಲಿಯಮ್ಸ್ ವಿಶಿಷ್ಟವಾದ ಸಾಧನೆ
ಎಲ್ಲಾ ನಾಲ್ಕು ಸ್ಲಾಮ್‌ಗಳಲ್ಲಿ 65 ಕ್ಕೂ ಹೆಚ್ಚು ಗೆಲುವುಗಳನ್ನು ದಾಖಲಿಸಿದ ಏಕೈಕ ಮಹಿಳೆ ವಿಲಿಯಮ್ಸ್. ಆಸ್ಟ್ರೇಲಿಯಾ ಓಪನ್: 92-13, ಫ್ರೆಂಚ್ ಓಪನ್: 69-14, ವಿಂಬಲ್ಡನ್: 98-14, ಮತ್ತು ಯುಎಸ್ ಓಪನ್: 106-14. ಸದ್ಯದಲ್ಲಿ ಇವರ ದಾಖಲೆ ಮುರಿಯುವ ಸಾಧ್ಯತೆ ಕಡಿಮೆ ಇದೆ.
ಸೆರೆನಾಗೆ ಗ್ರ್ಯಾಂಡ್ ಸ್ಲಾಮ್ ಬರ
ಸೆರೆನಾ ಕೊನೆಯ ಬಾರಿಗೆ 2017ರಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿದ್ದರು. ಆ ಬಳಿಕ ಎರಡು ವಿಂಬಲ್ಡನ್ (2018-19) ಮತ್ತು ಎರಡು US ಓಪನ್ ಫೈನಲ್‌ಗೆ (2018-19) ಅರ್ಹತೆ ಗಳಿಸಿದ್ದರು. ಆದರೆ ಗೆಲುವ ಸಾಧಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಯುಎಸ್ ಓಪನ್ (2020) ಮತ್ತು ಆಸ್ಟ್ರೇಲಿಯನ್ ಓಪನ್ (2021) ನಲ್ಲಿ ಸೆಮಿಫೈನಲ್ ತಲುಪಿದರು.ಇದಕ್ಕೂ ಮೊದಲು ಸೆರೆನಾ ಸತತ ಆರು ವರ್ಷಗಳ ನಡುವೆ (2012-2017) ಕನಿಷ್ಠ ಒಂದು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 am, Wed, 26 October 22