ಬೌಲರ್​ಗಳ ಸಾಂಘಿಕ ದಾಳಿಗೆ ಬೆದರಿದ ಬಾಂಗ್ಲಾ; ಭಾರತಕ್ಕೆ 257 ರನ್​ಗಳ ಗೆಲುವಿನ ಗುರಿ

|

Updated on: Oct 19, 2023 | 6:43 PM

IND vs BAN, ICC World Cup 2023: ಪುಣೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಭಾರತದ ದಾಳಿಗೆ ನಲುಗಿ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 256 ಕಲೆಹಾಕಿದೆ.

ಬೌಲರ್​ಗಳ ಸಾಂಘಿಕ ದಾಳಿಗೆ ಬೆದರಿದ ಬಾಂಗ್ಲಾ; ಭಾರತಕ್ಕೆ 257 ರನ್​ಗಳ ಗೆಲುವಿನ ಗುರಿ
ಬಾಂಗ್ಲಾದೇಶ- ಭಾರತ
Follow us on

ಪುಣೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ (India vs Bangladesh) ನಡುವಿನ ವಿಶ್ವಕಪ್ (ICC World Cup 2023) ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ಭಾರತದ ದಾಳಿಗೆ ನಲುಗಿ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 256 ಕಲೆಹಾಕಿದೆ. ಬಾಂಗ್ಲಾದೇಶದ ಪರ ಆರಂಭಿಕ ಆಟಗಾರ ಲಿಟನ್ ದಾಸ್ 66 ರನ್ ಗಳಿಸಿದರೆ, ಭಾರತದ ಪರ ಜಸ್ಪ್ರೀತ್ ಬುಮ್ರಾ (Jasprit Bumrah), ರವೀಂದ್ರ ಜಡೇಜಾ (Ravindra Jadeja) ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರು.

ಬಾಂಗ್ಲಾದೇಶದ ಇನ್ನಿಂಗ್ಸ್

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡದ ಪರ ಲಿಟನ್ ದಾಸ್ ಮತ್ತು ತಂಜಿದ್ ಹಸನ್ ಇಬ್ಬರು ಉತ್ತಮ ಆರಂಭ ನೀಡಿದರು. ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾದ ಇಬ್ಬರೂ, ಒಮ್ಮೆ ಸೆಟ್ ಆದ ನಂತರ ಗೇರ್ ಬದಲಾಯಿಸಿ ಆಕ್ರಮಣಕಾರಿ ಆಟ ಆರಂಭಿಸಿದರು. ಆರಂಭದಲ್ಲಿ ಭಾರತದ ಬೌಲರ್‌ಗಳು ಕೂಡ ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಹೀಗಾಗಿ ಈ ಜೋಡಿ ಬೃಹತ್ ಜೊತೆಯಾಟವನ್ನಾಡುವ ಸುಳಿವು ನೀಡಿತು. ಆದರೆ ಸ್ಪಿನ್ ದಾಳಿ ಆರಂಭಿಸಿದ ಕುಲ್ದೀಪ್ ಯಾದವ್ ಈ ಜೋಡಿಯ ಜೊತೆಯಾಟವನ್ನು ಮುರಿದರು. ಮೊದಲ ವಿಕೆಟ್​ಗೆ ಈ ಇಬ್ಬರೂ 93 ರನ್‌ಗಳ ಜೊತೆಯಾಟ ನಡೆಸಿದರು. ಈ ಒಂದು ವಿಕೆಟ್ ಪತನದ ನಂತರ ಬಾಂಗ್ಲಾದೇಶ ತಂಡದ ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಪತನಗೊಂಡವು.

IND vs BAN: 6 ವರ್ಷಗಳ ಬಳಿಕ ಬೌಲಿಂಗ್ ಮಾಡಿದ ಕಿಂಗ್ ಕೊಹ್ಲಿ..! ಅಪರೂಪದ ಕ್ಷಣದ ವಿಡಿಯೋ ಇಲ್ಲಿದೆ

ಆರಂಭಿಕರ ಅರ್ಧಶತಕ

ಆರಂಭಿಕ ಆಟಗಾರ ತಂಜಿದ್ ಹಸನ್ (51 ರನ್) ಅರ್ಧಶತಕ ಸಿಡಿಸಿ ಕುಲ್ದೀಪ್​ಗೆ ಬಲಿಯಾದರೆ, ನಂತರ ಶಾಂಟೊ ಅವರನ್ನು 8 ರನ್‌ಗಳಿಗೆ ಜಡೇಜಾ ಪೆವಿಲಿಯನ್​ಗಟ್ಟಿದರು. ಮೆಹದಿ ಹಸನ್ ಮಿರಾಜ್ (3 ರನ್) ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ತೌಹೀದ್ ಹೃದಯೋ ಕೂಡ (16 ರನ್) ಬೇಗನೇ ಔಟಾದರು. ಆದರೆ ಆ ಬಳಿಕ ಒಂದಾದ ಮುಶ್ಫಿಕರ್ ರಹೀಮ್ ಮತ್ತು ಮಹಮ್ಮದುಲ್ಲಾ ಉತ್ತಮ ಜೊತೆಯಾಟವನ್ನು ರಚಿಸುವ ಮೂಲಕ ತಂಡದ ಇನ್ನಿಂಗ್ಸ್ ಮುನ್ನಡೆಸಿದರು.

ರೋಹಿತ್ ಮೇಲೆ ನಿರೀಕ್ಷೆ

ಈ ವೇಳೆ ಮುಶ್ಫಿಕರ್ ರಹೀಮ್ (38 ರನ್) ಬುಮ್ರಾಗೆ ಬಲಿಯಾದರೆ, ಆ ನಂತರ ಮಹಮ್ಮದುಲ್ಲಾ (46 ರನ್) ಕೂಡ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ಭಾರತದ ಪರ ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು. ಭಾರತ ಇಂದು ಕೂಡ ಮತ್ತೊಮ್ಮೆ ರೋಹಿತ್‌ ಅವರ ಆಕ್ರಮಣಕಾರಿ ಇನ್ನಿಂಗ್ಸ್‌ನ ನಿರೀಕ್ಷೆಯಲ್ಲಿದೆ.

ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಬಾಂಗ್ಲಾದೇಶ ತಂಡ: ಲಿಟನ್ ದಾಸ್, ತನ್ಜಿದ್, ನಜ್ಮುಲ್ ಹುಸೇನ್ ಶಾಂಟೊ (ನಾಯಕ), ಮೆಹದಿ ಹಸನ್ ಮಿರಾಜ್, ತೌಹೀದ್ ಹ್ರಾದೋಯ್, ಮುಶ್ಫಿಕರ್ ರಹೀಮ್, ಮಹಮ್ಮದುಲ್ಲಾ, ನಸುಮ್ ಅಹ್ಮದ್, ಹಸನ್ ಮಹಮೂದ್, ಮುಸ್ತಫಿಜುರ್ ರಹಮಾನ್, ಶರೀಫುಲ್ ಇಸ್ಲಾಂ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:24 pm, Thu, 19 October 23