
ಬಿಹಾರದ ರಾಜ್‌ಗಿರ್‌ನಲ್ಲಿ ನಡೆದ 2025 ರ ಹಾಕಿ ಏಷ್ಯಾಕಪ್ (Hockey Asia Cup 2025) ಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ (Harmanpreet Singh) ನಾಯಕತ್ವದ ಭಾರತ ಹಾಕಿ ತಂಡವು, ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಈ ಟೂರ್ನಿಯಲ್ಲಿ ಅಜೇಯ ತಂಡವಾಗಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡ ನಾಲ್ಕನೇ ಬಾರಿಗೆ ಏಷ್ಯಾಕಪ್ ಗೆದ್ದ ಸಾಧನೆ ಮಾಡಿದೆ. ವಾಸ್ತವವಾಗಿ ಸೂಪರ್ 4 ಸುತ್ತಿನಲ್ಲಿ ಇದೇ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯವನ್ನು 2-2 ರಿಂದ ಡ್ರಾ ಮಾಡಿಕೊಂಡಿದ್ದ ಭಾರತ ಹಾಕಿ ತಂಡ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾಕ್ಕೆ ಯಾವುದೇ ಅವಕಾಶ ನೀಡದೆ ಏಕಪಕ್ಷೀಯವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ, ಟೀಂ ಇಂಡಿಯಾ ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂನಲ್ಲಿ ನಡೆಯಲಿರುವ 2026 ರ FIH ಪುರುಷರ ವಿಶ್ವಕಪ್‌ಗೆ ಅರ್ಹತೆ ಪಡೆದುಕೊಂಡಿದೆ.
ಪಂದ್ಯದ ಆರಂಭದಿಂದಲೇ ಭಾರತ ತಂಡ ಮೇಲುಗೈ ಸಾಧಿಸಿತು. ಪಂದ್ಯ ಆರಂಭವಾದ 30ನೇ ಸೆಕೆಂಡ್ನಲ್ಲಿ ಸುಖ್ಜಿತ್ ಸಿಂಗ್ ಮೊದಲ ಗೋಲು ಗಳಿಸಿದರು. ಅಂತಿಮವಾಗಿ ಮೊದಲ ಕ್ವಾರ್ಟರ್ 1-0 ಅಂತರದಿಂದ ಮುಕ್ತಾಯವಾಯಿತು. ಎರಡನೇ ಕ್ವಾರ್ಟರ್ನಲ್ಲಿ ಭಾರತ ಮತ್ತೊಂದು ಗೋಲು ದಾಖಲಿಸಿತು. ತಂಡದ ಪರ ದಿಲ್ಪ್ರೀತ್ ಸಿಂಗ್ 27ನೇ ನಿಮಿಷದಲ್ಲಿ ಈ ಗೋಲು ಬಾರಿಸಿದರು. ಇದರೊಂದಿಗೆ, ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿತು.
ಪಂದ್ಯದಲ್ಲಿ ಭಾರತ ತಂಡ ಪ್ರಾಬಲ್ಯ ಮೆರೆಯುತ್ತಲೇ ಇತ್ತು ಆದರೆ ಕೊರಿಯಾದ ರಕ್ಷಣಾ ಪಡೆಗಳನ್ನು ಭೇದಿಸುವುದು ಅಷ್ಟು ಸುಲಭವಾಗಿರಲಿಲ್ಲ. ಈ ಕಾರಣದಿಂದಾಗಿ ಮೂರನೇ ಗೋಲು ಬರಲು ಸಾಕಷ್ಟು ಸಮಯ ಹಿಡಿಯಿತು. ಆದರೆ 45 ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ವೈಯಕ್ತಿಕವಾಗಿ ಎರಡನೇ ಗೋಲು ಬಾರಿಸಿ ಅಂತರವನ್ನು 3-0 ಗೇರಿಸಿದರು. ಆದರೆ ದಕ್ಷಿಣ ಕೊರಿಯಾ ಪಂದ್ಯದ 57 ನೇ ನಿಮಿಷದಲ್ಲಿ ಗೋಲು ಗಳಿಸಿ ಅಂತರವನ್ನು ಕೊಂಚ ತಗ್ಗಿಸುವ ಕೆಲಸ ಮಾಡಿತು.
𝗖𝗵𝗮𝗺𝗽𝗶𝗼𝗻𝘀 𝗼𝗳 𝗔𝘀𝗶𝗮! 🏆🇮🇳🔥
India reign supreme at the Hero Asia Cup Rajgir, Bihar 2025 with a stellar campaign to lift the crown — their fourth Asia Cup title. 👑#HockeyIndia #IndiaKaGame #HumseHaiHockey #HeroAsiaCupRajgir pic.twitter.com/AOfD8wbB2K
— Hockey India (@TheHockeyIndia) September 7, 2025
9ನೇ ಫೈನಲ್ ಆಡುವ ಮೂಲಕ ಭಾರತ ತಂಡ ನಾಲ್ಕನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಟೀಂ ಇಂಡಿಯಾ ಕೊನೆಯ ಬಾರಿಗೆ 8 ವರ್ಷಗಳ ಹಿಂದೆ ಅಂದರೆ 2017 ರಲ್ಲಿ ಪ್ರಶಸ್ತಿ ಗೆದ್ದಿತ್ತು. ಈ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ದಕ್ಷಿಣ ಕೊರಿಯಾ 5 ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಇದಕ್ಕೂ ಮೊದಲು, ಉಭಯ ದೇಶಗಳ ನಡುವೆ 3 ಫೈನಲ್‌ಗಳು ನಡೆದಿದ್ದು, ಅದರಲ್ಲಿ 2 ರಲ್ಲಿ ದಕ್ಷಿಣ ಕೊರಿಯಾ ಮತ್ತು ಒಂದು ಪಂದ್ಯದಲ್ಲಿ ಭಾರತ ಜಯಗಳಿಸಿದೆ. ಅಷ್ಟೇ ಅಲ್ಲ, ಈ ಪ್ರಶಸ್ತಿ ಗೆಲುವಿನೊಂದಿಗೆ, ಟೀಂ ಇಂಡಿಯಾ ಬೆಲ್ಜಿಯಂ ಮತ್ತು ನೆದರ್‌ಲ್ಯಾಂಡ್ಸ್‌ನಲ್ಲಿ ನಡೆಯಲಿರುವ 2026 ರ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 pm, Sun, 7 September 25