ಅಹಮದಾಬಾದ್: ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ನಿರ್ಣಾಯಕ 4ನೇ ಟಿಟ್ವೆಂಟಿ ಪಂದ್ಯದಲ್ಲಿ ಟೀಮ್ ಇಂಡಿಯಾ 8 ರನ್ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ ಸರಣಿ ಸೋಲಿನ ಭೀತಿಯಲ್ಲಿದ್ದ ಕೊಹ್ಲಿ ಪಡೆ 2-2ರ ಅಂತರದಲ್ಲಿ ಸಮಬಲ ಸಾಧಿಸಿದೆ. ಎಲ್ಲಕ್ಕಿಂತ ಹೆಚ್ಚಾಗಿ ಟಾಸ್ ಗೆದ್ದವರೇ ಗೆಲುವು ದಾಖಲಿಸ್ತಾರೆ ಅನ್ನೋ ಮಾತನ್ನ ಕೊಹ್ಲಿ ಪಡೆ ಸುಳ್ಳು ಮಾಡಿ ತೋರಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾಕ್ಕೆ ಮತ್ತೊಮ್ಮೆ ಆರಂಭಿಕರು ಕೈ ಕೊಟ್ರು. ರೋಹಿತ್ ಶರ್ಮಾ 12, ಕನ್ನಡಿಗ ರಾಹುಲ್ 14 ನಂತರ ಬಂದ ನಾಯಕ ಕೊಹ್ಲಿ ಕೇವಲ 1 ರನ್ಗಳಿಸಿ ನಿರಾಸೆ ಮೂಡಿಸಿದ್ರು.
ಮೊದಲ ಪಂದ್ಯದಲ್ಲೇ ಬೆಳಗಿದ ಸೂರ್ಯ!
ಆದ್ರೆ ವನ್ಡೌನ್ನಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್, ತಾವಾಡಿದ ಮೊದಲ ಬಾಲ್ ಅನ್ನೇ ಸಿಕ್ಸರ್ಗಟ್ಟಿದ್ರು. ಅಷ್ಟೇ ಅಲ್ಲ.. ಇಂಗ್ಲೆಂಡ್ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್, ಮೋದಿ ಮೈದಾನದಲ್ಲಿ ರನ್ ಮಳೆ ಹರಿಸಿದ್ರು. 31 ಬಾಲ್ನಲ್ಲಿ 6 ಬೌಂಡರಿ 3 ಸಿಕ್ಸರ್ ಸಿಡಿಸಿದ ಸೂರ್ಯಕುಮಾರ್ 57 ರನ್ಗಳಿಸಿದ್ರು. ಟೀಮ್ ಇಂಡಿಯಾವನ್ನು ರಕ್ಷಿಸುವ ಕೆಲಸವನ್ನು ಸೂರ್ಯಕುಮಾರ್ ಯಾದವ್ ಮಾಡಿದರು. ಸೂರ್ಯಕುಮಾರ್ ಯಾದವ್ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ 20 ಯಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
ಆದರೆ, ಅವರ ಆಟವನ್ನು ನೋಡಿದವರು ಇದು ಅವರ ಚೊಚ್ಚಲ ಪಂದ್ಯ ಎಂದು ಭಾವಿಸಲಿಲ್ಲ. 30 ವರ್ಷದ ಬ್ಯಾಟ್ಸ್‌ಮನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಇನ್ನಿಂಗ್ಸ್ ಅನ್ನು ಸಿಕ್ಸರ್ ಮೂಲಕ ಪ್ರಾರಂಭಿಸಿದರು. ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಎಸೆತವನ್ನು ಸಿಕ್ಸರ್ಗೆ ಅಟ್ಟುವ ಮೂಲಕ ಎಲ್ಲರಿಗೂ ಆಘಾತ ನೀಡಿದರು. ಇದರ ನಂತರ, ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಅಬ್ಬರವನ್ನು ಕಾಣುವುದೇ ಕಣ್ಣಿಗೆ ಹಬ್ಬವೆನಿಸುತ್ತಿತ್ತು.
ವಿರಾಟ್ ಈ ರೀತಿ ಆಡಲು ಹೇಳಿದ್ದರು – ಸೂರ್ಯಕುಮಾರ್
ಸೂರ್ಯಕುಮಾರ್ 31 ಎಸೆತಗಳಲ್ಲಿ 57 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿ, 6 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಈ ಸ್ಫೋಟಕ ಇನ್ನಿಂಗ್ ಬಗ್ಗೆ ಪಂದ್ಯದ ನಂತರ ಸೂರ್ಯಕುಮಾರ್ ಅವರನ್ನು ಕೇಳಿದಾಗ, ವಿರಾಟ್ ಕೊಹ್ಲಿ ಮತ್ತು ಭಾರತೀಯ ತಂಡದ ಆಡಳಿತ ಮಂಡಳಿ ಹೀಗೆ ಆಡಲು ತಿಳಿಸಿತು ಎಂದು ಹೇಳಿದರು.
ಐಪಿಎಲ್ನಲ್ಲಿ ನೀವು ಆಡುವ ರೀತಿಯಲ್ಲಿಯೇ ಹೋಗಿ ಆಡಲು ಟೀಮ್ ಮ್ಯಾನೇಜ್ಮೆಂಟ್ ಮತ್ತು ವಿರಾಟ್ ಹೇಳಿದ್ದರು. ನಿಮ್ಮ ಕೌಶಲ್ಯಗಳನ್ನು ಬಹಿರಂಗವಾಗಿ ತೋರಿಸಿ ಮತ್ತು ಅದನ್ನು ಸಾಬೀತುಪಡಿಸಿ ಎಂದು ಹೇಳಿದರು ಎಂದು ಸೂರ್ಯಕುಮಾರ್ ಹೇಳಿಕೊಂಡಿದ್ದಾರೆ.
ಸೂರ್ಯಕುಮಾರ್ ಆಟ ನೋಡಿ ಗಾಬರಿಗೊಂಡ ಕೊಹ್ಲಿ
ನಿನ್ನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನಿರೀಕ್ಷೆಗಳನ್ನು ಮೀರಿದ ಆಟ ಆಡಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಚೊಚ್ಚಲ ಪ್ರದರ್ಶನದಿಂದ ತಾನು ಬೆರಗಾಗಿದ್ದೇನೆ ಎಂದು ಕ್ಯಾಪ್ಟನ್ ಕೊಹ್ಲಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ, ತಮಗೆ ಅನಿಸಿದಂತೆ ಆಡುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಆ ಸ್ಥಾನದಲ್ಲಿ ಆಡುವವರ ಮೇಲೆ ತಂಡದ ಭವಿಷ್ಯ ನಿಂತಿರುತ್ತದೆ. ಆದರಿಂದ ಸೂರ್ಯಕುಮಾರ್ ಯಾದವ್ ತೋರಿದ ಸ್ಥಿರ ಪ್ರದರ್ಶನ ನನ್ನಲ್ಲಿ ಬೆರಗು ಹುಟ್ಟಿಸಿದೆ ಎಂದರು.
ಉಳಿದಂತೆ ಪಂದ್ಯದ ಸಾರಾಂಶ ಹೀಗಿದೆ..
ಸೂರ್ಯಕುಮಾರ್ ಬಳಿಕ ಬೊಂಬಾಟ್ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ 30, ಶ್ರೇಯಸ್ ಅಯ್ಯರ್ 37 ರನ್ಗಳಿಸಿದ್ರು. ಇದರೊಂದಿಗೆ ಟೀಮ್ ಇಂಡಿಯಾ 8 ವಿಕೆಟ್ ನಷ್ಟಕ್ಕೆ 185 ರನ್ಗಳಿಸಿತು. ಇಂಗ್ಲೆಂಡ್ ಪರ ಅದ್ದೂರಿ ಬೌಲಿಂಗ್ ಮಾಡಿದ ಜೋಫ್ರಾ ಆರ್ಚರ್ 4 ವಿಕೆಟ್ ಪಡೆದು ಮಿಂಚಿದ್ರು.
ಟೀಮ್ ಇಂಡಿಯಾ ನೀಡಿದ 186 ರನ್ಗಳ ಟಾರ್ಗೆಟ್ ಬೆನ್ನತ್ತಿದ ಇಂಗ್ಲೆಂಡ್ ಕೂಡ ಆರಂಭಿಕ ಆಘಾತ ಅನುಭವಿಸಿತು. 9 ರನ್ಗಳಿಸಿದ್ದ ಜೋಸ್ ಬಟ್ಲರ್ ಮತ್ತು 14 ರನ್ಗಳಿಸಿದ್ದ ಡೇವಿಡ್ ಮಲನ್ಗೆ ವಿಕೆಟ್ ಕಳೆದುಕೊಂಡಿತು. ಆದ್ರೆ 40 ರನ್ಗಳಿಸಿದ ಜೇಸನ್ ರಾಯ್, 25 ರನ್ಗಳ ಕಾಣಿಕೆ ನೀಡಿದ ಜಾನಿ ಬೇರಿಸ್ಟೋ ಇಂಗ್ಲೆಂಡ್ಗೆ ಗೆಲುವಿನ ಭರವಸೆ ಮೂಡಿಸಿದ್ರು.
ಪಂದ್ಯದ ಗತಿ ಬದಲಿಸಿದ್ದು ಶಾರ್ದೂಲ್ ಠಾಕೂರ್..
ಇನ್ನು ಮಿಡಲ್ ಆರ್ಡರ್ನಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಬೆನ್ ಸ್ಟೋಕ್ಸ್ 4 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 46 ರನ್ಗಳಿಸಿದ್ರು. ಇನ್ನೇನು ಪಂದ್ಯ ಹೋಯ್ತು ಅನ್ನೋವಾಗಲೇ ಪಂದ್ಯದ ಗತಿ ಬದಲಿಸಿದ್ದು ಶಾರ್ದೂಲ್ ಠಾಕೂರ್. 17ನೇ ಓವರ್ ಮಾಡಲು ಬಂದ ಶಾರ್ದೂಲ್, ತಮ್ಮ ಮೊದಲೆರಡು ಬಾಲ್ನಲ್ಲಿ ಬೆನ್ ಸ್ಟೋಕ್ಸ್ ಮತ್ತು ಇಯಾನ್ ಮಾರ್ಗನ್ ವಿಕೆಟ್ ಪಡೆದು ಪಂದ್ಯದ ಗತಿಯನ್ನೇ ಬದಲಿಸಿದ್ರು.
ಶಾರ್ದೂಲ್ ಕೊನೆ ಓವರ್ನಲ್ಲಿ ಇಂಗ್ಲೆಂಡ್ ಗೆಲುವಿಗೆ 23 ರನ್ ಬೇಕಾಗಿತ್ತು. ಸ್ಟ್ರೈಕ್ನಲ್ಲಿದ್ದ ಜೋಫ್ರಾ ಆರ್ಚರ್ 1 ಬೌಂಡರಿ 1 ಸಿಕ್ಸರ್ ಸಿಡಿಸಿ ನಡುಕ ಹುಟ್ಟಿಸಿದ್ರು. ಆದ್ರೆ ಕೊನೆ ಎರಡು ಬಾಲ್ನಲ್ಲಿ ಒಂದು ವಿಕೆಟ್ ಪಡೆದ ಶಾರ್ದೂಲ್ ಠಾಕೂರ್, ಟೀಮ್ ಇಂಡಿಯಾಕ್ಕೆ ರೋಚಕ ಗೆಲುವು ತಂದುಕೊಟ್ರು. ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 177 ರನ್ಗಳಿಸಲಷ್ಟೇ ಶಕ್ತವಾಯ್ತು. ಟೀಮ್ ಇಂಡಿಯಾ ಪರ ಬೊಂಬಾಟ್ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದ್ರು.
ಇದನ್ನೂ ಓದಿ: India vs England 4th T20I: ಭಾರತಕ್ಕೆ ರೋಚಕ 8 ರನ್ ಗೆಲುವು!