ಸಿಕ್ಸ್ ಲೈನ್ ಬಳಿ ಸೂಪರ್ ಮ್ಯಾನ್​ನಂತೆ ಹಾರಿದ ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ: ರೋಚಕ ವಿಡಿಯೋ ಇಲ್ಲಿದೆ

|

Updated on: Jul 10, 2021 | 11:06 AM

19ನೇ ಓವರ್ ಬೌಲಿಂಗ್ ಮಾಡಿದ ಶಿಖಾ ಪಾಂಡೆ ತಮ್ಮ 5ನೇ ಎಸೆತವನ್ನು ಸ್ಲೋ ಆಗಿ ಎಸೆತದರು. ಕ್ರೀಸ್​ನಲ್ಲಿದ್ದ ಎಲೆನ್ ಜೋನ್ಸ್ ಸಿಕ್ಸ್​ಗೆಂದು ಬ್ಯಾಟ್ ಬೀಸಿದರು. ಈ ಸಂದರ್ಭ ಬೌಂಡರಿ ಲೈನ್ ಪಕ್ಕದಲ್ಲೇ ಇದ್ದ ಹರ್ಲೀನ್ ಅವರು ಹಾರಿ ಚೆಂಡನ್ನು ಹಿಡಿದರು.

ಸಿಕ್ಸ್ ಲೈನ್ ಬಳಿ ಸೂಪರ್ ಮ್ಯಾನ್​ನಂತೆ ಹಾರಿದ ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ: ರೋಚಕ ವಿಡಿಯೋ ಇಲ್ಲಿದೆ
Harleen deol
Follow us on

ಭಾರತ ಮಹಿಳಾ ಕ್ರಿಕೆಟ್ ತಂಡ ಸದ್ಯ ಆಂಗ್ಲರ ನಾಡಿನಲ್ಲಿ ಬೀಡುಬಿಟ್ಟಿದ್ದು ಇಂಗ್ಲೆಂಡ್ ವನಿತೆಯರ ವಿರುದ್ಧ ಟಿ-20 ಸರಣಿ ಆಡುತ್ತಿದೆ. ಏಕದಿನ ಸರಣಿಯಲ್ಲಿ 1-2 ಅಂತರದ ಸೋಲುಕಂಡ ಕೌರ್ ಪಡೆ ಟಿ-20 ಮೇಲೆ ಕಣ್ಣಿಟ್ಟಿದೆ. ಆದರೆ, ನಿನ್ನೆ ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದಲ್ಲೇ ಸೋಲುಂಡಿದೆ. ಈ ಬೇಸರದ ನಡುವೆ ಭಾರತೀಯರಿಗೆ ಸಂತಸ ನೀಡಿದ್ದು, ಟೀಮ್ ಇಂಡಿಯಾ ಮಹಿಳಾ ಆಟಗಾರ್ತಿ ಹರ್ಲೀನ್ ಡಿಯೋಲ್ ಹಿಡಿದ ಆ ರೋಚಕ ಕ್ಯಾಚ್. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್​ಗೆ ಆರಂಭಿಕರಾದ ಬ್ಯೂಮಂಟ್(18) ಮತ್ತು ಡೆನಿಯಲ್ ವ್ಯಾಟ್(31) ಬಿರುಸಿನ ಆರಂಭ ಒದಗಿಸಿದರು. ಬಳಿಕ ಬಂದ ನಾಯಕಿ ಹೀದರ್ ನೈಟ್(6) ಬಂದ ಬೆನ್ನಲ್ಲೆ ಪೆವಿಲಿಯನ್ ಸೇರಿಕೊಂಡರೆ, ನಂತರ ಶುರುವಾಗಿದ್ದು ನಟಾಲಿ ಸ್ಕಿವರ್ ಹಾಗೂ ಎಲೆನ್ ಜೋನ್ಸ್ ಆಟ.

ಭಾರತೀಯ ಬೌಲರ್​ಗಳನ್ನು ಕಾಡಿದ ಈ ಜೋಡಿ ಬೌಂಡರಿ-ಸಿಕ್ಸರ್​ಗಳ ಮಳೆ ಸುರಿಸಿದರು. ಬರೋಬ್ಬರಿ 78 ರನ್​ಗಳ ಜೊತೆಯಾಟ ಆಡಿ ತಂಡ ಸವಾಲಿನ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ಕಿವರ್ ಕೇವಲ 27 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಬಾರಿಸಿ 55 ರನ್ ಗಳಿಸಿ ಔಟ್ ಆದರು. ಇತ್ತ ಅಂತಿಮ ಹಂತದಲ್ಲಿ ಅಪಾಯಕಾರಿಯಾಗಿದ್ದ ಜೋನ್ಸ್​ಗೆ ಪೆವಿಲಿಯನ್ ಹಾದಿ ತೋರಿಸಿದ್ದು ಹರ್ಲೀನ್ ಡಿಯೋಲ್ ಹಿಡಿದ ಆ ಕ್ಯಾಚ್.

19ನೇ ಓವರ್ ಬೌಲಿಂಗ್ ಮಾಡಿದ ಶಿಖಾ ಪಾಂಡೆ ತಮ್ಮ 5ನೇ ಎಸೆತವನ್ನು ಸ್ಲೋ ಆಗಿ ಎಸೆತದರು. ಕ್ರೀಸ್​ನಲ್ಲಿದ್ದ ಎಲೆನ್ ಜೋನ್ಸ್ ಸಿಕ್ಸ್​ಗೆಂದು ಬ್ಯಾಟ್ ಬೀಸಿದರು. ಈ ಸಂದರ್ಭ ಬೌಂಡರಿ ಲೈನ್ ಪಕ್ಕದಲ್ಲೇ ಇದ್ದ ಹರ್ಲೀನ್ ಅವರು ಹಾರಿ ಚೆಂಡನ್ನು ಹಿಡಿದರು. ಆದರೆ, ಸಂಪೂರ್ಣವಾಗಿ ಕ್ಯಾರಿ ಮಾಡಲು ಸಾಧ್ಯವಾಗಿಲ್ಲ. ನಿಯಂತ್ರಣ ತಪ್ಪಿ ಸಿಕ್ಸ್​ ಗೇರೆ ದಾಟುವ ಹೊತ್ತಿಗೆ ಚೆಂಡನ್ನು ಕೈಯಿಂದ ಮೇಲೆ ಹಾರಿಸಿದರು. ಇದೇವೇಳೆ ಬೌಂಡರಿ ಲೈನ್​ನಿಂದಲೇ ಜಿಗಿದು ಸೂಪರ್ ಮ್ಯಾನ್​ನಂತೆ ಬಾಲ್ ಹಿಡಿದು ಜೋನ್ಸ್​ ಔಟ್ ಆಗಲು ಕಾರಣರಾದರು.

 

ಜೋನ್ಸ್ ಕೇವಲ 27 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಬಾರಿಸಿ 43 ರನ್ ಚಚ್ಚಿದರು. ಇಂಗ್ಲೆಂಡ್ ಮಹಿಳಾ ತಂಡ ಅಂತಿಮವಾಗಿ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 177 ರನ್ ಕಲೆಹಾಕಿತು. ಭಾರತ ಪರ ಶಿಖಾ ಪಾಂಡೆ 3 ವಿಕೆಟ್ ಕಿತ್ತರು.

ಇತ್ತ 178 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಭಾರತ ಮಹಿಳಾ ತಂಡ ಮೊದಲ ಓವರ್​ನಲ್ಲೇ ಶಫಾಲಿ ಶರ್ಮಾ(0) ವಿಕೆಟ್ ಕಳೆದುಕೊಂಡಿತು. ಸ್ಮೃತಿ ಮಂದಾನ(29) ಕೂಡ ಅಷ್ಟೊಂದು ಅಪಾಯಕಾರಿಯಾಗಿ ಗೋಚರಿಸಲಿಲ್ಲ. ನಾಯಕಿ ಹರ್ಮನ್ ಪ್ರೀತ್ ಕೌರ್ ಆಟ 1 ರನ್​ಗೆ ಅಂತ್ಯವಾಯಿತು. ಹರ್ಲೀನ್ ಡಿಯೊಲ್ 17 ರನ್ ಗಳಿಸಿ ಹಾಗೂ ದೀಪ್ತಿ ಶರ್ಮಾ 4 ರನ್ ಬಾರಿಸಿ ಗೆಲುವಿಗೆ ಹೋರಾಟ ನಡೆಸುತ್ತಿರುವಾಗ ವರುಣನ ಕಾಟ ಶುರುವಾಯಿತು.

ಎಷ್ಟೇ ಕಾದರು ಮಳೆ ನಿಲ್ಲದ ಪರಿಣಾಮ ಅಂತಿಮವಾಗಿ ಡಕ್ವರ್ತ್ ಲೂಯಿಸ್ ನಿಯಮ ಪ್ರಕಾರ ಇಂಗ್ಲೆಂಡ್​ಗೆ ಜಯ ಎಂದು ಘೊಷಿಸಲಾಯಿತು. ಇಂಗ್ಲೆಂಡ್ 18 ರನ್​ಗಳ ಜಯದೊಂದಿಗೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟಿ-20 ಪಂದ್ಯ ಜುಲೈ 12 ಭಾನುವಾರ ನಡೆಯಲಿದೆ.

ಒಂದು ವಿಶ್ವಕಪ್ ಆಡುವುದಕ್ಕಾದರೂ ನನಗೊಂದು ಅವಕಾಶ ಕೊಡಿ! ಸೆಲೆಕ್ಟರ್ ಬಳಿ ಮನವಿ ಮಾಡಿದ ದಿನೇಶ್ ಕಾರ್ತಿಕ್