AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದು ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತ ಮಹಿಳಾ ಹಾಕಿ ತಂಡ

ಜಪಾನ್‌ನಲ್ಲಿ ನಡೆದ ಏಷ್ಯನ್ ಗೇಮ್ಸ್ ಮಹಿಳಾ ಹಾಕಿ ಫೈನಲ್‌ನಲ್ಲಿ ಭಾರತ ಚೀನಾವನ್ನು 1-0 ಗೋಲುಗಳಿಂದ ಸೋಲಿಸಿ ಚಿನ್ನ ಗೆದ್ದಿದೆ. ಈ ಐತಿಹಾಸಿಕ ಜಯವು ಭಾರತಕ್ಕೆ 44 ವರ್ಷಗಳ ನಂತರ ಏಷ್ಯನ್ ಗೇಮ್ಸ್ ಹಾಕಿ ಚಿನ್ನ ತಂದಿದೆ, ಇದರೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ. ಇದು ದೇಶಕ್ಕೆ ಹೆಮ್ಮೆಯ ಕ್ಷಣ.

ಏಷ್ಯನ್ ಗೇಮ್ಸ್​ನಲ್ಲಿ ಚಿನ್ನ ಗೆದ್ದು ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತ ಮಹಿಳಾ ಹಾಕಿ ತಂಡ
Womens Hockey Team
ಪೃಥ್ವಿಶಂಕರ
|

Updated on:Oct 02, 2026 | 6:46 PM

Share

ಜಪಾನ್​ನ ಗಿಫು ಪ್ರಿಫೆಕ್ಚರಲ್ ಗ್ರೀನ್ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ ಗೇಮ್ಸ್​ ಮಹಿಳಾ ಹಾಕಿ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೀನಾ ಹಾಗೂ ಭಾರತ ಮಹಿಳಾ ಹಾಕಿ ತಂಡಗಳು ಮುಖಾಮುಖಿಯಾಗಿದ್ದವು. 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ ಈ ಪಂದ್ಯವನ್ನು ಗೆಲ್ಲುವುದು ಭಾರತ ಮಹಿಳಾ ಹಾಕಿ ತಂಡಕ್ಕೆ ಅತ್ಯವಶ್ಯಕವಾಗಿತ್ತು. ಅದರಂತೆ ಚಿನ್ನದ ಪದಕದ ಪಂದ್ಯದಲ್ಲಿ ಚೀನಾ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿದ ಭಾರತ ಮಹಿಳಾ ಹಾಕಿ ತಂಡ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದರ ಜೊತೆಗೆ ಬರೋಬ್ಬರಿ 44 ವರ್ಷಗಳ ನಂತರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದ ದಾಖಲೆ ನಿರ್ಮಿಸಿದೆ.

ಚಿನ್ನದ ಗೋಲು ಬಾರಿಸಿದ ಲಾಲ್ರೆಮ್ಸಿಯಾಮಿ

ಲಾಲ್ರೆಮ್ಸಿಯಾಮಿ ಬಾರಿಸಿದ ಏಕೈಕ ಗೋಲು ಇಡೀ ದೇಶವನ್ನೇ ಸಂಭ್ರಮಾಚರಣೆಯಲ್ಲಿ ಮುಳುಗಿಸಿದೆ. ಪಂದ್ಯದ ಮೊದಲ ಕ್ವಾರ್ಟರ್‌ನ 10 ನೇ ನಿಮಿಷದಲ್ಲಿ ಲಾಲ್ರೆಮ್ಸಿಯಾಮಿ, ಚೀನಾದ ರಕ್ಷಣಾ ಪಡೆಯನ್ನು ಧ್ವಂಸಗೊಳಿಸಿ ಗೋಲು ಬಾರಿಸುವಲ್ಲಿ ಯಶಸ್ವಿಯಾದರು. ಈ ಒಂದೇ ಒಂದು ಗೋಲು ಭಾರತಕ್ಕೆ ಅಜೇಯ ಮುನ್ನಡೆಯನ್ನು ನೀಡಿತು. ಈ ಮುನ್ನಡೆಯನ್ನು ಕೊನೆಯ ನಿಮಿಷದವರೆಗೂ ಕಾಯ್ದುಕೊಂಡ ಭಾರತ ಮಹಿಳಾ ತಂಡ, ಚೀನಾ ತಂಡಕ್ಕೆ ಒಂದೇ ಒಂದು ಅವಕಾಶವನ್ನು ಮಾಡಿಕೊಡದೆ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿತು.

ಆರಂಭದಲ್ಲೇ ಭಾರತಕ್ಕೆ ಮುನ್ನಡೆ

ಭಾರತ ಮಹಿಳಾ ಪಡೆ ಮೊದಲ ಕ್ವಾರ್ಟರ್‌ನಿಂದಲೇ ಚೀನಾ ಮೇಲೆ ಒತ್ತಡ ಹೇರಿತು. ಭಾರತದ ಪರ ತನ್ನ 200 ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ ಲಾಲ್ರೆಮ್ಸಿಯಾಮಿ 10 ನೇ ನಿಮಿಷದಲ್ಲಿ ಫೀಲ್ಡ್ ಗೋಲ್ ದಾಖಲಿಸಿದರು. ಇದು ಭಾರತಕ್ಕೆ ಆರಂಭಿಕ 1-0 ಮುನ್ನಡೆಯನ್ನು ನೀಡಿತು. ನಂತರ ಭಾರತ ಪೆನಾಲ್ಟಿ ಕಾರ್ನರ್ ಗಳಿಸಿತ್ತಾದರೂ ಮುನ್ನಡೆಯನ್ನು ದ್ವಿಗುಣಗೊಳಿಸುವ ಅವಕಾಶವನ್ನು ಕಳೆದುಕೊಂಡಿತು. ಆದಾಗ್ಯೂ, ಮೊದಲ ಕ್ವಾರ್ಟರ್ ಅಂತ್ಯದವರೆಗೂ ಭಾರತ ತಂಡ ಮುನ್ನಡೆ ಕಾಯ್ದುಕೊಂಡಿತು.

ಎರಡನೇ ಕ್ವಾರ್ಟರ್‌ನಲ್ಲಿ ಚೀನಾ ಆಕ್ರಮಣಕಾರಿಯಾಗಿ ಆಡಿ ನಿರಂತರವಾಗಿ ಭಾರತದ ಮೇಲೆ ಒತ್ತಡ ಹೇರಿತು. ಇದೇ ವೇಳೆ ಚೀನಾಗೆ ಪೆನಾಲ್ಟಿ ಕೂಡ ಸಿಕ್ಕಿತು. ಇದರಿಂದ ಚೀನಾ ಸಮಬಲ ಸಾಧಿಸುವ ಅವಕಾಶ ಪಡೆದುಕೊಂಡಿತು. ಆದರೆ ಭಾರತೀಯ ಮಹಿಳಾ ತಂಡದ ಅನುಭವಿ ಗೋಲ್‌ಕೀಪರ್ ಸವಿತಾ ಪುನಿಯಾ ಚೀನಾ ಸಮಬಲ ಸಾಧಿಸದಂತೆ ತಡೆಯುವಲ್ಲಿ ಯಶಸ್ವಿಯಾದರು. ಇದರ ನಂತರವೂ ಚೀನಾ ದಾಳಿಯನ್ನು ಮುಂದುವರೆಸಿತ್ತಾದರೂ ಭಾರತದ ರಕ್ಷಣಾ ಪಡೆ ಅದ್ಭುತ ಪ್ರದರ್ಶನ ನೀಡಿ ಚೀನಾದ ಪ್ರತಿಯೊಂದು ಪ್ರಯತ್ನವನ್ನು ವಿಫಲಗೊಳಿಸಿತು.

ಕೊನೆಯಲ್ಲಿ ತಂತ್ರ ಬದಲಿಸಿದ ಚೀನಾ

ಮೂರನೇ ಕ್ವಾರ್ಟರ್‌ನಲ್ಲೂ ಭಾರತದ ಪ್ರಾಬಲ್ಯ ಮುಂದುವರೆಯಿತು. ಹೀಗಾಗಿ ನಾಲ್ಕನೇ ಕ್ವಾರ್ಟರ್‌ನ ಕೊನೆಯಲ್ಲಿ ತನ್ನ ತಂತ್ರ ಬದಲಿಸಿದ ಚೀನಾ ಗೋಲ್‌ಕೀಪರ್ ಬದಲಿಗೆ 11 ಔಟ್‌ಫೀಲ್ಡ್ ಆಟಗಾರ್ತಿಯರೊಂದಿಗೆ ಆಡಲು ಮುಂದಾಯಿತು. ಆದರೆ ಚೀನಾದ ಈ ತಂತ್ರವೂ ಫಲ ಕೊಡಲಿಲ್ಲ. ಏಕೆಂದರೆ ಭಾರತ ಮಹಿಳಾ ಪಡೆ ಕೊನೆಯ ನಿಮಿಷಗಳಲ್ಲಿ ರಕ್ಷಣೆಗಿಂತ ದಾಳಿಯತ್ತ ಹೆಚ್ಚು ಗಮನಹರಿಸಿತು. ಇದರಿಂದಾಗಿ ಚೀನಾ ತಂಡಕ್ಕೆ ತನ್ನ ಗೋಲುಗಳ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ 1-0 ಅಂತರದಿಂದ ಪಂದ್ಯವನ್ನು ಜಯಿಸುವಲ್ಲಿ ಯಶಸ್ವಿಯಾಯಿತು.

44 ವರ್ಷಗಳ ಬರ ಅಂತ್ಯ

ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತೀಯ ಮಹಿಳಾ ತಂಡವು 1982 ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಒಮ್ಮೆ ಮಾತ್ರ ಚಿನ್ನದ ಪದಕವನ್ನು ಗೆದ್ದಿತ್ತು. ಅಂದಿನಿಂದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಭಾರತ ಹಾಕಿ ತಂಡಕ್ಕೆ ಚಿನ್ನದ ಪದಕವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.1998 ರಲ್ಲಿ ಫೈಲ್​ಗೇರಿದ್ದ ಮಹಿಳಾ ಪಡೆ ದಕ್ಷಿಣ ಕೊರಿಯಾ ಸೋತರೆ, 2018 ರಲ್ಲಿ ಜಪಾನ್ ವಿರುದ್ಧ ಸೋತು ಬೆಳ್ಳಿ ಪದಕಗಳಿಗೆ ತೃಪ್ತಿಪಟ್ಟಿಕೊಂಡಿತ್ತು. ಆದರೀಗ ನಗೋಯಾ ಮೈದಾನದಲ್ಲಿ ಹಾಲಿ ಚಾಂಪಿಯನ್ ಚೀನಾವನ್ನು ಸೋಲಿಸುವ ಮೂಲಕ, ಭಾರತೀಯ ಆಟಗಾರ್ತಿಯರು 44 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು.

ಆಟ ತಡವಾಗಿ ಆರಂಭ

ವಾಸ್ತವವಾಗಿ ಉಭಯ ತಂಡಗಳ ನಡುವಿನ ಈ ಪೈನಲ್ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆ ಅಥವಾ 3:30 ಕ್ಕೆ ಪ್ರಾರಂಭವಾಗಬೇಕಿತ್ತು. ಆದರೆ ಭಾರತ ಮತ್ತು ಚೀನಾ ತಂಡಗಳ ಬಸ್‌ಗಳು ಕ್ರೀಡಾಂಗಣಕ್ಕೆ ಬರುವ ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡವು. ಹೀಗಾಗಿ ಪಂದ್ಯವನ್ನು ತಡವಾಗಿ ಅಂದರೆ ಸಂಜೆ 4:15 ಕ್ಕೆ ಪ್ರಾರಂಭಿಸಲಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:04 pm, Fri, 2 October 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More