ನಿರೀಕ್ಷೆಯಂತೆ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಟೆಸ್ಟ್ ಸರಣಿಯಲ್ಲಿ ಮಣಿಸಿದೆ. ಕೊನೆಯ ಟೆಸ್ಟ್ನ ಎರಡನೇ ಇನ್ನಿಂಗ್ಸನಲ್ಲಿ ಜೋ ರೂಟ್ ತಂಡ ಪ್ರತಿರೋಧ ನೀಡಬಹುದೆಂದು ಎಣಿಸಲಾಗಿತ್ತು, ಆದರೆ ಮೊಟೆರಾದ ನರೇಂದ್ರ ಮೋದಿ ಮೈದಾನದಲ್ಲಿ ಹಾಗಾಗಲಿಲ್ಲ. ಭಾರತದ ಸ್ಪಿನ್ದ್ವಯರಾದ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅವರ ದಾಳಿಯನ್ನು ಎದುರಿಸಲಾರದೆ ಆಂಗ್ಲರು ಭಾರತೀಯರಿಗೆ ಸುಲಭವಾಗಿ ಶರಣಾದರು. ಭಾರತ ಟೆಸ್ಟ್ ಮತ್ತು ಸರಣಿಯನ್ನು ಗೆದ್ದಿರಿವುದೇನೋ ನಿಜ; ಅದರೆ ಈ ಸರಣಿ ಮತ್ತು ಇತ್ತೀಚಿಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಅಡಿದ ಸರಣಿಯಲ್ಲಿ ಭಾರತದ ಅನುಭವಿ ಬ್ಯಾಟ್ಸ್ಮನ್ಗಳು ತಾವು ನೀಡಿದ ಪ್ರದರ್ಶನಗಳ ಬಗ್ಗೆ ಅತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಿಮಗೆ ಗೊತ್ತಿರುವಂತೆ, ಕೊನೆ ಟೆಸ್ಟ್ನ ಒಂದು ಹಂತದಲ್ಲಿ ಭಾರತ 146 ರನ್ಗಳಾಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಎದುರಾಳಿಗಳಿಗೆ ಲೀಡ್ ಬಿಟ್ಟುಕೊಡುವ ಭೀತಿ ಮೂಡಿದ್ದು ಸುಳ್ಳಲ್ಲ.
ಆದರೆ 7 ನೇ ವಿಕೆಟ್ಗೆ ಇತ್ತೀಚಿನ ದಿನಗಳಲ್ಲಿ ಭಾರತದ ಬ್ಯಾಟಿಂಗ್ಗೆ ಸಂಬಂಧಿಸಿದಂತೆ ಆಪತ್ಬಾಂಧವರಂತೆ ಗೋಚರಿಸುತ್ತಿರುವ ರಿಷಭ್ ಪಂತ್ ಮತ್ತು ಬೌಲಿಂಗ್ ಅಲ್ರೌಂಡರ್ ವಾಷಿಂಗ್ಟನ್ ಸುಂದರ್ ಪಾಲುದಾರಿಕೆಯಲ್ಲಿ ಬಂದ 113 ರನ್ಗಳು ಭಾರತವನ್ನು ಅಪಾಯದಿಂದ ಪಾರು ಮಾಡಿದ್ದೂ ಅಲ್ಲದೆ ಇಂಗ್ಲೆಂಡ್ ಮೊತ್ತವನ್ನು ದಾಟಲು ನೆರವಾಯಿತು. ಪಂತ್ 101 ರನ್ ಬಾರಿಸಿ ತಮ್ಮ ವೃತ್ತಿಬದುಕಿನ 3ನೇ ಶತಕ ದಾಖಲಿದರು.
ಈ ಜೊತೆಯಾಟದ ನಂತರ ಸುಂದರ್ ಮತ್ತೊಬ್ಬ ಟೇಲ್ಎಂಡರ್ ಅಕ್ಷರ್ ಪಟೇಲ್ ಅವರೊಂದಿಗೆ 8ನೇ ವಿಕೆಟ್ಗೆ 106 ರನ್ಗಳ ಜೊತೆಯಾಟದಲ್ಲಿ ಪಾಲ್ಗೊಂಡರು. ಅಕ್ಷರ್ 43 ರನ್ ಗಳಿಸದರೆ ಸುಂದರ್ 96 ರನ್ ಗಳಿಸಿ ಅಜೇಯರಾಗಿ ಉಳಿದರು.
ಭಾರತದ ಟಾಪ್ ಆರ್ಡರ್ನಲ್ಲಿ ರೋಹಿತ್ ಶರ್ಮ ಮಾತ್ರ ಉತ್ತಮವಾಗಿ ಅಡಿ 49 ರನ್ ಗಳಿಸಿದರು. ಅವರ ಬ್ಯಾಟಿಂಗ್ ಬಗ್ಗೆ ದೂರುಗಳಿಲ್ಲ. ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭ ಆಟಗಾರ ಶುಭ್ಮನ್ ಗಿಲ್ ಸೊನ್ನೆಗೆ ಔಟಾದರೆ, ಅನುಭವಿ ಆಟಗಾರ ಚೇತೇಶ್ವರ್ ಪೂಜಾರಾ 17 ರನ್ ಗಳಿಸಿದರು ಮತ್ತು ಉಪ ನಾಯಕ ಅಜಿಂಕ್ಯಾ ರಹಾನೆ 27 ರನ್ ಬಾರಿಸಿದರು. ಪಿಚ್ನಲ್ಲಿ ಅಂಥದ್ದೇನೂ ಇರಲಿಲ್ಲ, ರನ್ ಗಳಿಸಬಹುದೆಂದು ಪಂತ್, ಸುಂದರ್ ಮತ್ತು ಅಕ್ಷರ್ ಸಾಬೀತು ಮಾಡಿದರು. ಹಾಗಾಗಿ ಈ ಪ್ರಮುಖ ಬ್ಯಾಟ್ಸ್ಮನ್ಗಳ ವೈಫಲ್ಯ ಕ್ರಿಕೆಟ್ ಪ್ರೇಮಿಗಳಲ್ಲಿ ಬೇಜಾರು ಮೂಡಿಸಿದೆ.
ಹೀಗೆ ಪದೇಪದೆ ಆಗುತ್ತಿದೆ. ಇದೇ ಸರಣಿಯ ಎರಡನೇ ಟೆಸ್ಟನಲ್ಲಿ ಭಾರತದ ಪ್ರಮುಖ ಬ್ಯಾಟ್ಸ್ಮನ್ಗಳು ಫೇಲಾದಾಗ ರವಿಚಂದ್ರನ್ ಅಶ್ವಿನ್ ಶತಕ ಬಾರಿಸಿ ಭಾರತಕ್ಕೆ ಗೆಲುವಿನ ಲೀಡ್ ಕೊಡಿಸಿದ್ದರು. ಇಂಗ್ಲೆಂಡ್ ಜುಗಳಿಸಿದ ಮೊದಲ ಟೆಸ್ಟ್ನಲ್ಲಿ ಏನು ಘಟಿಸಿತು ಅಂತ ಎಲ್ಲರಿಗೂ ಗೊತ್ತಿದೆ. ಆ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಪಂತ್ 91 ರನ್, ಸುಂದರ್ ಅಜೇಯ 85 ಮತ್ತು ಅಶ್ವಿನ್ 31 ರನ್ ಬಾರಿಸದ್ದರಿಂದಲೇ ಭಾರತ 337ರ ಮೊತ್ತ ಗಳಿಸಲು ಸಾಧ್ಯವಾಗಿತ್ತು.
ಅದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ನಲ್ಲಿ ರಹಾನೆ ಶತಕ ಬಾರಿಸಿದ್ದರೆ, ರವೀಂದ್ರ ಜಡೇಜಾ 57 ರನ್ ಬಾರಿಸಿದ್ದರು.
ಅದೇ ಸರಣಿಯ ಮೂರನೇ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಪಂತ್ 97 ರನ್ ಬಾರಿಸಿ ಔಟಾಗಿದ್ದರು. ನಂತರ ಅಶ್ವಿನ್ (ಅಜೇಯ 39) ಮತ್ತು ಹನುಮ ವಿಹಾರಿ (ಅಜೇಯ 23) ಭಾರತ ಟೆಸ್ಟ್ ಡ್ರಾ ಮಾಡಿಕೊಳ್ಳಲು ನೆರವಾಗಿದ್ದರು. ಅಂದು ಬ್ಯಾಟ್ ಮಾಡುವಾಗ ಅವರಿಬ್ಬರು ಆಸ್ಸೀ ವೇಗಿಗಳ ಎಸೆತಗಳಿಂದ ಹಲವಾರು ಬಾರಿ ಪೆಟ್ಟು ತಿಂದರು.
ಬ್ರಿಸ್ಬೇನ್ನಲ್ಲಿ ನಡೆದ ಕೊನೆಯ ಟೆಸ್ಟ್ ಯಾರೂ ತಾನೆ ಮರೆತಾರು? ಸುಂದರ್ (62) ಮತ್ತು ಶಾರ್ದುಲ್ ಠಾಕುರ್ (67) ಅವರ ದಿಟ್ಟ ಬ್ಯಾಟಿಂಗ್ ನೆರವಿನಿಂದ ಭಾರತದ ಸ್ಕೋರ್ 186/6 ನಿಂದ 336 ಕ್ಕೆ ತಲುಪಿತ್ತು. ಆ ಟೆಸ್ಟ್ ಭಾರತ ಗೆದ್ದಿದ್ದು ಎರಡನೇ ಇನ್ನಿಂಗ್ಸ್ನಲ್ಲಿ ಪಂತ್ ಅವರ ಅಜೇಯ 89 ರನ್ಗಳ ಅಪ್ರತಿಮ ಆಟದಿಂದ . ಭಾರತಕ್ಕೆ ಗೆಲುವು ಕೊಡಿಸಲು ಪಂತ್ ಜೊತೆ ನೆರವಾಗಿದ್ದು 22 ರನ್ಗಳ ಮಹತ್ವಪೂರ್ಣ ಕಾಣಿಕೆ ನೀಡಿದ ಸುಂದರ್.
ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ಭಾರತದ ಪ್ರಮುಖ ಬ್ಯಾಟ್ಸ್ಮನ್ಗಳು ರನ್ಗಳಿಗಾಗಿ ಕೆಳ ಕ್ರಮಾಂಕದ ಆಟಗಾರರನ್ನು ನೆಚ್ಚಿಕೊಳ್ಳುತ್ತಿರುವುದು ಚಾಂಪಿಯನ್ ತಂಡದ ಲಕ್ಷಣವಲ್ಲ. ಬೌಲರ್ಗಳು ತಮ್ಮ ಕೆಲಸವನ್ನು ಅದ್ಭುತವಾದ ರೀತಿಯಲ್ಲಿ ಮಾಡುತ್ತಿದ್ದಾರೆ, ಅವರ ಮೇಲೆ ರನ್ ಗಳಿಸುವ ಜವಾಬ್ದಾರಿಯನ್ನೂ ಹೊರೆಸುವುದು ಸರ್ವಥಾ ತಪ್ಪು.
ಕೊಹ್ಲಿ, ಗಿಲ್, ರಹಾನೆ, ಪೂಜಾರಾ ಮೊದಲಾದವರು ತಮ್ಮ ಜವಾಬ್ದಾರಿಗಳನ್ನು ತಾವೇ ಹೊತ್ತುಕೊಳ್ಳುವುದು ಟೀಮ್ ಇಂಡಿಯಾ ದೃಷ್ಟಿಯಿಂದ ಲೇಸು.
ಇದನ್ನೂ ಓದಿ: India vs England 4th Test Day 3: ಭರ್ಜರಿ ಜಯದೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದ ಭಾರತ
Published On - 7:01 pm, Sat, 6 March 21