ಐಪಿಎಲ್ 2021 ಸರಣಿ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದೆ. ಒಬ್ಬರಾದ ಮೇಲೊಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವ ಕಾರಣ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದ್ದು, ಈ ಬಾರಿಯ ಸರಣಿ ಅರ್ಧಕ್ಕೆ ಮೊಟಕುಗೊಂಡಂತಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಬಿಸಿಸಿಐ, ಕೊರೊನಾ ಉಲ್ಬಣಿಸುತ್ತಿರುವ ಕಾರಣದಿಂದ ಸರಣಿಯನ್ನು ನಿಲ್ಲಿಸುವ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿದೆ. ನಿನ್ನೆ (ಮಾರ್ಚ್ 3) ಆರ್ಸಿಬಿ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯ ಆರಂಭವಾಗಬೇಕಿದ್ದ ಕೆಲ ಸಮಯದ ಮುಂಚಿತವಾಗಿ ಕೆಕೆಆರ್ ತಂಡದ ವರುಣ್ ಚಕ್ರವರ್ತಿಗೆ ಹಾಗೂ ಸಂದೀಪ್ ವಾರಿಯರ್ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದು ವರದಿಯಾಗಿತ್ತು. ಈ ಕಾರಣದಿಂದಾಗಿ ನಿನ್ನೆಯ ಪಂದ್ಯವನ್ನೂ ಮುಂದೂಡಲಾಗಿತ್ತು.
ಆದರೆ, ಅವರಿಬ್ಬರಿಗೆ ಕೊರೊನಾ ಕಾಣಿಸಿಕೊಂಡ ಬೆನ್ನಲ್ಲೇ ಇಂದು (ಮಾರ್ಚ್ 4) ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಮಿತ್ ಮಿಶ್ರಾ ಹಾಗೂ ಸನ್ರೈಸರ್ಸ್ ತಂಡದ ವೃದ್ಧಿಮಾನ್ ಸಹಾಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಜತೆಗೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಎಲ್.ಬಾಲಾಜಿ ಹಾಗೂ ಬಸ್ ಕ್ಲೀನರ್ಗೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.
ಕಳೆದ ಬಾರಿ ಕೊರೊನಾ ಆತಂಕದ ನಡುವೆಯೂ ಯುಎಈನಲ್ಲಿ ಸರಣಿ ಆಯೋಜಿಸಲಾಗಿದ್ದು, ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಆದರೆ, ಈ ಬಾರಿ ಹೊರದೇಶಗಳಲ್ಲಿ ಆಯೋಜನೆ ಮಾಡಲು ನಿರಾಕರಿಸಿ ಬಯೋ ಬಬ್ಬಲ್ ಮೂಲಕ ಸುರಕ್ಷಿತವಾಗಿ ಭಾರತದಲ್ಲೇ ಸರಣಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿತ್ತು. ಅದಕ್ಕಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನೂ ತೆಗೆದುಕೊಂಡು ಪಂದ್ಯಗಳನ್ನು ಆಯೋಜಿಸಿತ್ತು. ಆದರೆ, ಇದೀಗ ಒಬ್ಬೊಬ್ಬರೇ ಆಟಗಾರರಿಗೆ ಸೋಂಕು ಕಾಣಿಸಿಕೊಳ್ಳಲಾರಂಭಿಸಿದ ಕಾರಣ ಬಿಸಿಸಿಐ ಸರಣಿಯನ್ನೇ ಸ್ಥಗಿತಗೊಳಿಸಿದೆ.
ಇದನ್ನೂ ಓದಿ:
ಬಿಸಿಸಿಐ ಮಾನ ಆಸ್ಟ್ರೇಲಿಯಾದಲ್ಲಿ ಹರಾಜು! ಆಸಿಸ್ ಆಟಗಾರನಿಂದ ಹೊರಬಿತ್ತು ಐಪಿಎಲ್ನಲ್ಲಿ ಕೊರೊನಾ ಸ್ಫೋಟ ವಿಚಾರ
Published On - 1:07 pm, Tue, 4 May 21