ಐಪಿಎಲ್ ಶಿಷ್ಟಾಚಾರ ಮುರಿದ.. ಈ ಬಾರಿಯ ಗೆಲುವಿನ ಕುದುರೆ, ಕ್ಯಾಪ್ಟನ್​ ವಿರಾಟ್​ ಕೊಹ್ಲಿಗೆ ಕಿವಿಹಿಂಡಿದ ಐಪಿಎಲ್!

|

Updated on: Apr 15, 2021 | 12:02 PM

ಕ್ಯಾಪ್ಟನ್​ ಕೊಹ್ಲಿ ಐಪಿಎಲ್ ಅಪರಾಧ 2.2 ಸಂಹಿತೆಯಲ್ಲಿ ಲೆವೆಲ್​ 1 ಅಪರಾಧ ಎಸಗಿದ್ದಾರೆ ಎಂದು ಐಪಿಎಲ್​ ಮ್ಯಾನೇಜ್ಮೆಂಟ್​ ಕಿಡಿಕಾರಿದೆ. ಅಂದರೆ ಪಂದ್ಯದ ವೇಳೆ ಕ್ರಿಕೆಟ್​ ಸಲಕರಣೆ/ವಸ್ತ್ರಗಳಿಗೆ ಅಗೌರವ ತೋರುವುದು, ಮೈದಾನದಲ್ಲಿನ ಕ್ರಿಕೆಟ್​ ಉಪಕರಣಗಳಿಗೆ ಧಕ್ಕೆಯುಂಟುಮಾಡುವುದು ಶಿಸ್ತು ಉಲ್ಲಂಘನೆಯಾಗುತ್ತದೆ.

ಐಪಿಎಲ್ ಶಿಷ್ಟಾಚಾರ ಮುರಿದ.. ಈ ಬಾರಿಯ ಗೆಲುವಿನ ಕುದುರೆ, ಕ್ಯಾಪ್ಟನ್​ ವಿರಾಟ್​ ಕೊಹ್ಲಿಗೆ ಕಿವಿಹಿಂಡಿದ ಐಪಿಎಲ್!
ವಿರಾಟ್​ ಕೊಹ್ಲಿ
Follow us on

ಪ್ರಸಕ್ತ ಐಪಿಎಲ್ 2021ರಲ್ಲಿ ಆಡಿದ ಮೊದಲ ಎರಡು ಪಂದ್ಯಗಳನ್ನೂ ಗೆದ್ದು ಬೀಗುತ್ತಿರುವ, ಗೆಲುವಿನ ಕುದುರೆ ಎನಿಸಿರುವ ಕ್ಯಾಪ್ಟನ್​ ವಿರಾಟ್​ ಕೊಹ್ಲಿಗೆ ಐಪಿಎಲ್ ಶಿಷ್ಟಾಚಾರ ಮುರಿದಿದ್ದಕ್ಕೆ ದಂಡ ಹಾಕಲಾಗಿದೆ. ಮೊದಲೇ ಕ್ರಿಕೆಟ್​ ಅಂದರೆ ಶಿಸ್ತಿನ ಆಟ. ಅಂತಹುದರಲ್ಲಿ ಶಿಸ್ತು, ಶಿಷ್ಟಾಚಾರಗಳನ್ನು ಉಲ್ಲಂಘಿಸಿವುದು ಭಾರೀ ಅಪಚಾರವಾದೀತು. ಐಪಿಎಲ್​ ಆಟಗಾರರು ಯಾರೇ ಇರಲಿ, ಜನ ಅವರನ್ನು ಅನುಕರಿಸುವುದು ಹೆಚ್ಚು. ಹಾಗಾಗಿ ಅಂತಹವರು ಹೆಚ್ಚು ಜವಾಬ್ದಾರಿಯಿಂದ ಆಡಬೇಕಾಗುತ್ತದೆ. ಅಶಿಸ್ತು, ತೋರುವುದೇ ಆಗಲಿ ಅಥವಾ ಆಟದ ರೀತಿರಿವಾಜುಗಳಿಗೆ ಧಕ್ಕೆ ತರುವುದೇ ಆಗಲಿ ಸರ್ವತಾ ಸಾಧುವಲ್ಲ.

ಪರಿಸ್ಥಿತಿ ಹೀಗಿರುವಾಗ ಕ್ಯಾಪ್ಟನ್​ ಕೊಹ್ಲಿ ಐಪಿಎಲ್ ಅಪರಾಧ 2.2 ಸಂಹಿತೆಯಲ್ಲಿ ಲೆವೆಲ್​ 1 ಅಪರಾಧ ಎಸಗಿದ್ದಾರೆ ಎಂದು ಐಪಿಎಲ್​ ಮ್ಯಾನೇಜ್ಮೆಂಟ್​ ಕಿಡಿಕಾರಿದೆ. ಅಂದರೆ ಪಂದ್ಯದ ವೇಳೆ ಕ್ರಿಕೆಟ್​ ಸಲಕರಣೆ/ವಸ್ತ್ರಗಳಿಗೆ ಅಗೌರವ ತೋರುವುದು, ಮೈದಾನದಲ್ಲಿನ ಕ್ರಿಕೆಟ್​ ಉಪಕರಣಗಳಿಗೆ ಧಕ್ಕೆಯುಂಟುಮಾಡುವುದು ಶಿಸ್ತು ಉಲ್ಲಂಘನೆಯಾಗುತ್ತದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಇಂತಹ ದುರ್ನಡತೆ ತೋರಿದ ಆರೋಪದ ಮೇಲೆ ಐಪಿಎಲ್​ ಶಿಸ್ತುಪಾಲನಾ ಸಮಿತಿ ಅವರಿಗೆ ಕಿವಿ ಹಿಂಡಿದೆ. ನಿನ್ನೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ವಿರುದ್ಧ ನಡೆದ ಪ್ರಸಕ್ತ ಟೂರ್ನಿಯ 6ನೆ ಪಂದ್ಯದಲ್ಲಿ 29 ಬಾಲ್​ಗೆ 33 ರನ್​ ಗಳಿಸಿದ್ದ ವಿರಾಟ್​ ಕೊಹ್ಲಿಯನ್ನು ಜಾಸನ್​ ಹೋಲ್ಡರ್​ ಔಟ್​ ಮಾಡಿದ್ದರು. ಹೋಲ್ಡರ್​ ಬೌಲಿಂಗ್​ ವೇಳೆ ಕೊಹ್ಲಿ ಸಿಕ್ಸ್​ ಹೊಡೆಯುವ ಪ್ರಯತ್ನ ಮಾಡಿದ್ದರು. ಎಡ್ಜ್​ ಆಗಿ ಅದು ಕ್ಯಾಚ್​ ಆಗಿತ್ತು. ಈ ಮೂಲಕ ಕೊಹ್ಲಿ ಕೇವಲ 33 ರನ್​ಗಳಿಗೆ ನಿರ್ಗಮಿಸಿದರು.

ಆದರೆ ಹೀಗೆ ಸಡನ್​ ಆಗಿ ಔಟ್​ ಆದ್ದರಿಂದ ಬ್ಯಾಟ್ಸ್​ ಮನ್​ ವಿರಾಟ್​ ಕೊಹ್ಲಿ ಅಸಮಾಧಾನಗೊಂಡಿದ್ದರು. ಇದರಿಂದ ಮೈದಾನದಿಂದ ನಿರ್ಗಮಿಸುವಾಗ ಆರ್​ಸಿಬಿ ನಾಯಕ ಕೊಹ್ಲಿ ಬೌಂಡರಿ ಗೆರೆಯ ಬಳಿ ಜೋಡಿಸಿದ್ದ ಜಾಹೀರಾತು ಕಟ್ಟೆಗೆ ಬ್ಯಾಟ್​ನಿಂದ ಬಡಿದಿದ್ದಾರೆ. ಮುಂದೆ.. ತಂಡ ಕುಳಿತುಕೊಳ್ಳುವ ಜಾಗದಲ್ಲಿಯೂ ಆಕ್ರೋಶದಿಂದ ಚೇರ್​ಗೆ ಗುದ್ದಿದ್ದಾರೆ. ಇದು ಶಿಸ್ತು ಉಲ್ಲಂಘನೆಯಾಗುತ್ತದೆ. ಇದರಲ್ಲಿ ಮ್ಯಾಚ್​ ರೆಫರಿ ತೀರ್ಮಾನವೇ ಅಂತಿಮ ಮತ್ತು ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಎಂದು ಐಪಿಎಲ್​ ಶಿಸ್ತುಪಾಲನಾ ಸಮಿತಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ನಿನ್ನೆಯ ಪಂದ್ಯ ಹೀಗೆ ಸಾಗಿತ್ತು..
ನಿನ್ನೆ ನಡೆದ ಆರ್​ಸಿಬಿ-ಎಸ್​ಆರ್​ಎಚ್ ನಡುವಿನ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ರನ್​ಗಳ ರೋಚಕ ಗೆಲುವು ದಾಖಲಿಸಿದೆ. ಹೈದರಾಬಾದ್ ತಂಡದ ಪರ ನಾಯಕ ಡೇವಿಡ್ ವಾರ್ನೆರ್ ಹಾಗೂ ಮನೀಶ್ ಪಾಂಡೆ ಉತ್ತಮ ಆಟವಾಡಿ ಗೆಲ್ಲುವ ಸೂಚನೆ ನೀಡಿದ್ದರು. ಆದರೆ, ಅವರಿಬ್ಬರು ಔಟ್ ಆದ ಬಳಿಕ ಕ್ರೀಸ್​ಗೆ ಇಳಿದ ಆಟಗಾರರು ತಂಡವನ್ನು ಮುನ್ನಡೆಸುವ ಮನಮಾಡಲಿಲ್ಲ.

ಆರ್​ಸಿಬಿ ಬೌಲರ್​ಗಳು ಡೆತ್ ಓವರ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ಸನ್​ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್​ಅಪ್ ಧೂಳಿಪಟ ಮಾಡಿದರು. ಆರ್​ಸಿಬಿ ಪರ ಶಹಬಾಜ್ ಅಹ್ಮದ್ 2 ಓವರ್ ಬೌಲ್ ಮಾಡಿ ಕೇವಲ 7 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದರು. ಒಂದೇ ಓವರ್​ನಲ್ಲಿ ಶಹಬಾಜ್ 3 ವಿಕೆಟ್ ಪಡೆದಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿತು.

ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್​ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 149 ರನ್ ದಾಖಲಿಸಿತ್ತು. ಈ ಮೂಲಕ ಸನ್​ರೈಸರ್ಸ್ ಹೈದರಾಬಾದ್​ಗೆ ಗೆಲ್ಲಲು 150 ರನ್​ಗಳ ಸುಲಭ ಟಾರ್ಗೆಟ್ ನೀಡಿತ್ತು.

ಇದನ್ನು ಓದಿ: SRH vs RCB, IPL 2021 Match 6 Result: ಶಹಬಾಜ್ ಅಹ್ಮದ್ ಮ್ಯಾಜಿಕ್! ರೋಚಕ ಪಂದ್ಯದಲ್ಲಿ ಗೆದ್ದ ಆರ್​ಸಿಬಿ; ಸನ್​ರೈಸರ್ಸ್​ಗೆ ಮತ್ತೆ ಸೋಲು

Published On - 11:55 am, Thu, 15 April 21