
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದೆ ಮತ್ತು ರಾಜಸ್ಥಾನ್ ರಾಯಲ್ಸ್ (ಆರ್ಆರ್) ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿದೆ. 178 ರನ್ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಕೊಹ್ಲಿ ಬಳಗ ಈ ಸಲ ಕಪ್ ಗೆಲ್ಲುವ ಭರವಸೆಯನ್ನು ಇನ್ನಷ್ಟು ಹೆಚ್ಚಿಸಿದೆ. ಋತುವಿನ ಮೊದಲ ಪಂದ್ಯವನ್ನು ವಾಂಖೆಡೆ ಸ್ಟೇಡಿಯಂನಲ್ಲಿ ಆಡುತ್ತಾ, ಕೊಹ್ಲಿ ಹಾಗೂ ಕನ್ನಡಿಗ ಪಡಿಕ್ಕಲ್ ಆರ್ಆರ್ ತಂಡದ ಪ್ರತಿ ಬೌಲರ್ಗಳನ್ನು ಮನಸೋ ಇಚ್ಚೆ ದಂಡಿಸಿದರು. ಈ ಇನ್ನಿಂಗ್ಸ್ನಲ್ಲಿ ಪಡಿಕ್ಕಲ್ ಪ್ರಮುಖ ಪಾತ್ರ ವಹಿಸಿ ಕೇವಲ 52 ಎಸೆತಗಳಲ್ಲಿ 101 ರನ್ ಗಳಿಸಿದರು. ಈ ಋತುವಿನಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ ಕೂಡ ಅಜೇಯರಾಗಿ 47 ಎಸೆತಗಳಲ್ಲಿ 72 ರನ್ ಗಳಿಸಿದರು.
ಮಗಳು ವಮಿಕಾಗೆ ಈ ಅರ್ಧ ಶತಕ
ಐಪಿಎಲ್ನಲ್ಲಿ ಕೊಹ್ಲಿ ಹೀಗೆ ನಿಯಮಿತವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯದೇ ಕೆಲ ವರ್ಷಗಳೇ ಆಗಿಹೋಗಿದ್ದವು. ಜತೆಗೆ ತನ್ನ ಈ ನಿರ್ಣಯಕ್ಕೆ ನ್ಯಾಯ ಒದಗಿಸಿರುವ ಅವರು ಉತ್ತಮ ಪ್ರದರ್ಶನ ತೋರಿಸುತ್ತಿದ್ದಾರೆ. ಈ ಆವೃತ್ತಿಯ ಮೊದಲ ಅರ್ಧಶತಕವನ್ನು ಪೂರ್ಣಗೊಳಿಸಿದ ಕೂಡಲೇ, ಆರ್‌ಸಿಬಿ ನಾಯಕ ತನ್ನ ಮಗಳು ವಮಿಕಾಗೆ ಈ ಅರ್ಧ ಶತಕವನ್ನು ಅರ್ಪಿಸಿದರು. ಆರ್‌ಸಿಬಿ ಆಡಳಿತವು ಆಟಗಾರರ ಕುಟುಂಬ ಸದಸ್ಯರೊಂದಿಗೆ ಇರಲು ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ, ಕೊಹ್ಲಿ ಅವರ ಪತ್ನಿ ಅನುಷ್ಕಾ ಮತ್ತು ಮಗಳು ವಮಿಕಾ ಕೊಹ್ಲಿಯೊಂದಿಗೆ ನೆಲೆಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ಕೊಹ್ಲಿ ತನ್ನ ಮಗಳತ್ತ ಕೈಗಳನ್ನು ತೊಟ್ಟಿಲನ್ನು ತೂಗುವಂತೆ ಮಾಡಿ ಅರ್ಧ ಶತಕವನ್ನು ಅರ್ಪಿಸಿದರು.
ಪಾಯಿಂಟ್ ಟೇಬಲ್ನಲ್ಲಿ ಆರ್‌ಸಿಬಿ ಅಗ್ರ ಸ್ಥಾನ
ಪಾಯಿಂಟ್ ಟೇಬಲ್ನಲ್ಲಿ ಆರ್‌ಸಿಬಿ ಅಗ್ರ ಸ್ಥಾನವನ್ನು ಮತ್ತೆ ಪಡೆದುಕೊಂಡಿದೆ. ಟೂರ್ನಿಯಲ್ಲಿ ಇದುವರೆಗೆ ಅಜೇಯವಾಗಿರುವ ಏಕೈಕ ತಂಡವಾದ ಆರ್‌ಸಿಬಿ ತಮ್ಮ ಖಾತೆಯಲ್ಲಿ 4 ಗೆಲುವುಗಳು ಮತ್ತು 8 ಅಂಕಗಳನ್ನು ಹೊಂದಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಅಂತಿಮ ಎಸೆತಗಳ ಜಯದೊಂದಿಗೆ ಅವರು ತಮ್ಮ ಆವೃತ್ತಿಯನ್ನು ಆರಂಭಿಸಿದ್ದರು. ಅದರೆ, ಕಳೆದ ಪಂದ್ಯದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೇಲೇರಿದ್ದ ಚೆನ್ನೈ, ಆರ್ಸಿಬಿಯಿಂದ ಮೊದಲ ಸ್ಥಾನವನ್ನು ಕಿತ್ತುಕೊಂಡಿತ್ತು. ಇದೀಗ ಮತ್ತೆ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಆರ್‌ಸಿಬಿ ಚೆನ್ನೈನಿಂದ ತನ್ನ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಮುಂಬೈ ನಂತರ ಆರ್‌ಸಿಬಿ ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಆರ್ ಆರ್ ತಂಡವನ್ನು ಸೋಲಿಸುವ ಮೂಲಕ ನಂಬರ್ ಒನ್ ಪಟ್ಟಕ್ಕೆ ಏರಿದೆ. ಆರ್‌ಸಿಬಿ ಈಗ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಬಲಿಷ್ಠ ತಂಡಗಳನ್ನೇ ಎದುರಿಸಿದ್ದು, ಎಲ್ಲಾ ಪಂದ್ಯಗಳಲ್ಲೂ ಗೆಲುವು ದಾಖಲಿಸಿರುವುದು ತಂಡಕ್ಕೆ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಈ ಆವೃತ್ತಿಯ ಮೂರನೇ ಹಂತಕ್ಕಾಗಿ ಅಹಮದಾಬಾದ್‌ಗೆ ಪ್ರಯಾಣಿಸುತ್ತಿರುವುದರಿಂದ ಆರ್‌ಸಿಬಿ ಮುಂಬಯಿಯಲ್ಲಿ ಇನ್ನು ಒಂದು ಪಂದ್ಯವನ್ನು ಮಾತ್ರ ಆಡಲಿದೆ. ಅಹಮದಾಬಾದ್‌ನಲ್ಲಿ ನಾಲ್ಕು ಪಂದ್ಯಗಳ ನಂತರ ಆರ್‌ಸಿಬಿ ಕೋಲ್ಕತ್ತಾಗೆ ಪ್ರಯಾಣಿಸಲಿದ್ದು, ಅಲ್ಲಿ ಅವರು ಅಂತಿಮ ಐದು ಪಂದ್ಯಗಳನ್ನು ಆಡಲಿದ್ದಾರೆ.
Published On - 7:43 am, Fri, 23 April 21