IPL 2021: ಮೊದಲ ಸೋಲಿನಿಂದ ಪಾಠ ಕಲಿಯದ ಕೊಹ್ಲಿ! ಅಂದಿನ ಪಂದ್ಯದ ತಪ್ಪುಗಳೇ ಪಂಜಾಬ್​ ವಿರುದ್ಧದ ಸೋಲಿಗೆ ಕಾರಣ

|

Updated on: May 01, 2021 | 6:10 PM

IPL 2021: ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನ ಸೋತಿದ್ದ ಪಂಜಾಬ್ ಮುಂದೆ, ಐದು ಗೆಲುವು ದಾಖಲಿಸಿದ್ದ RCB ಸೋಲಲು ನಾಯಕ ವಿರಾಟ್ ಕೊಹ್ಲಿ ಮಾಡಿದ ಐದು ಮಹಾತಪ್ಪುಗಳೇ ಕಾರಣ.

IPL 2021: ಮೊದಲ ಸೋಲಿನಿಂದ ಪಾಠ ಕಲಿಯದ ಕೊಹ್ಲಿ! ಅಂದಿನ ಪಂದ್ಯದ ತಪ್ಪುಗಳೇ ಪಂಜಾಬ್​ ವಿರುದ್ಧದ ಸೋಲಿಗೆ ಕಾರಣ
ವಿರಾಟ್ ಕೊಹ್ಲಿ
Follow us on

ಸೋಲಿನ ಸುಳಿಯಲ್ಲೇ ಗಿರಕಿ ಹೊಡೆಯುತ್ತಿದ್ದ ಪಂಜಾಬ್ ಕಿಂಗ್ಸ್, ಆರ್ಸಿಬಿಗೆ ಸುಲಭ ಆಹಾರವಾಗುತ್ತೆ ಅನ್ನೋದು ಕ್ರಿಕೆಟ್ ಪಂಡಿತರಿಂದ ಹಿಡಿದು, ಅಭಿಮಾನಿಗಳ ಲೆಕ್ಕಾಚಾರವಾಗಿತ್ತು. ಆದ್ರೆ ಅಹಮದಾಬಾದ್ ಮೈದಾನದಲ್ಲಿ ಆಗಿದ್ದೇ ಬೇರೆ.. ಬಲಿಷ್ಠ ಕೊಹ್ಲಿ ಹುಡುಗರೇ ಪಂಜಾಬ್ಗೆ ಸುಲಭ ಆಹಾರವಾಗಿಬಿಟ್ರು. ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನ ಸೋತಿದ್ದ ಪಂಜಾಬ್ ಮುಂದೆ, ಐದು ಗೆಲುವು ದಾಖಲಿಸಿದ್ದ RCB ಸೋಲಲು ನಾಯಕ ವಿರಾಟ್ ಕೊಹ್ಲಿ ಮಾಡಿದ ಐದು ಮಹಾತಪ್ಪುಗಳೇ ಕಾರಣ. ಕೊಹ್ಲಿ ಮಾಡಿದ ಆ ಮಹಾತಪ್ಪುಗಳೇನು ಅನ್ನೋದನ್ನ ಒಂದೊಂದಾಗೇ ಹೇಳ್ತೀವಿ ನೋಡಿ.

ಕೊಹ್ಲಿ ಮಹಾತಪ್ಪು – 1
ಟಾಸ್ ಗೆದ್ದು ಬೌಲಿಂಗ್ ಮಾಡಿದ್ದು

ಪಂಜಾಬ್ ವಿರುದ್ಧ ವಿರಾಟ್ ಮಾಡಿದ ಮೊದಲ ತಪ್ಪು ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದ್ದು. ಮೋದಿ ಮೈದಾನದಲ್ಲಿ ಚೇಸಿಂಗ್ ಮಾಡಿದವರು ಗೆಲ್ತಾರೆ ಅನ್ನೋ ಕೊಹ್ಲಿ ಲೆಕ್ಕಾಚಾರ ತಪ್ಪಲ್ಲ ಬಿಡಿ. ಆದ್ರೆ ಪಂಜಾಬ್ ಕ್ರಿಕೆಟಿಗರು ಹೇಗಿದ್ರೂ ಸೋಲ್ತೀವಿ ಅನ್ನೋ ಭಯ ಬಿಟ್ಟಾಕಿ ಆಕ್ರಮಣಕಾರಿ ಆಟವಾಡಿದ್ರು. ಹೀಗಾಗೇ ಕನ್ನಡಿಗ ಕೆ.ಎಲ್.ರಾಹುಲ್ ಮತ್ತು ಕ್ರಿಸ್ ಗೇಲ್, ಆರ್ಸಿಬಿ ಬೌಲರ್ಗಳನ್ನ ಬೆಂಡೆತ್ತಿಬಿಟ್ರು..

ಕೊಹ್ಲಿ ಮಹಾತಪ್ಪು – 2
ರಾಹುಲ್ ಅಬ್ಬರಕ್ಕೆ ಬ್ರೇಕ್ ಹಾಕದ ಆರ್ಸಿಬಿ

ಕಳೆದ ಸೀಸನ್ನಲ್ಲಿ ಆರ್ಸಿಬಿ, ಪಂಜಾಬ್ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲೂ ಮುಗ್ಗರಿಸಿತ್ತು. ಕಾರಣ ಎರಡೂ ಪಂದ್ಯಗಳಲ್ಲೂ ಆರ್ಸಿಬಿ ಬೌಲರ್ಗಳಿಗೆ ಬೆವರಿಳಿಸಿದ್ದು ಇದೇ ಕೆ.ಎಲ್.ರಾಹುಲ್. ಮೊದಲ ಪಂದ್ಯದಲ್ಲಿ ರಾಹುಲ್ ಅಜೇಯ 132 ರನ್ಗಳಿಸಿದ್ರೆ, 2ನೇ ಪಂದ್ಯದಲ್ಲಿ ಅಜೇಯ 61 ರನ್ಗಳಿಸಿದ್ರು. ಆರ್ಸಿಬಿ ವಿರುದ್ಧ ರಾಹುಲ್ ಇತಿಹಾಸ ಗೊತ್ತಿದ್ದೂ ನಾಯಕ ಕೊಹ್ಲಿ, ರಾಹುಲ್ ಆಟಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ರಾಹುಲ್ ಕೊನೇವರೆಗೂ ಕ್ರೀಸ್ನಲ್ಲಿದ್ದು ಮತ್ತೊಮ್ಮೆ ಆರ್ಸಿಬಿ ವಿರುದ್ಧ ಅಜೇಯ 91 ರನ್ಗಳಿಸಿ ಪಂದ್ಯದ ದಿಕ್ಕು ಬದಲಿಸಿದ್ರು..

ಕೊಹ್ಲಿ ಮಹಾತಪ್ಪು – 3
ದೈತ್ಯ ಗೇಲ್ಗೆ ಕಡಿವಾಣ ಹಾಕಲಿಲ್ಲ

ಈ ಸೀಸನ್ನಲ್ಲಿ ಕ್ರಿಸ್ ಗೇಲ್ ಆಟ ಅಷ್ಟಕ್ಕಷ್ಟೇ ಎನ್ನುವಂತಿತ್ತು. ಇದನ್ನೇ ಪರಿಗಣಿಸಿದ ಆರ್ಸಿಬಿ ಆಟಗಾರರು, ಗೇಲ್ರನ್ನ ಹಗುರವಾಗಿ ಪರಿಗಣಿಸಿದ್ರು. ಆದ್ರೆ ಗೇಲ್ ಸ್ಫೋಟಕ ಬ್ಯಾಟಿಂಗ್ ಆರ್ಸಿಬಿ ಬೌಲರ್ಗಳನ್ನ ಕಂಗಾಲಾಗುವಂತೆ ಮಾಡಿತು. ಕೇವಲ 24 ಬಾಲ್ ಎದುರಿಸಿದ ಗೇಲ್, 6 ಬೌಂಡರಿ 1 ಸಿಕ್ಸರ್ ಸೇರಿದಂತೆ 46 ರನ್ಗಳಿಸಿದ್ರು. ಒಂದು ವೇಳೆ ಗೇಲ್ಗೆ ವಿರಾಟ್ ಕಡಿವಾಣ ಹಾಕಿದ್ರೆ, ಪಂಜಾಬ್ ಸ್ಕೋರ್ 150ರ ಗಡಿದಾಟೋದೇ ಕಷ್ಟವಾಗ್ತಿತ್ತು.

ಕೊಹ್ಲಿ ಮಹಾತಪ್ಪು – 4
ಕೊನೇ ಓವರ್ ಹರ್ಷಲ್ಗೆ ನೀಡಿದ್ದು

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಇದೇ ಹರ್ಷಲ್ ಪಟೇಲ್ಗೆ ಮಾಡಿದ ಕೊನೆ ಓವರ್ನಲ್ಲಿ ರವೀಂದ್ರ ಜಡೇಜಾ 37 ರನ್ ಚಚ್ಚಿದ್ರು. ಹೀಗೊಂದು ಅನುಭವದ ಕತೆ ಮುಂದಿದ್ರೂ ನಾಯಕ ಕೊಹ್ಲಿ, ಪಂಜಾಬ್ ಪಂದ್ಯದಲ್ಲೂ ಹರ್ಷಲ್ ಪಟೇಲ್ಗೆ ಕೊನೇ ಓವರ್ ನೀಡಿದ್ರು. ಆದ್ರೆ ಹರ್ಷಲ್ ಪಟೇಲ್ ಕೊನೆ ಓವರ್ನಲ್ಲಿ ರಾಹುಲ್ ಮತ್ತು ಹರ್ಪ್ರೀತ್ ಬೆಂಕಿ ಬಿರುಗಾಳಿಯಂತೆ ಅಬ್ಬರಿಸಿ ಬರೋಬ್ಬರಿ 22 ರನ್ ಗಳಿಸಿದ್ರು. ಇದು ಏಕಾಏಕಿ ಪಂಜಾಬ್ ಸ್ಕೋರ್ ಹೆಚ್ಚಾಗಲು ಕಾರಣವಾಗಿ, ಆರ್ಸಿಬಿ ಲೆಕ್ಕಾಚಾರ ಉಲ್ಟಾ ಆಗುವಂತೆ ಮಾಡಿತು..

ಕೊಹ್ಲಿ ಮಹಾತಪ್ಪು – 5
ಪವರ್ ಪ್ಲೇನಲ್ಲಿ ಮಂಕಾದ RCB

180 ರನ್ಗಳ ಗುರಿ ಬೆನ್ನಟ್ಟುವಾಗ ಆರ್ಸಿಬಿ ಬ್ಯಾಟ್ಸ್ಮನ್ಗಳು ಪವರ್ ಪ್ಲೇನಲ್ಲಿ ಜಬರ್ದಸ್ತ್ ಬ್ಯಾಟಿಂಗ್ ಮಾಡಬೇಕಿತ್ತು. ಮೊದಲ ಆರು ಓವರ್ಗಳಲ್ಲೇ ಆರ್ಸಿಬಿ ಓವರ್ಗೆ ಹತ್ತು ರನ್ಗಳಂತೆ ಗಳಿಸಿದ್ರೂ, 60 ರನ್ಗಳಿಸಿರಬೇಕಿತ್ತು. ಆದ್ರೆ ಆರು ಓವರ್ ಮುಕ್ತಾಯಕ್ಕೆ ಆರ್ಸಿಬಿ ಒಂದು ವಿಕೆಟ್ ನಷ್ಟಕ್ಕೆ ಕೇವಲ 36 ರನ್ಗಳಿಸಿತು. ಇದು ಆರ್ಸಿಬಿ ಮೇಲೆ ಇನ್ನಿಲ್ಲದ ಒತ್ತಡ ಬೀಳುವಂತಾಯ್ತು. ಈ ಐದು ತಪ್ಪುಗಳು ಗೆಲುವಿನ ಟ್ರ್ಯಾಕ್ಗೆ ಬಂದಿದ್ದ ಆರ್ಸಿಬಿಯನ್ನ ಮತ್ತೊಮ್ಮೆ ಸೋಲಿಗೆ ಕಾರಣವಾಯ್ತು. ಬೇಸರದ ಸಂಗತಿ ಅಂದ್ರೆ, ಈ ಸೀಸನ್ನಲ್ಲಿ ಪಂಜಾಬ್ಗಿಂತ ಬಲಿಷ್ಠವಾಗಿದ್ದ ಆರ್ಸಿಬಿ, ಸುಲಭವಾಗಿ ಸೋಲಿಗೆ ಶರಣಾಗಿದೆ.