ಐಪಿಎಲ್ನಲ್ಲಿ ಬಯೊ ಬಬಲ್ ಸುರಕ್ಷಿತವಾಗಿಲ್ಲ. ಹೀಗಾಗಿ ನಾನು ತವರಿಗೆ ವಾಪಸ್ ಹೋಗುತ್ತಿದ್ದೇನೆ. ಹೀಗಂತ ಆರ್ಸಿಬಿ ತಂಡದಲ್ಲಿದ್ದ ಆಸ್ಟ್ರೇಲಿಯಾದ ಌಡಮ್ ಜಂಪಾ ಹೇಳಿದ್ದೇ ಬಂತು. ಭಾರತೀಯ ಕ್ರಿಕೆಟ್ ಪ್ರೇಮಿಗಳು ಜಂಪಾ ವಿರುದ್ಧ ಕೆಂಡ ಕಾರಿದ್ರು. ಕಾಕತಾಳಿಯವೋ ಎನ್ನುವಂತೆ ಜಂಪಾ ಹೇಳಿದ ಒಂದು ವಾರದಲ್ಲೇ, ಐಪಿಎಲ್ ಬಯೊ ಬಬಲ್ ಭದ್ರಕೋಟೆ ಬೇದಿಸಿದ ಕೊರೊನಾ, ಬಿಸಿಸಿಐ ಬಿಗ್ಬಾಸ್ಗಳನ್ನೇ ಬೆಚ್ಚಿ ಬೀಳಿಸಿತು. ಪಂದ್ಯಕ್ಕೂ ಮುನ್ನ ಆಟಗಾರರಿಗೆ ಕೊರೊನಾ ವಕ್ಕರಿಸಿದ್ದರಿಂದ, ಬಿಸಿಸಿಐ ಮಹಾಮಾರಿಗೆ ತಲೆಬಾಗಿ ಐಪಿಎಲ್ ಮುಂದೂಡಿತು.
ಆದ್ರೀಗ ಕೊರೊನಾ ಸೋಂಕಿಗೆ ತುತ್ತಾಗಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ವೃದ್ದಿಮಾನ್ ಕೂಡ, ಜಂಪಾನಂತೆ ಐಪಿಎಲ್ ಬಯೊ ಬಬಲ್ ಸುರಕ್ಷಿತವಾಗಿರಲಿಲ್ಲ. ಇದೇ ಕಾರಣಕ್ಕೆ ಐಪಿಎಲ್ನಲ್ಲಿ ಆಟಗಾರರು ಕೊರೊನಾ ಸೋಂಕಿಗೆ ತುತ್ತಾಗಬೇಕಾಯ್ತು ಎನ್ನುವ ಶಾಕಿಂಗ್ ಹೇಳಿಕೆ ನೀಡಿದ್ದಾರೆ..
ಯುಎಇನಲ್ಲಿ ಸೋಂಕು ತಗುಲಿರಲಿಲ್ಲ
ಬಯೋಬಬಲ್ ಸುರಕ್ಷೆ ಕಡೆ ಗಮನ ಹರಿಸೋದು ಮಧ್ಯಸ್ಥದಾರರ ಜವಾಬ್ದಾರಿ. ಆದರೆ ನಾನು ಒಂದು ವಿಚಾರ ಹೇಳ್ತೇನೆ, ಯುಎಇಯಲ್ಲಿ ಕಳೆದ ವರ್ಷ ಐಪಿಎಲ್ ನಡೆದಿದ್ದಾಗ ಒಬ್ಬನೇ ಒಬ್ಬ ಆಟಗಾರನಿಗಾಗಲಿ, ಸಿಬ್ಬಂದಿಗಾಗಲಿ ಸೋಂಕು ತಗುಲಿರಲಿಲ್ಲ,’
ವೃದ್ದಿಮಾನ್ ಸಾಹ, ಎಸ್ಆರ್ಎಚ್ ಆಟಗಾರ
ಸಾಹ ಆಡಿದ ಮಾತುಗಳು ನಿಜಕ್ಕೂ ಬಿಸಿಸಿಐ ಅನ್ನ ಮುಜುಗರಕ್ಕೀಡಾಗುವಂತೆ ಮಾಡಿದೆ. ಯಾಕಂದ್ರೆ ಕಳೆದ ವರ್ಷ ಯುಎಇನಲ್ಲಿ ಐಪಿಎಲ್ ನಡೆದಾಗ ಯಾರಿಗೂ ಸೋಂಕು ತಗುಲಿರಲಿಲ್ಲ. ಆದ್ರೀಗ ದೇಶದಲ್ಲೇ ನಡೆದ ಐಪಿಎಲ್ನಲ್ಲಿ ಆಟಗಾರರಿಗೆ ಸೋಂಕು ತಗುಲಿದೆ ಎಂದ್ರೆ, ಬಿಸಿಸಿಐನ ಬಯೊ ಬಬಲ್ ಸುರಕ್ಷಿತವಾಗಿಲ್ಲ ಅನ್ನೋದು ಸಾಹ ಮಾತಿನ ಒಳಮರ್ಮವಾಗಿದೆ.
ಐಪಿಎಲ್ ಆಟಗಾರರು ಮೋಜು ಮಸ್ತಿ ಮಾಡಿದ್ರು
ಸಾಹ ಹೇಳಿರೋ ಮಾತಿನಲ್ಲಿ ನಿಜಕ್ಕೂ ಅರ್ಥವಿದೆ. ಈ ಸೀಸನ್ನಲ್ಲಿ ಕೊರೊನಾ ಭಯದ ನಡುವೆಯೂ, ಐಪಿಎಲ್ ಆಟಗಾರರು ಮೋಜು ಮಸ್ತಿ ಮಾಡಿದ್ರು. ಯಾರೋಬ್ರು ಕೂಡ ಬಯೊ ಬಬಲ್ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ. ಇದೇ ಕಾರಣಕ್ಕೆ ಕೊರೊನಾ, ಐಪಿಎಲ್ಗೆ ಬ್ರೇಕ್ ಹಾಕಿತು.
ಇನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅತೀಯಾದ ಆತ್ಮವಿಶ್ವಾಸವೇ ಮುಳುವಾಯ್ತು. ಈ ಸೀಸನ್ ಅನ್ನು ಯುಎಇನಲ್ಲಿ ನಡೆಸಿದ್ರೆ, ಐಪಿಎಲ್ ಸರಾಗವಾಗಿ ನಡೆಯುತ್ತಿತ್ತು. ಆದ್ರೆ ಕೊರೊನಾ 2ನೇ ಅಲೆ ಆರ್ಭಟದ ನಡುವೆಯೂ ಐಪಿಎಲ್ ನಡೆಸಿದ್ರು. ಆದ್ರೆ ಬಯೊ ಬಬಲ್ ವಿಚಾರದಲ್ಲಿ ಕಠಿಣ ನಿರ್ಧಾರ ತಗೆದುಕೊಳ್ಳದಿರೋದು ಐಪಿಎಲ್ ಸ್ಥಗಿತಗೊಳ್ಳಲು ಮತ್ತೊಂದು ಕಾರಣವಾಯ್ತು.