ಗ್ಲೋಬಲ್ ವ್ಯಾಲ್ಯೂಯೇಶನ್ ಮತ್ತು ಕಾರ್ಪೊರೇಟ್ ಫೈನಾನ್ಸ್ ಅಡ್ವೈಸರ್ ಕಂಪನಿ ಡಫ್ & ಫೆಲ್ಪ್ಸ್ ನೀಡಿದ ವರದಿಯ ಪ್ರಕಾರ, 6 ವರ್ಷಗಳಲ್ಲಿ ಮೊದಲ ಬಾರಿಗೆ ಐಪಿಎಲ್ ತನ್ನ ಬ್ರಾಂಡ್ ನಷ್ಟ ಅನುಭವಿಸಿದೆ. 2020 ರಲ್ಲಿ 45,800 ಕೋಟಿ ರೂ ಆದಾಯ ಹೊಂದಿರುವ ಐಪಿಎಲ್‌ನ ಬ್ರಾಂಡ್ ಮೌಲ್ಯವು ಶೇಕಡಾ 3.6 ರಷ್ಟು ಇಳಿದಿದೆ. ಕೊರೊನಾ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನಿಂದಾಗಿ ಮೌಲ್ಯಮಾಪನ ಕಡಿಮೆಯಾಗಿದೆ ಎಂದು ವರದಿ ಹೇಳುತ್ತಿದೆ. ಆದರೂ ಸಹ ಐಪಿಎಲ್‌ನಲ್ಲಿ ತಂಡಗಳು, ಹರಾಜಿನಲ್ಲಿ ಆಟಗಾರರನ್ನು ಖರೀದಿಸುವುದರಿಂದ ಹಿಡಿದು ತಮ್ಮ ವಾಸ್ತವ್ಯ, ಪ್ರಯಾಣ, ಸಹಾಯಕ ಸಿಬ್ಬಂದಿಗಳಿಗೆ ನೀಡುವ ಸಂಬಳದವರೆಗೆ ಹೇಗೆ ಕೋಟಿ ಕೋಟಿ ಖರ್ಚು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿ ಉದ್ಭವಿಸುವುದು ಸಹಜ. ಇಷ್ಟೊಂದು ದೊಡ್ಡ ಪ್ರಮಾಣದ ಖರ್ಚಿನ ನಂತರ ಈ ಫ್ರಾಂಚೈಸಿಗಳು ಐಪಿಎಲ್‌ನಲ್ಲಿ ಹೇಗೆ ಆದಾಯ ಗಳಿಸುತ್ತಾರೆ ಎಂಬ ಪ್ರಶ್ನೆಯೂ ನಿಮ್ಮಲ್ಲಿ ಮೂಡದೇ ಇರದು. ಅದಕ್ಕೆಲ್ಲಾ ಇಲ್ಲಿದೆ ವಿವರಣೆ.
ಇಲ್ಲಿವರೆಗಿನ ಐಪಿಎಲ್ ತಂಡಗಳು..
ಕೋಲ್ಕತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೆಹಲಿ ಕ್ಯಾಪಿಟಲ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಗುಜರಾತ್ ಲಯನ್ಸ್ ಮತ್ತು ರೈಸಿಂಗ್ ಪುಣೆ.
7 ವರ್ಷಗಳಲ್ಲಿ 26,300 ಕೋಟಿ ಆದಾಯ ಗಳಿಸಿದ ಐಪಿಎಲ್
ಡಫ್ & ಫೆಲ್ಪ್ಸ್ ವರದಿಯ ಪ್ರಕಾರ, 2014 ರಲ್ಲಿ ಐಪಿಎಲ್ ಮೌಲ್ಯಮಾಪನವು ಸುಮಾರು 19500 ಕೋಟಿ ರೂ. ಇತ್ತು. ಇದು 2020 ರಲ್ಲಿ 45800 ಕೋಟಿ ರೂ.ಗೆ ಏರಿದೆ. ಆದ್ದರಿಂದ, ಐಪಿಎಲ್ ಮೌಲ್ಯಮಾಪನ ಈ 7 ವರ್ಷಗಳ ಅವಧಿಯಲ್ಲಿ 26,300 ಕೋಟಿ ರೂ ಹೆಚ್ಚಾಗಿದೆ.
ವರ್ಷ | ಮೌಲ್ಯಮಾಪನ |
2014 | 19,500 ಕೋಟಿ ರೂ |
2015 | 21,300 ಕೋಟಿ ರೂ |
2016 | 27,500 ಕೋಟಿ ರೂ |
2017 | 34,400 ಕೋಟಿ ರೂ |
2018 | 41,800 ಕೋಟಿ ರೂ |
2019 | 47,500 ಕೋಟಿ ರೂ |
2020 | 45,800 ಕೋಟಿ ರೂ |
ಐಪಿಎಲ್ ಹೇಗೆ ಆದಾಯ ಗಳಿಸುತ್ತದೆ?
ವ್ಯಾಪಾರ, ಮನರಂಜನೆ ಮತ್ತು ಕ್ರೀಡೆಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುವ ಹಿಂದಿನ ಮಾಸ್ಟರ್ ಮೈಂಡ್ ಆಗಿರುವ ಲಲಿತ್ ಮೋದಿ ಐಪಿಎಲ್ ಅನ್ನು 2008 ರಲ್ಲಿ ಪ್ರಾರಂಭಿಸಿದರು. ಈ ಲೀಗ್ ಮೂಲಕ, ಪ್ರಪಂಚದಾದ್ಯಂತದ ಇರುವ ಅತ್ಯುತ್ತಮ ಕ್ರಿಕೆಟ್ ಆಟಗಾರರನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸಲಾಯಿತು.
ಐಪಿಎಲ್ ತಂಡದಗಳ ಮೌಲ್ಯಮಾಪನ
ತಂಡಗಳು | 2019 | 2020 |
ಮುಂಬೈ ಇಂಡಿಯನ್ಸ್ | 809 ಕೋಟಿ | 761 ಕೋಟಿ |
ಚೆನ್ನೈ ಸೂಪರ್ ಕಿಂಗ್ಸ್ | 732 ಕೋಟಿ | 611 ಕೋಟಿ |
ಕೋಲ್ಕತಾ ನೈಟ್ ರೈಡರ್ಸ್ | 629 ಕೋಟಿ | 543 ಕೋಟಿ |
ರಾಯಲ್ ಚಾಲೆಂಜರ್ಸ್ ಬೆಂಗಳೂರು | 595 ಕೋಟಿ | 535 ಕೋಟಿ |
ಸನ್‌ರೈಸರ್ಸ್ ಹೈದರಾಬಾದ್ | 483 ಕೋಟಿ | 442 ಕೋಟಿ |
ಡೆಲ್ಲಿ ಕ್ಯಾಪಿಟಲ್ಸ್ | 374 ಕೋಟಿ | 370 ಕೋಟಿ |
ಪಂಜಾಬ್ ಕಿಂಗ್ಸ್ | 358 ಕೋಟಿ | 318 ಕೋಟಿ |
ರಾಜಸ್ಥಾನ್ ರಾಯಲ್ಸ್ | 271 ಕೋಟಿ | 249 ಕೋಟಿ |
ವಿಶ್ವದಲ್ಲೆಲೆಡೆ ಬಾರಿ ಜನಪ್ರಿಯತೆ ಗಳಿಸಿದೆ..
ಐಪಿಎಲ್ ಒಂದು ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ವಿಶ್ವದಲ್ಲೆಲೆಡೆ ಬಾರಿ ಜನಪ್ರಿಯತೆ ಗಳಿಸಿದೆ. ಹಾಗಾಗಿ ಈ ಪಂದ್ಯಾವಳಿ ಬಿಸಿಸಿಐ ಹಾಗೂ ಕ್ರಿಕೆಟ್ ಆಟಗಾರರಿಗೆ ಚಿನ್ನದ ಮೊಟ್ಟೆಯನ್ನಿಡುವ ಕೋಳಿಯಂತ್ತಾಗಿದೆ. ಅಲ್ಲದೆ ಐಪಿಎಲ್ನನ್ನು ವಾಣಿಜ್ಯ ದೃಷ್ಟಿಯಿಂದಲೂ ಅಭಿವೃದ್ಧಿಪಡಿಸಲಾಗಿದೆ. ಐಪಿಎಲ್ ಮೂಲಕ ಕಂಪೆನಿಗಳು ತಮ್ಮ ವ್ಯವಹಾರವನ್ನು ಆಕ್ರಮಣಕಾರಿಯಾಗಿ ಜಾಹೀರಾತು ಮಾಡಲು ಇದು ಅವಕಾಶವನ್ನು ಒದಗಿಸುತ್ತದೆ.
ಐಪಿಎಲ್‌ನ ಪ್ರಮುಖ ವ್ಯವಹಾರ ಯೋಜನೆ ಎಂದರೆ ಖಾಸಗಿ ಕಂಪನಿಗಳಿಗೆ ಕ್ರಿಕೆಟ್ ಫ್ರಾಂಚೈಸಿಗಳನ್ನು ಖರೀದಿಸಲು ಅವಕಾಶ ಕಲ್ಪಿಸುವುದಾಗಿದೆ. ಫ್ರ್ಯಾಂಚೈಸಿಗಳನ್ನು ದೊಡ್ಡ ಬೆಲೆಗೆ ಮಾರಾಟ ಮಾಡಿದಾಗ, ಕಾರ್ಪೊರೇಟ್ ಕಂಪನಿಗಳು ಭಾರತೀಯ ಕ್ರಿಕೆಟ್‌ನಲ್ಲಿ ಹೂಡಿಕೆ ಮಾಡಲು ಆಕರ್ಷಿತರಾಗುತ್ತಾರೆ. ಭಾರತ ಸೇರಿದಂತೆ ವಿಶ್ವದ ದೊಡ್ಡ ಕಾರ್ಪೊರೇಟ್ ಕಂಪನಿಗಳು ಐಪಿಎಲ್‌ನಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಿವೆ. ಅಲ್ಲದೆ ದೊಡ್ಡ ದೊಡ್ಡ ಕಂಪನಿಗಳು ಸಹ ಈ ಆಟದ ಪ್ರಾಯೋಜಕತ್ವವನ್ನು ಪಡೆದುಕೊಳ್ಳಲು ಜಿದ್ದಿಗೆ ಬಿದ್ದವರಂತೆ ಹರಾಜಿನಲ್ಲಿ ಕೊಂಡುಕೊಳ್ಳುತ್ತಾರೆ.
ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕ್ರಿಕೆಟ್ ಪ್ರಿಯರನ್ನು ಮತ್ತು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ಹಾಗಾಗಿ ಭಾರತದಲ್ಲಿನ ಕ್ರಿಕೆಟ್‌ನ ವ್ಯಾಮೋಹದ ಲಾಭವನ್ನು ಎನ್ಕ್ಯಾಶ್ ಮಾಡಿಕೊಂಡಿರುವ ಕಂಪನಿಗಳು ತಮ್ಮ ಉತ್ಪನ್ನವನ್ನು ಸುಲಭವಾಗಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗುತ್ತಿವೆ.
ಮಾಧ್ಯಮ ಹಕ್ಕುಗಳ ಮಾರಾಟದಿಂದಲ್ಲೇ ಹೆಚ್ಚಿನ ಆದಾಯ..
ಐಪಿಎಲ್‌ನಲ್ಲಿ ಆದಾಯ ವಿತರಣಾ ಮಾದರಿ ಇದ್ದು, ಇದರಲ್ಲಿ ಬಿಸಿಸಿಐ, ಪ್ರಸಾರ ಮತ್ತು ಆನ್‌ಲೈನ್ ಸ್ಟ್ರೀಮರ್‌ಗಳಿಂದ ಭಾರಿ ಮೊತ್ತದ ಆದಾಯವನ್ನು ಪಡೆದುಕೊಳ್ಳುತ್ತಿದೆ. ಬಂದ ಆದಾಯದಿಂದ ತಮ್ಮ ಶುಲ್ಕವನ್ನು ಪಡೆದುಕೊಳ್ಳುವ ಬಿಸಿಸಿಐ, ಉಳಿದ ಮೊತ್ತವನ್ನು ಎಲ್ಲಾ ಐಪಿಎಲ್ ತಂಡಗಳಿಗೆ ವಿತರಿಸುತ್ತದೆ. ಅಲ್ಲದೆ ತಂಡಗಳಿಗೆ ಹಂಚುವ ಹಣದ ಮೌಲ್ಯವನ್ನು ಆ ತಂಡದ ಶ್ರೇಣಿಯ ಆಧಾರದ ಮೇಲೆ ವಿಂಗಡಿಸಲಾಗುತ್ತದೆ. ಒಟ್ಟಾರೆಯಾಗಿ ಐಪಿಎಲ್ ಮಂಡಳಿ ತಮ್ಮ ಒಟ್ಟು ಆದಾಯದಲ್ಲಿ ಶೇಕಡಾ 60-70ರಷ್ಟು ಆದಾಯವನ್ನು ಬರಿ ಟೆಲಿವಿಷನ್ ರೈಟ್ಸ್ನಿಂದಲೇ ಗಳಿಸುತ್ತದೆ.
ಬ್ರಾಂಡ್ ಪ್ರಾಯೋಜಕತ್ವ
ಐಪಿಎಲ್ ಫ್ರ್ಯಾಂಚೈಸೀಗಳು ಖಾಸಗಿ ಕಂಪನಿಗಳ ಬ್ರಾಂಡ್‌ನೊಂದಿಗೆ ಟೈಅಪ್ ಮಾಡಿಕೊಳ್ಳುತ್ತಾರೆ. ಫ್ರ್ಯಾಂಚೈಸೀಗಳೊಂದಿಗೆ ಟೈಅಪ್ ಆದ ಕಂಪನಿಗಳು ತಮ್ಮ ಕಂಪನಿಯ ಬ್ರ್ಯಾಂಡ್ ಮತ್ತು ಲೋಗೊವನ್ನು ತಂಡದ ಕಿಟ್‌ಗಳು ಮತ್ತು ಜರ್ಸಿಗಳಲ್ಲಿ ಮುದ್ರಿಸುತ್ತಾರೆ. ಇಷ್ಟೇ ಅಲ್ಲದೆ ಕ್ರೀಡಾಂಗಣದ ಬೌಂಡರಿ ಲೈನ್ನಲ್ಲಿ ಹಾಕಲಾಗುವ ಜಾಹೀರಾತುಗಳಿಂದಲೂ ಆದಾಯ ಗಳಿಸುತ್ತಾರೆ. ಹಾಗೆಯೇ ಕಂಪನಿಯ ಹೆಸರು ಅಥವಾ ಲೋಗೊವನ್ನು ಆಟಗಾರನ ಎದೆ ಮತ್ತು ಹಿಂಭಾಗದಲ್ಲಿ ದೊಡ್ಡ ಮತ್ತು ದಪ್ಪ ಅಕ್ಷರಗಳಲ್ಲಿ ಹಾಕುವುದಕ್ಕೂ ಬಾರಿ ಮೊತ್ತದ ಪ್ರಾಯೋಜಕತ್ವದ ಶುಲ್ಕವನ್ನು ಕಂಪನಿಗಳು ಪಾವತಿಸಬೇಕಾಗುತ್ತದೆ.
ಪ್ರಾಯೋಜಕರು ತಂಡದ ಆಟಗಾರರೊಂದಿಗೆ ಕೆಲವು ಈವೆಂಟ್‌ಗಳನ್ನು ಸಹ ಆಯೋಜಿಸಬಹುದು, ಅದರ ಮೂಲಕ ಅವರು ತಮ್ಮ ಬ್ರ್ಯಾಂಡ್ ಅನ್ನು ಪ್ರಚಾರ ಮಾಡುತ್ತಾರೆ. ಐಪಿಎಲ್ ತನ್ನ ಒಟ್ಟು ಗಳಿಕೆಯ ಶೇಕಡಾ 20-30ರಷ್ಟು ಆದಾಯವನ್ನು ಪ್ರಾಯೋಜಕತ್ವದಿಂದ ಪಡೆಯುತ್ತದೆ.
ಟಿಕೆಟ್ ಮಾರಾಟ ಮಾಡುವ ಮೂಲಕ
ಐಪಿಎಲ್‌ನಲ್ಲಿ ಶೇಕಡಾ 10 ರಷ್ಟು ಆದಾಯವನ್ನು ಟಿಕೆಟ್ ಮಾರಾಟದ ಮೂಲಕ ಗಳಿಸಲಾಗುತ್ತದೆ. ಆದರೆ ಟಿಕೆಟ್ ಅನ್ನು ಯಾವ ಬೆಲೆಗೆ ಮಾರಾಟ ಮಾಡಬೇಕೆಂಬುದನ್ನು ಆಯಾ ತಂಡದ ಮಾಲೀಕರು ನಿರ್ಧರಿಸುತ್ತಾರೆ.
ಬಹುಮಾನದ ಹಣದಿಂದಲೂ ಆದಾಯ
ಐಪಿಎಲ್‌ನಲ್ಲಿ ಬಹುಮಾನವಾಗಿ ಬಹಳ ದೊಡ್ಡ ಪ್ರಮಾಣದ ಹಣವನ್ನು ನೀಡಲಾಗುತ್ತದೆ. ಪಂದ್ಯಾವಳಿಯಲ್ಲಿ ಚಾಂಪಿಯನ್ ಆದ ತಂಡವು ಬಹುಮಾನದ ಮೊತ್ತದಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತದೆ. ಬಹುಮಾನದ ಹಣವನ್ನು ತಂಡದ ಮಾಲೀಕರು ಮತ್ತು ಆಟಗಾರರ ನಡುವೆ ವಿಂಗಡಿಸಲಾಗುತ್ತದೆ.
ಆದಾಯದ ಇತರ ಮಾರ್ಗಗಳೆಂದರೆ
ಭಾರತದಲ್ಲಿ ಕ್ರೀಡಾ ಸರಕುಗಳ ಮಾರುಕಟ್ಟೆ ವಾರ್ಷಿಕವಾಗಿ ಶೇಕಡಾ 100 ರಷ್ಟು ಬೆಳೆಯುತ್ತಿದೆ. ಅಲ್ಲದೆ ಈ ಮಾರುಕಟ್ಟೆ ಸುಮಾರು 30 ಮಿಲಿಯನ್ ವೈವಾಟು ನಡೆಸುತ್ತಿದೆ. ಪ್ರತಿಯೊಂದು ಫ್ರ್ಯಾಂಚೈಸೀಯೂ, ತನ್ನ ತಂಡಕ್ಕೆ ಸಂಬಂಧಿಸಿದ ಟಿ-ಶರ್ಟ್‌ಗಳು, ಕ್ಯಾಪ್‌ಗಳು, ಕೈಗಡಿಯಾರಗಳು ಮತ್ತು ಇತರ ಅನೇಕ ವಸ್ತುಗಳನ್ನು ಒಳಗೊಂಡಿರುವ ಸರಕುಗಳನ್ನು ಮಾರಾಟ ಮಾಡುವುದರ ಮೂಲಕ ಆದಾಯ ಗಳಿಸುತ್ತವೆ.
ಇಷ್ಟೇ ಅಲ್ಲದೆ ಪಂದ್ಯ ನಡೆಯುವ ಸಮಯದಲ್ಲಿ, ಆಹಾರದ ಮಳಿಗೆಗಳನ್ನು ತೆರೆಯಲು ಮೂರನೇ ವ್ಯಕ್ತಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ. ಗುತ್ತಿಗೆ ಪಡೆದ ಮೂರನೇ ವ್ಯಕ್ತಿ ಅದನ್ನು ಉಪಗುತ್ತಿಗೆಗಳಾಗಿ ನೀಡುತ್ತಾನೆ. ಈ ಉಪಗುತ್ತಿಗೆಯನ್ನು ಪ್ರತಿ ಪಂದ್ಯಕ್ಕೆ ಹಾಕಲಾಗುವ ಸ್ಟಾಲ್‌ಗಳಿಗೆ ಬೆಲೆಯನ್ನು ಇಂತಿಷ್ಟು ಎಂದು ನಿಗದಿ ಮಾಡುವುದರ ಮೂಲಕ ಆದಾಯ ಗಳಿಸಲಾಗುತ್ತದೆ.
Published On - 6:14 pm, Thu, 11 March 21