India vs England: ಹೊಸ ವಾರ, ಹೊಸ ಫಾರ್ಮಟ್ ಆದರೆ ಮಿಷನ್ ಅದೇ ಎಂದ ವಿರಾಟ್ ಕೊಹ್ಲಿ

|

Updated on: Mar 11, 2021 | 4:00 PM

ಟಿ20 ಸರಣಿಗೆ ಕೆಲ ಹೊಸಮುಖಗಳನ್ನು ಆಯ್ಕೆ ಮಾಡಲಾಗಿದೆ. ಸೂರ್ಯಕುಮಾರ್ ಯಾದವ್, ರಾಹುಲ ತೆವಾಟಿಯಾ ಮತ್ತು ಇಶಾನ್ ಕಿಷನ್ ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಿ ತೋರಿದ ಉತ್ಕೃಷ್ಟ ಪ್ರದರ್ಶನಗಳಿಂದ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ.

India vs England: ಹೊಸ ವಾರ, ಹೊಸ ಫಾರ್ಮಟ್ ಆದರೆ ಮಿಷನ್ ಅದೇ ಎಂದ ವಿರಾಟ್ ಕೊಹ್ಲಿ
ವಿರಾಟ್​ ಕೊಹ್ಲಿ
Follow us on

ಅಹಮದಾಬಾದ್: ನಾಳೆಯಿಂದ ಅಂದರೆ ಶುಕ್ರವಾರದಿಂದ ಟಿ20 ಕ್ರಿಕೆಟ್ ರಸದೌತಣ ಶುರುವಾಗಲಿದೆ. ಭಾರತ ಮತ್ತ್ತು ಇಂಗ್ಲೆಂಡ್ ನಡುವಿನ 5-ಪಂದ್ಯಗಳ ಟಿ20 ಸರಣಿ ಅಹಮದಾಬಾದಿನ ಮೊಟೆರಾ ಮೈದಾನದಲ್ಲಿ ಆರಂಭವಾಗಲಿದ್ದು ಎಲ್ಲ 5 ಪಂದ್ಯಗಳು ಇದೇ ಮೈದಾನದಲ್ಲಿ ನಡೆಯಲಿರುವುದು ವಿಶೇಷ. ಪ್ರವಾಸಿ ತಂಡವನ್ನು ಟೆಸ್ಟ್​ ಸರಣಿಯಲ್ಲಿ 3-1ಅಂತರದಿಂದ ಸುಲಭವಾಗಿ ಸೋಲಿಸಿರುವ ವಿರಾಟ್ ಕೊಹ್ಲಿ ಪಡೆಯ ಆತ್ಮವಿಶ್ವಾಸ ಮುಗಿಲೆತ್ತರದಲ್ಲಿದೆ. ಅದೇ ವಿಶ್ವಾಸದೊಂದಿಗೆ ಸೀಮಿತ ಓವರ್​ಗಳ ಸರಣಿಗಳನ್ನಾಡಲು ಸನ್ನದ್ಧವಾಗಿದೆ. ಚುಟುಕು ಆವೃತ್ತಿಗೆ ಸ್ಪೆಷಲಿಸ್ಟ್​ಗಳಾಗಿರುವ ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್, ಶಿಖರ್ ಧವನ್ ತಂಡಕ್ಕೆ ಆರಿಸಲಾಗಿದ್ದು ಅವರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಹಾತೆರೊಯುತ್ತಿದ್ದಾರೆ.

ಫಾರ್ಮಾಟ್​ ಬದಲಾದರೂ ತನ್ನ ತಂಡದ ಮಿಷನ್ ಬದಲಾಗಿಲ್ಲ ಎಂದು ವಿರಾಟ್ ಕೊಹ್ಲಿ ಟ್ವೀಟ್​ ಮಾಡಿದ್ದಾರೆ. ಟ್ವೀಟ್​ನಲ್ಲಿ ಅವರು, ‘ಹೊಸ ವಾರ, ಹೊಸ ಫಾರ್ಮಾಟ್ ಆದರೆ ಮಿಷನ್ ಅದೇ, ಅದನ್ನು ಸಾಧಿಸುವ,’ ಅಂತ ಹೇಳಿದ್ದಾರೆ.

ಇಂಗ್ಲೆಂಡ್ ತಂಡವನ್ನು ಸೋಲಿಸಿದ ನಂತರ ಭಾರತ ಜೂನ್​ನಲ್ಲಿ ನಡೆಯುವ ವಿಸ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೂ ಅರ್ಹತೆ ಗಿಟ್ಟಿಸಿದ್ದ್ದು ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್​ ತಂಡವನ್ನು ಅದು ಬ್ರಿಟನ್ನಿನ ಸೌಥಾಂಪ್ಟನ್​ನಲ್ಲಿ ಎದುರಿಸಲಿದೆ.

ಟಿ20 ಸರಣಿಗೆ ಕೆಲ ಹೊಸಮುಖಗಳನ್ನು ಆಯ್ಕೆ ಮಾಡಲಾಗಿದೆ. ಸೂರ್ಯಕುಮಾರ್ ಯಾದವ್, ರಾಹುಲ ತೆವಾಟಿಯಾ ಮತ್ತು ಇಶಾನ್ ಕಿಷನ್ ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಿ ತೋರಿದ ಉತ್ಕೃಷ್ಟ ಪ್ರದರ್ಶನಗಳಿಂದ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಆಡುವ ಇಲೆವೆನ್​ನಲ್ಲಿ ಸೂರ್ಯಕುಮಾರ್​ಗೆ ಸ್ಥಾನ ಸಿಗೋದು ಸಾಧ್ಯವಾಗದೆ ಹೋಗಬಹುದು. ಮುಂಬೈ ಇಂಡಿಯನ್ಸ್ ಟೀಮಿಗೆ ಅವರು ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಾರೆ, ಟೀಮ್ ಇಂಡಿಯಾಗೆ ಅದೇ ಸ್ಥಾನದಲ್ಲಿ ಶ್ರೇಯಸ್ ಅಯ್ಯರ್ ಆಡುತ್ತಾರೆ. ಯಾದವ್​ಗೆ ಸ್ಥಾನ ಸಿಗಬೇಕಾದರೆ ಅಯ್ಯರ್​ನನ್ನು ಹೊರಗಡೆ ಕೂರಿಸಬೇಕಾಗುತ್ತದೆ. ಟೀಮ್ ಮ್ಯಾನೇಜ್ಮೆಂಟ್ ಹಾಗೆ ಮಾಡುವ ಸಾಧ್ಯತೆ ತೀರಾ ಕಡಿಮೆ.

ಯಾದವ್​ ಅವರಂತೆ ಕಿಷನ್ ಸಹ ಚೆಂಡನ್ನು ಮನಬಂದಂತೆ ದಂಡಿಸಬಲ್ಲರು. ಆದರೆ ಅಯ್ಯರ್ ಅವರಿಗೆ ಅನುಭವದ ನೆರವಿದೆ. ಅಲ್ಲದೆ ಟೀಮಿಗೆ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ವಾಪಸ್ಸಾಗಿರುವುದರಿಂದ ಬೇರೆ ಪವರ್-ಹಿಟ್ಟರ್​ಗಳ ಅವಶ್ಯಕತೆ ಬೀಳಲಾರದು.

ಎಲ್ಲ ಆವೃತ್ತಿಗಳಲ್ಲೂ ಭಾರತದ ಪ್ರಿಮೀಯರ್ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಮದುವೆ ತಯಾರಿಯ ಹಿನ್ನೆಲೆಯಲ್ಲಿ ರಜೆ ಮೇಲಿರುವುದರಿಂದ ಅವರ ಸ್ಥಾನದಲ್ಲಿ, ಭುವನೇಶ್ವರ್ ಕುಮಾರ್ ಆಡವುದು ನಿಶ್ಚಿತ. ಭುವಿ ಸಹ ನಿಖರವಾದ ಯಾರ್ಕರ್​ಗಳನ್ನು ಎಸೆಯಬಲ್ಲರು. ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಆಡುವ ಅವರು ಕಳೆದ ಸೀಸನ್​ನಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿದ್ದರು. ಸ್ಪಿನ್ನರ್​ಗಳ ಪೈಕಿ ಸೀಮಿತ ಓವರ್​ಗಳ ಪರಿಣಿತ ಎನಿಸಿಕೊಂಡಿರುರವ ಚಹಲ್ ನಾಳೆ ಆಡುವುದರಲ್ಲಿ ಸಂದೇಹವಿಲ್ಲ.

ಅದರೆ ಎರಡನೇ ಸ್ಪಿನ್ನರ್​ ಸ್ಥಾನಕ್ಕೆ ಸ್ಪರ್ಧೆ ಜೋರಾಗಿದ್ದು ಮೂವರು ದಾವೇದಾರರು ಕಣದಲ್ಲಿದ್ದಾರೆ-ವಾಷಿಂಗ್ಡನ್ ಸುಂದರ್, ಅಕ್ಷರ್ ಪಟೇಲ್ ಮತ್ತು ರಾಹುಲ್ ತೆವಾಟಿಯಾ. ಟೆಸ್ಟ್ ಪಂದ್ಯಗಳಲ್ಲಿ ತೋರಿದ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಅಕ್ಷರ್​ ಅವರನ್ನು ಆಡುವ ಇಲೆವೆನ್​ನಲ್ಲಿ ಸೇರಿಸಿದರೆ ಅಚ್ಚರಿಯಿಲ್ಲ.

ಟಿ20 ಸರಣಿಗೆ ಭಾರತದ ಟೀಮ್ ಇಂತಿದೆ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ (ಉಪ-ನಾಯಕ), ಕೆ ಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಷನ್, ಯುಜ್ವೇಂದ್ರ ಚಹಲ್, ವರುಣ್ ಚಕ್ರವರ್ತಿ, ಆಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ, ಟಿ ನಟರಾಜನ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ನವದೀಪ್ ಸೈನಿ ಮತ್ತು ಶಾರ್ದುಲ್ ಠಾಕೂರ್

ಇದನ್ನೂ ಓದಿ: India vs England | ಡೇವಿಡ್ ಮಲಾನ್: ಟಿ-20 ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ನ ಚಾಂಪಿಯನ್ ಬ್ಯಾಟ್ಸ್​ಮನ್!

Published On - 4:00 pm, Thu, 11 March 21