ದೆಹಲಿ: ಕ್ರೀಡೆಗಳಲ್ಲಿ ಕ್ರಿಕೆಟ್ಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕು ಹಲವು ವರ್ಷಗಳೇ ಕಳೆದಿವೆ. ಅಭಿಮಾನಿಗಳ ಕುತೂಹಲ ತಣಿಸಲು, ಅವರ ಉತ್ಸಾಹಕ್ಕೆ ಮತ್ತಷ್ಟು ಇಂಬು ನೀಡಲು ನೆರವಾಗುವಂತೆ ಕ್ರಿಕೆಟ್ ಕೂಡ ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ಒಗ್ಗಿಕೊಂಡು ಬಂದಿದೆ. ಭಾರತದಲ್ಲಿ ಐಪಿಎಲ್ ಶುರುವಾದ ನಂತರವಂತೂ ಚುಟುಕು ಕ್ರಿಕೆಟ್ ಹೊಸತೊಂದು ಆಯಾಮವನ್ನೇ ಪಡೆದುಕೊಂಡಿತು ಎಂದರೆ ಅತಿಶಯೋಕ್ತಿ ಅಲ್ಲ. ಈಗಂತೂ 20 ಓವರ್ಗಳಲ್ಲಿನ ಹೊಡಿಬಡಿ ಆಟದಲ್ಲಿ ಕ್ರಿಕೆಟ್ ಪ್ರೇಮಿಗಳು ಸಂತಸ ಕಂಡುಕೊಂಡಿರುವ ಕಾರಣ ಅವರು ಆಟಗಾರರ ಮೇಲಿಡುವ ನಿರೀಕ್ಷೆಯ ಪ್ರಮಾಣವೂ ಹೆಚ್ಚಾಗಿದೆ.
ಅಂದಹಾಗೆ, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪೈಕಿ ಒಬ್ಬ ಮಾತ್ರ ವಿದೇಶಿ ಆಟಗಾರನಿದ್ದು, ಉಳಿದವರೆಲ್ಲರೂ ಭಾರತೀಯರು ಎನ್ನುವುದು ವಿಶೇಷ. ಮೇಲಾಗಿ ಎಲ್ಲರಿಗಿಂತ ಹೆಚ್ಚು ರನ್ ಗಳಿಸಿದ ಆಟಗಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾರೆ ಎನ್ನುವುದು ಕನ್ನಡಿಗರ ಪಾಲಿಗೆ ತುಸು ಹೆಚ್ಚೇ ಸಂತಸ ನೀಡುವ ವಿಷಯ. ಐಪಿಎಲ್ನಲ್ಲಿ ಹೊಡಿಬಡಿ ಆರ್ಭಟ ಎಷ್ಟು ಮುಖ್ಯವೋ ಅದಕ್ಕೆ ತದ್ವಿರುದ್ಧವೆಂಬಂತೆ ತಾಳ್ಮೆಯಿಂದ ನಿಯಮಿತವಾಗಿ ರನ್ ಗಳಿಸಿಕೊಳ್ಳುವುದೂ ಅಷ್ಟೇ ಮುಖ್ಯ. ಈ ಎರಡನ್ನೂ ಸಮಚಿತ್ತದಿಂದ ನಿಭಾಯಿಸಿದಾಗಲೇ ನಿಜವಾದ ಯಶಸ್ಸು ಸಾಧ್ಯ. ಉದಾಹರಣೆಗೆ ಕ್ರಿಸ್ ಗೇಲ್ರಂತಹ ಆಟಗಾರರು ಸಿಡಿದೆದ್ದರೆ ಎದುರಾಳಿಗಳನ್ನು ಧೂಳಿಪಟ ಮಾಡುವ ಸಾಮರ್ಥ್ಯ ಹೊಂದಿರುವರಾದರೂ ಅವರು ಎಲ್ಲಾ ಪಂದ್ಯಗಳಲ್ಲಿ ನಿಂತು ಆಡುತ್ತಾರೆ, ರನ್ ಗಳಿಸುತ್ತಾರೆ ಎಂದು ನಂಬಿಕೆ ಇಡುವುದು ಕಷ್ಟ. ಹೀಗಾಗಿ ಇಲ್ಲಿ ಯಾವ ರೀತಿಯ ಬ್ಯಾಟಿಂಗ್ಗೂ ಸೈ ಎನ್ನುವವರೇ ಹೆಚ್ಚು ಸೂಕ್ತ.
ಅತಿ ಹೆಚ್ಚು ರನ್ ಪೇರಿಸಿದ 5 ಬ್ಯಾಟ್ಸ್ಮನ್ಗಳು
ವಿರಾಟ್ ಕೊಹ್ಲಿ: ಭಾರತೀಯ ತಂಡದ ನಾಯಕ, ಆರ್ಸಿಬಿ ಮುಂದಾಳು ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಡಿರುವ 184 ಪಂದ್ಯಗಳಲ್ಲಿ 5 ಶತಕ, 39 ಅರ್ಧ ಶತಕಗಳಿಸಿದ್ದು, ಸರಾಸರಿ 38.16 ರನ್ ದಾಖಲಿಸಿದ್ದಾರೆ. ಒಟ್ಟು 5,878 ರನ್ ಕಲೆಹಾಕಿರುವ ಕೊಹ್ಲಿ, 5 ಶತಕಗಳ ಪೈಕಿ 4 ಶತಕಗಳನ್ನು 2016ರ ಒಂದೇ ಸೀಸನ್ನಲ್ಲಿ ಬಾರಿಸಿದ್ದಾರೆ ಎನ್ನುವುದು ಗಮನಾರ್ಹ. ಆ ಸೀಸನ್ನಲ್ಲಿ 973 ರನ್ ದಾಖಲಿಸಿದ್ದ ವಿರಾಟ್, ಆಟಗಾರನೊಬ್ಬ ಸೀಸನ್ನಲ್ಲಿ ದಾಖಲಿಸಿದ ಗರಿಷ್ಠ ಮೊತ್ತ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ.
ಸುರೇಶ್ ರೈನಾ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಶಕ್ತಿಯಾಗಿರುವ ಸುರೇಶ್ ರೈನಾ ಐಪಿಎಲ್ನಲ್ಲಿ ಅತಿ ಹೆಚ್ಚು ರನ್ಗಳಿಸಿರುವ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಕಷ್ಟಕಾಲದಲ್ಲಿ ತಂಡದ ಕೈ ಹಿಡಿಯುವ ಸಾಮರ್ಥ್ಯವುಳ್ಳ ರೈನಾ ಇದುವರೆಗೆ ಆಡಿರುವ 189 ಪಂದ್ಯಗಳಿಂದ 5,368 ರನ್ ಗಳಿಸಿದ್ದು, ಅದರಲ್ಲಿ 1 ಶತಕ ಹಾಗೂ 38 ಅರ್ಧ ಶತಗಳಿವೆ ಎಂಬುದು ಗಮನಾರ್ಹ.
ಡೇವಿಡ್ ವಾರ್ನರ್: ಸನ್ರೈಸರ್ಸ್ ಹೈದರಾಬಾದ್ ತಂಡದ ನಾಯಕ ಹಾಗೂ ಆರಂಭಿಕ ಆಟಗಾರ ಆಗಿರುವ ಡೇವಿಡ್ ವಾರ್ನರ್, ಐಪಿಎಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ 5 ಆಟಗಾರರ ಪಟ್ಟಿಯಲ್ಲಿರುವ ಏಕೈಕ ವಿದೇಶಿಗ ಎನ್ನುವುದು ಗಮನಾರ್ಹ. 141+ ಸ್ಟ್ರೈಕ್ ರೇಟ್ ಹೊಂದಿರುವ ವಾರ್ನರ್, ಸರಾಸರಿ 42.71ರಂತೆ ರನ್ ಗಳಿಸಿದ್ದು ಒಟ್ಟು 5,254 ರನ್ ಕಲೆ ಹಾಕಿದ್ದಾರೆ. ಆಡಿರುವ 142 ಪಂದ್ಯಗಳಲ್ಲಿ ಒಟ್ಟು 4 ಶತಕ ಹಾಗೂ 48 ಅರ್ಧ ಶತಕ ಗಳಿಸಿರುವ ಡೇವಿಡ್ ವಾರ್ನರ್ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ.
ರೋಹಿತ್ ಶರ್ಮಾ: ಐಪಿಎಲ್ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಇನ್ನೊಂದು ಪ್ರಮುಖ ದಾಖಲೆಯನ್ನೂ ಬರೆದಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಮೂರು ದ್ವಿಶತಕ ಗಳಿಸಿದ ಏಕೈಕ ಆಟಗಾರ ಹಾಗೂ ಟಿ20 ಮಾದರಿಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ಅವರ ಹೆಸರಿನಲ್ಲಿದೆ. ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಆಡುವ ರೋಹಿತ್ ಶರ್ಮಾ, ಒಟ್ಟು 5,230 ರನ್ ಗಳಿಸಿದ್ದು, ಒಂದು ಶತಕ ಹಾಗೂ 39 ಅರ್ಧಶತಕ ಅದರಲ್ಲಿದೆ.
ಶಿಖರ್ ಧವನ್: ಹೈದರಾಬಾದ್, ಮುಂಬೈ ಇಂಡಿಯನ್ಸ್, ದೆಹಲಿ ಸೇರಿದಂತೆ ಸುಮಾರು ತಂಡಗಳ ಪರ ಆಡಿರುವ ಶಿಖರ್ ಧವನ್ ಆರಂಭಿಕ ಆಟಗಾರನಾಗಿದ್ದು, ಅತ್ಯಧಿಕ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಕಳೆದ ಸೀಸನ್ನಲ್ಲಿ ಎರಡು ಶತಕಗಳನ್ನು ಬಾರಿಸಿದ್ದಲ್ಲದೇ, ಅತ್ಯದ್ಭುತ ಪ್ರದರ್ಶನ ನೀಡಿದ್ದ ಶಿಖರ್ ಧವನ್, ಇದುವರೆಗೆ ಐಪಿಎಲ್ನಲ್ಲಿ ಆಡಿರುವ 175 ಪಂದ್ಯಗಳಲ್ಲಿ 5,197 ರನ್ಗಳಿಸಿದ್ದಾರೆ. ಅದರಲ್ಲಿ 2 ಶತಕ ಹಾಗೂ 41 ಅರ್ಧ ಶತಕಗಳೂ ಸೇರಿಕೊಂಡಿವೆ.
ಇದನ್ನೂ ಓದಿ:
IPL ವಿಶೇಷ: 45, 800 ಕೋಟಿ ರೂ. ಮೌಲ್ಯಮಾಪನ ಹೊಂದಿರುವ ಐಪಿಎಲ್ಗೆ ಆದಾಯ ಬರುವುದಾದರೂ ಹೇಗೆ? ಈ ಸ್ಟೋರಿ ಓದಿ