ಇಂಗ್ಲೆಂಡ್-ಶ್ರೀಲಂಕಾ ಒಡಿಐ ಸರಣಿ: ಮಿಂಚಿದ ವೋಕ್ಸ್ ಮತ್ತು ರೂಟ್​, ಇಂಗ್ಲೆಂಡ್​ಗೆ 5 ವಿಕೆಟ್ ಜಯ

|

Updated on: Jun 30, 2021 | 1:26 AM

ಮುಳುಗುತ್ತಿದ್ದ ನಾವೆಯನ್ನು ಉಳಿಸುವ ಜವಾಬ್ದಾರಿ ಆಗ ಸೀನಿಯರ್ ಆಟಗಾರರಾದ ರೂಟ್​ ಮತ್ತು ಮೊಯೀನ್ ಅಲಿ ಅವರ ಮೇಲೆ ಬಿತ್ತು, ಹೊಣೆಯರಿತು ಆಟವಾಡಿದ ಈ ಜೋಡಿಯು ಗೆಲುವಿಗೆ ಬೇಕಿದ್ದ 106 ರನ್​ಗಳಲ್ಲಿ 91 ರನ್​ ಕಲೆಹಾಕಿ ಟೀಮನ್ನು ಗೆಲುವಿನ ಹತ್ತಿರಕ್ಕೆ ತೆಗೆದುಕೊಂಡು ಹೋದರು

ಇಂಗ್ಲೆಂಡ್-ಶ್ರೀಲಂಕಾ ಒಡಿಐ ಸರಣಿ: ಮಿಂಚಿದ ವೋಕ್ಸ್ ಮತ್ತು ರೂಟ್​, ಇಂಗ್ಲೆಂಡ್​ಗೆ 5 ವಿಕೆಟ್ ಜಯ
ಜೋ ರೂಟ್​
Follow us on

ಕ್ರಿಸ್ ವೋಕ್ಸ್ ಅವರ ಅದ್ಭುತ ಬೌಲಿಂಗ್ ಮತ್ತು ಜೋ ರೂಟ್​ ಅವರ ಜವಾಬ್ದಾರಿಯುತ ಅಜೇಯ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್​ ಮಂಗಳವಾರದಂದು ಚೆಸ್ಟರ್​-ಲೀ ಸ್ಟ್ರೀಟ್​ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ 5 ವಿಕೆಟ್​ಗಳ ಸುಲಭ ಗೆಲುವು ಸಾಧಿಸಿ 3ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಗೆಲುವಿಗೆ 186 ರನ್​ಗಳ ಬೆನ್ನಟ್ಟಿದ ಅತಿಥೇಯರಿಗೆ ಆರಂಭ ಆಟಗಾರರಾದ ಲಿಯಾಮ್ ಲಿವಿಂಗ್​​ಸ್ಟೋನ್ ಮತ್ತು ಜಾನಿ ಬೇರಸ್ಟೋ 5 ಓವರ್​ಗಳಲ್ಲಿ 54 ರನ್​ ಬಾರಿಸಿ ತಂಡಕ್ಕೆ ಉತ್ತಮ ಆರಂಭ ದೊರಕಿಸಿದರು.

ಆದರೆ ಲಿವಿಂಗ್​​ಸ್ಟೋನ್ (9), ಬೇರಸ್ಟೋ (43) ಮೋರ್ಗನ್ (6) ಮತ್ತು ಸ್ಯಾಮ್ ಬಿಲ್ಲಿಂಗ್ಸ (3) ಅವರ ವಿಕೆಟ್​ಗಳನ್ನು ಕೇವಲ 7 ಓವರ್​ಗಳ ಅಂತರದಲ್ಲಿ ಕಳೆದುಕೊಂಡಾಗ ಶ್ರೀಲಂಕಾ ಪಂದ್ಯದಲ್ಲಿ ವಾಪಸ್ಸು ಬರುವ ಲಕ್ಷಣಗಳು ಕಾಣಿಸಿದವು. ಬೇರ್​ಸ್ಟೋ ಅವರನ್ನು ಬಿನುರಾ ಫರ್ನ್ಯಾಂಡೋ ಔಟ್​ ಮಾಡಿದರೆ ದುಷ್ಮಂತ ಚಮೀರ ಅವರು ಮೋರ್ಗನ್ ಮತ್ತು ಬಿಲ್ಲಿಂಗ್ಸ್ ಅವರನ್ನು ಪೆವಿಲಿಯನ್​ಗೆ ವಾಪಸ್ಸು ಕಳಿಸಿದರು.

ಮುಳುಗುತ್ತಿದ್ದ ನಾವೆಯನ್ನು ಉಳಿಸುವ ಜವಾಬ್ದಾರಿ ಆಗ ಸೀನಿಯರ್ ಆಟಗಾರರಾದ ರೂಟ್​ ಮತ್ತು ಮೊಯೀನ್ ಅಲಿ ಅವರ ಮೇಲೆ ಬಿತ್ತು, ಹೊಣೆಯರಿತು ಆಟವಾಡಿದ ಈ ಜೋಡಿಯು ಗೆಲುವಿಗೆ ಬೇಕಿದ್ದ 106 ರನ್​ಗಳಲ್ಲಿ 91 ರನ್​ ಕಲೆಹಾಕಿ ಟೀಮನ್ನು ಗೆಲುವಿನ ಹತ್ತಿರಕ್ಕೆ ತೆಗೆದುಕೊಂಡು ಹೋದರು. ಮೊಯೀನ್ ಅಲಿ 28 ರನ್​ ಗಳಿಸಿ ನಿರ್ಗಮಿಸಿದರೆ ರೂಟ್​ 87 ಎಸೆತಗಳಲ್ಲಿ ಅಜೇಯ 79 ರನ್ ಬಾರಿಸಿದರು.

ಇಂಗ್ಲೆಂಡ್ ಇನ್ನೂ 15.1 ಓವರ್ ಬಾಕಿಯಿರುವಂತೆಯೇ ಗೆಲುವಿನ ರೇಖೆ ದಾಟಿತು.

ಇದಕ್ಕೆ ಮೊದಲು ಟಾಸ್​ ಸೋತು ಬ್ಯಾಟಿಂಗ್​ಗೆ ಕಳಿಸಲ್ಪಟ್ಟ ಶ್ರೀಲಂಕಾಗೆ ಇಂಗ್ಲೆಂಡ್ ವೇಗದ ಬೌಲರ್​ಗಳಾದ ಕ್ರಿಸ್ ವೋಕ್ಸ್ ಮತ್ತು ಡೇವಿಡ್ ವಿಲ್ಲೀ ದುಸ್ವಪ್ನವಾಗಿ ಕಾಡಿದರು. 24 ರನ್​ಗಳಾಗುವಷ್ಟರಲ್ಲಿ ಪಥುಮ ನಿಸ್ಸಾಂಕ ಮತ್ತು ಅಸಲಂಕಾ ವೇಗಿಗಳಿಗೆ ಬಲಿಯಾದರು. ವೋಕ್ಸ್ ಮತ್ತು ವಿಲ್ಲೀ ತಲಾ ಒಂದು ವಿಕೆಟ್ ಪಡೆದರು.

ನಂತರ ಬಿದ್ದ ಮೂರು ವಿಕೆಟ್​ಗಳನ್ನು ವೋಕ್ಸ್ ಅವರೇ ಪಡೆದರು. ಶನಕ ಕೇವಲ 1 ರನ್​ ಗಳಿಸಿ ಔಟಾದರೂ, ನಾಯಕ ಕುಸಲ ಪೆರೆರಾ ಮತ್ತು ವನಿಂದು ಹಸರಂಗ (54) 4ನೇ ವಿಕೆಟ್​ಗೆ 99 ರನ್ ಸೇರಿಸಿದ್ದಾಗ ಹಸರಂಗ ಅವರನ್ನು ಔಟ್ ಮಾಡುವ ಮೂಲಕ ವೋಕ್ಸ್​ ಜೊತೆಗಾರಿಕೆಯನ್ನು ಮುರಿದರು.

ಎರಡು ಓವರಗಳ ನಂತರ ದನಂಜಯ ಲಕ್ಷನ್ ಅವರ ವಿಕೆಟ್​ ಪಡೆದ ನಂತರ ವೋಕ್ಸ್ ಅವರ 4-ವಿಕೆಟ್ ಸಾಧನೆ ಪೂರ್ತಿಗೊಂಡಿತು. ಅಲ್ಲಿಂದ ಪ್ರವಾಸಿ ತಂಡದ ಪತನ ಶುರುವಾಯಿತು. ಅದು ಕೊನೆಯ 7 ವಿಕೆಟ್​ಗಳನ್ನು 40 ರನ್​ ಸೇರಿಸುವಷ್ಟರಲ್ಲಿ ಕಳದುಕೊಂಡಿತು. 73 ರನ್ ಗಳಿಸಿದ ಪೆರೆರಾ ಅವರನ್ನು ಬಲಿ ಪಡೆದ ವಿಲ್ಲೀ 44 ರನ್​ಗಳಿಗೆ 3 ವಿಕೆಟ್​ ಪಡೆದರು.

ಸ್ಯಾಮ್ ಬಿಲ್ಲಿಂಗ್ಸ್ ಅವರು ನೇರ ಎಸೆತವೊಂದರ ಮೂಲಕ ಪ್ರವೀಣ್ ಜಯವಿಕ್ರಮ ಅವರನ್ನು ರನೌಟ್​ ಮಾಡುವುದರೊಂದಿಗೆ ಲಂಕಾ ತಂಡದ ಇನ್ನಿಂಗ್ಸ್ 185 ರನ್​ಗಳಿಗೆ ಕೊನೆಗೊಂಡಿತು.

ಸಂಕ್ಷಿಪ್ತ ಸ್ಕೋರ್​ಗಳು:

ಶ್ರೀಲಂಕಾ: 185/10 (42.3 ಓವರ್) ವನಿಂದು ಹಸರಂಗ 54, ಕುಸಲ ಪೆರೆರಾ 73, ವೋಕ್ಸ್ 4/18, ವಿಲ್ಲೀ 3/44

ಇಂಗ್ಲೆಂಡ್: 189/5 (34.1 ಓವರ್) ಜಾನಿ ಬೇರ್​ಸ್ಟೋ 43, ಜೋ ರೂಟ್ ಔಟಾಗದೆ 79, ಮೊಯೀನ್ ಅಲಿ 28. ದುಷ್ಮಂತ ಚಮೀರ 3/50

ಇಂಗ್ಲೆಂಡ್​ಗೆ 5 ವಿಕೆಟ್​ಗಳ ಜಯ

ಇದನ್ನೂ ಓದಿ: India Cricket Schedule 2021-23: ಸೀನಿಯರ್ ಅಟಗಾರರಿಗೆ ಬ್ರೇಕ್ ನೀಡುವ ಪ್ರಸ್ತಾಪ ಬಿಸಿಸಿಐ ಮುಂದಿಟ್ಟ ಕೋಚ್ ರವಿ ಶಾಸ್ತ್ರೀ