ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಇತ್ತೀಚೆಗಷ್ಟೇ ನಡೆಯಿತು. ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಒಟ್ಟು 7 ವಿಕೆಟ್‌ಗಳನ್ನು ಪಡೆದ ಜಾಮಿಸನ್ ಭಾರತೀಯ ಬ್ಯಾಟಿಂಗ್ ಲೈನ್‌ಅಪ್‌ನ್ನು ಕೆಡವಿ ಹಾಕಿದರು. ಕೈಲ್ ಜಾಮಿಸನ್, ಟೆಸ್ಟ್ ಫೈನಲ್ ಪಂದ್ಯದ ಒಂದೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕೂಡ ಪಡೆದರು. ಆದರೆ, ಪಂದ್ಯದ ಕೊನೆಯ ದಿನದಂದು ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ನ್ಯೂಜಿಲ್ಯಾಂಡ್ ಆಟಗಾರ ಜಾಮಿಸನ್ ಡ್ರೆಸಿಂಗ್ ರೋಮ್‌ನಲ್ಲಿ ಕುಳಿತಿರಲಿಲ್ಲವಂತೆ. ಬದಲಾಗಿ ಬಾತ್‌ರೂಮ್‌ನಲ್ಲಿ ಇದ್ದರಂತೆ. ಈ ಘಟನೆಯ ಬಗ್ಗೆ ಜಾಮಿಸನ್ ಮಾತನಾಡಿದ್ದಾರೆ.
ಫೈನಲ್ ಪಂದ್ಯದ ಅಂತಿಮ ದಿನದ ಒತ್ತಡದ ಕಾರಣದಿಂದ ನ್ಯೂಜಿಲ್ಯಾಂಡ್ ಆಟಗಾರರು ಆತಂಕ, ಕಳವಳ, ಒತ್ತಡ ಅನುಭವಿಸಿದ್ದರು. ಈ ಘಟನೆಯನ್ನು ಸ್ವತಃ ಕೈಲ್ ಜಾಮಿಸನ್ ಹಂಚಿಕೊಂಡಿದ್ದಾರೆ. ಡ್ರೆಸಿಂಗ್ ರೂಮ್‌ನಲ್ಲಿ ಕುಳಿತು ಪಂದ್ಯ ನೋಡುತ್ತಾ ಅವರು ಬಹಳ ಒತ್ತಡ ಅನುಭವಿಸಿದ್ದರು ಎಂದು ಹೇಳಿದ್ದಾರೆ.
ಆ ದಿನದ ಆಟ ಬಹಳ ಕಠಿಣ ಸನ್ನಿವೇಶದಲ್ಲಿ ಇತ್ತು. ನಾನು ಪಂದ್ಯವನ್ನು ವೀಕ್ಷಿಸುತ್ತಿದ್ದೆ. ನಾವೆಲ್ಲರೂ ಡ್ರೆಸಿಂಗ್ ರೂಮ್ ಒಳಗೆ ಕೂತು ಟಿವಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದೆವು. ಟಿವಿಯಲ್ಲಿನ ನೇರಪ್ರಸಾರ ಕೆಲವು ಸೆಕೆಂಡುಗಳಷ್ಟು ನಿಧಾನವಾಗಿ ಇರುತ್ತದೆ. ಈ ವೇಳೆ, ಮೈದಾನದಲ್ಲಿ ಇದ್ದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪ್ರತೀ ಬಾಲ್‌ಗೂ ಕೂಗು ಹಾಕುತ್ತಿದ್ದರು. ಆಗೆಲ್ಲಾ ವಿಕೆಟ್ ಬಿದ್ದಂತೆಯೇ ಅನಿಸಿ ಭಯವಾಗುತ್ತಿತ್ತು. ಆದರೆ, ಅದು ರನ್ ಅಥವಾ ಡಾಟ್ ಬಾಲ್ ಆಗಿರುತ್ತಿತ್ತು. ಈ ಸಂದರ್ಭ ಎದುರಿಸುವುದೇ ಒಂದು ಸವಾಲಾಗಿತ್ತು. ಸದ್ದು ಗದ್ದಲದಿಂದ ದೂರ ಸರಿಯುವ ಉದ್ದೇಶದಿಂದಲೇ ನಾನು ಹಲವು ಬಾರಿ ಬಾತ್‌ರೂಮ್‌ಗೆ ಹೋಗಿ ಬಂದು ಮಾಡುತ್ತಿದ್ದೆ ಎಂದು ಜಾಮಿಸನ್ ಆ ದಿನದ ಅನುಭವ ವಿವರಿಸಿದ್ದಾರೆ.
ನಾಯಕ ಕೇನ್ ವಿಲಿಯಮ್ಸನ್ ಹಾಗೂ ಅನುಭವಿ ರಾಸ್ ಟಯ್ಲರ್ 139 ರನ್‌ಗಳ ಟಾರ್ಗೆಟ್‌ನ್ನು ನಿರಾಯಾಸವಾಗಿ ಬೆನ್ನತ್ತಿದ್ದರು. ಕೇನ್ ವಿಲಿಯಮ್ಸನ್ ಮತ್ತು ರಾಸ್ ಟಯ್ಲರ್ ಅಂತಹ ಆಟಗಾರರು ತಂಡದಲ್ಲಿ ಇರುವುದು ಸಂತಸದ ಸಂಗತಿಯಾಗಿದೆ. ನಮ್ಮ ತಂಡದ ಇಬ್ಬರು ಅತ್ಯುತ್ತಮ ಆಟಗಾರರು ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ಸರಿದೂಗಿಸಿದರು.
ಆದರೆ, ಈ ಗೆಲುವಿನ ಸಂಭ್ರಮವನ್ನು ಪೂರ್ಣ ಅನುಭವಿಸಲು ಜಾಮಿಸನ್‌ಗೆ ಸಮಯ ಸಿಗಲಿಲ್ಲ. ಕೈಲ್ ಜಾಮಿಸನ್ ನಂತರದ 48 ಗಂಟೆಗಳಲ್ಲಿ ಸರ್ರೆ ತಂಡದ ಪರವಾಗಿ ಟಿ20 ಆಡಲು ತೆರಳಬೇಕಿತ್ತು. ಸರ್ರೆ ಪರವಾಗಿ ಆಡುವಾಗಲೂ ಅವರು ಟೆಸ್ಟ್ ಚಾಂಪಿಯನ್‌ಶಿಪ್ ಗೆಲುವಿನ ಅನುಭವ ಹೇಳಿಕೊಂಡಿದ್ದರು. ದೇಶಕ್ಕಾಗಿ ಆಡುವುದು ಯಾವತ್ತೂ ಉತ್ತಮ ಅನುಭವ. ನ್ಯೂಜಿಲ್ಯಾಂಡ್ ತಂಡದ ಆಟಗಾರರಿಗೆ ಗುಡ್ ಬೈ ಹೇಳುವುದು ಕಷ್ಟವಾಗಿತ್ತು ಎಂದು ಹೇಳಿದ್ದರು.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಬದಲು ಈ ಕನ್ನಡಿಗನಿಗೆ ಅವಕಾಶ ಕೊಡಿ; ಸುನಿಲ್ ಗವಾಸ್ಕರ್