MS Dhoni: ಧೋನಿಯ ಹೆಲ್ಮೆಟ್ಗೆ ರಾಷ್ಟ್ರಧ್ವಜವನ್ನು ಹೊಂದುವ ಭಾಗ್ಯ ಸಿಗಲಿಲ್ಲ; ಇದರ ಹಿಂದಿನ ಅಸಲಿ ಕಾರಣ ಗೊತ್ತಾ?
ರಾಷ್ಟ್ರಧ್ವಜ ಎನ್ನುವುದು ಆಯಾ ದೇಶದಲ್ಲಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗುವ ಚಿಹ್ನೆಯಾಗಿದ್ದು, ರಾಷ್ಟ್ರಧ್ವಜವನ್ನು ನೆಲದ ಮೇಲೆ ಇಡುವುದು ಸರಿಯಲ್ಲ. ಈ ನೆಲದ ಕಾನೂನು ಕೂಡಾ ರಾಷ್ಟ್ರಧ್ವಜಕ್ಕೆ ಅತಿಹೆಚ್ಚು ಗೌರವ ನೀಡಬೇಕು ಎನ್ನುವುದನ್ನೇ ಅನುಮೋದಿಸುತ್ತದೆ.
ಭಾರತೀಯ ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಮಹೇಂದ್ರ ಸಿಂಗ್ ಧೋನಿ ಎಂದರೇ ಅಂದಿಗೂ ಇಂದಿಗೂ ವಿಶೇಷ ಅಭಿಮಾನ. ಪಂದ್ಯ ನಡೆಯುವಾಗ ಮೈದಾನದಲ್ಲಿ ನಿಂತು ತಂಡವನ್ನು ಮುನ್ನಡೆಸುವ ಕ್ಯಾಪ್ಟನ್ ಕೂಲ್ ಆಗಿದ್ದ ಧೋನಿಯನ್ನು ಕ್ರಿಕೆಟ್ ಹೊರತಾಗಿಯೂ ಇಷ್ಟಪಡಲು ಅನೇಕ ಕಾರಣಗಳಿವೆ. ಅಂದು ತಂಡದ ನಾಯಕನಾಗಿದ್ದ ಧೋನಿ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದರೆ ನೋಡುವವರ ಮೈ ರೋಮಾಂಚಿತವಾಗುತ್ತಿತ್ತು. ಎಂತಹ ಕಠಿಣ ಸಂದರ್ಭವಿದ್ದರೂ ಧೋನಿ ಇದ್ದಾರೆ ಎಂಬ ನಂಬಿಕೆಯಲ್ಲೇ ಕ್ರಿಕೆಟ್ ಪ್ರೇಮಿಗಳು ತುದಿಗಾಲಿನಲ್ಲಿ ಕೂತು ಕೊನೆಯ ಬಾಲ್ ತನಕವೂ ಕಾಯುತ್ತಿದ್ದರು. ಆದರೆ, ನೀವು ಸೂಕ್ಷ್ಮವಾಗಿ ಗಮನಿಸಿದ್ದರೆ ಒಂದು ಅಂಶ ನಿಮ್ಮನ್ನು ಕಾಡಿರಲೂ ಸಾಕು. ಅದೇನೆಂದರೆ ಬ್ಯಾಟ್ ಹಿಡಿದು, ಹೆಲ್ಮೆಟ್ ಧರಿಸಿ ಮೈದಾನಕ್ಕಿಳಿಯುತ್ತಿದ್ದ ಕೊಹ್ಲಿ, ರೋಹಿತ್ ಶರ್ಮಾ ಆದಿಯಾಗಿ ಎಲ್ಲರ ಹೆಲ್ಮೆಟ್ನಲ್ಲೂ ಭಾರತದ ಧ್ವಜ ಇದ್ದರೆ, ಧೋನಿ ಹೆಲ್ಮೆಟ್ನಲ್ಲಿ ಬಿಸಿಸಿಐ ಚಿಹ್ನೆಯೊಂದೇ ಇರುತ್ತಿತ್ತು. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ, ಎಲ್ಲರ ಮನಗೆದ್ದ ಧೋನಿ ಹೆಲ್ಮೆಟ್ಗೆ ತ್ರಿವರ್ಣ ಧ್ವಜವನ್ನು ಹೊಂದುವ ಭಾಗ್ಯ ಏಕೆ ಸಿಗುತ್ತಿರಲಿಲ್ಲ ಎನ್ನುವುದನ್ನು ತಿಳಿದರೆ ನಿಜಕ್ಕೂ ಧೋನಿಯ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚುತ್ತದೆ.
ಭಾರತ ತಂಡದ ನಾಯಕನಾಗಿದ್ದ ಧೋನಿ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಾಧಾರಣವಾಗಿ ವಿಕೆಟ್ ಕೀಪರ್ ಆಗಿದ್ದವರಿಗೆ ಆಗಾಗ ತಮ್ಮ ಹೆಲ್ಮೆಟ್ ಕಳಚಿ ಕೆಳಗಿಡಬೇಕಾದ ಅನಿವಾರ್ಯತೆಗಳು ಎದುರಾಗುತ್ತಿರುತ್ತವೆ. ಹೆಲ್ಮೆಟ್ ಧರಿಸದೇ ಇರುವಾಗ ತಮ್ಮ ಪಕ್ಕದಲ್ಲೋ ಅಥವಾ ಕೊಂಚ ಹಿಂಬದಿಯಲ್ಲೋ ಮೈದಾನದ ಮೇಲೆ ಹೆಲ್ಮೆಟ್ ಇಡುವುದು ಸಹಜ ಕೂಡಾ. ಆದರೆ, ರಾಷ್ಟ್ರಧ್ವಜ ಎನ್ನುವುದು ಆಯಾ ದೇಶದಲ್ಲಿ ಅತ್ಯುನ್ನತ ಗೌರವಕ್ಕೆ ಪಾತ್ರವಾಗುವ ಚಿಹ್ನೆಯಾಗಿದ್ದು, ರಾಷ್ಟ್ರಧ್ವಜವನ್ನು ನೆಲದ ಮೇಲೆ ಇಡುವುದು ಸರಿಯಲ್ಲ. ಈ ನೆಲದ ಕಾನೂನು ಕೂಡಾ ರಾಷ್ಟ್ರಧ್ವಜಕ್ಕೆ ಅತಿಹೆಚ್ಚು ಗೌರವ ನೀಡಬೇಕು ಎನ್ನುವುದನ್ನೇ ಅನುಮೋದಿಸುತ್ತದೆ.
ಈ ನಿಯಮವನ್ನು ಗೌರವಿಸಬೇಕೆಂದರೆ ವಿಕೆಟ್ ಕೀಪರ್ ಆಗಿರುವವರು ಒಂದೋ ತಾವು ಧರಿಸಿದ ಹೆಲ್ಮೆಟ್ ಅನ್ನು ಯಾವ ಸಂದರ್ಭದಲ್ಲೂ ಕಳಚಿ ನೆಲದ ಮೇಲಿಡಬಾರದು ಅಥವಾ ಹೆಲ್ಮೆಟ್ ಮೇಲೆ ರಾಷ್ಟ್ರಧ್ವಜವನ್ನು ಮುದ್ರಿಸಬಾರದು. ಹೀಗಿದ್ದಾಗ ಮಾತ್ರ ರಾಷ್ಟ್ರಧ್ವಜವನ್ನು ನೆಲಕ್ಕೆ ತಾಗಿಸದೇ ಸೂಕ್ತ ಗೌರವವನ್ನು ನೀಡಲು ಸಾಧ್ಯ. ಆದರೆ, ಆಡುವಾಗ ಕೀಪರ್ ಹೆಲ್ಮೆಟ್ ತೆಗೆಯಲೇಬಾರದು ಎಂದರೆ ಅದು ಕೆಲ ಸಂದರ್ಭಗಳಲ್ಲಿ ಕಷ್ಟವಾಗುತ್ತದೆ.
ಮೇಲಾಗಿ, ಎಲ್ಲಕ್ಕಿಂತ ಹೆಚ್ಚು ದೇಶವನ್ನು ಪ್ರೀತಿಸುವ, ದೇಶದ ಮೇಲೆ ಅಭಿಮಾನ ಹೊಂದಿದ ಧೋನಿ ಎಂತಹ ವ್ಯಕ್ತಿತ್ವ ಹೊಂದಿದವರು ಎಂದು ಎಲ್ಲರಿಗೂ ಗೊತ್ತು. ನಾನು ಕ್ರಿಕೆಟರ್ ಆಗಿರದಿದ್ದರೆ ಭಾರತೀಯ ಸೇನೆಗೆ ಸೇರುತ್ತಿದ್ದೆ ಎನ್ನಿಸುತ್ತದೆ ಎನ್ನುವುದನ್ನೂ ಸ್ವತಃ ಧೋನಿಯೇ ಹೇಳಿಕೊಂಡಿದ್ದಾರೆ. ಹೀಗಾಗಿಯೇ ಅವರು ರಾಷ್ಟ್ರಧ್ವಜದ ಗೌರವಕ್ಕೆ ಚ್ಯುತಿ ಬರಬಾರದು ಎಂಬ ಕಾರಣಕ್ಕೆ ಹೆಲ್ಮೆಟ್ ಮೇಲೆ ಧ್ವಜವನ್ನು ಅಂಟಿಸಿಕೊಳ್ಳುತ್ತಿರಲಿಲ್ಲ.
ಇದನ್ನೂ ಓದಿ: MS Dhoni: ನೋಡುಗರ ಕಣ್ಣು ಕುಕ್ಕುತ್ತಿದೆ ಧೋನಿಯ ಹೊಸ ಲುಕ್! ಮೀಸೆ ತಿರುವಿ ಸಾಮಾಜಿಕ ಅರಿವು ಮೂಡಿಸಿದ ಮಹೀ
ನನ್ನ ಬದಲು ಧೋನಿಗೆ ಪಟ್ಟ ಕಟ್ಟಿದರು! ಆದರೆ ಈ ನಿರ್ಧಾರ ನಮ್ಮ ಸಂಬಂಧವನ್ನು ಹಾಳು ಮಾಡಲಿಲ್ಲ: ಯುವರಾಜ್ ಸಿಂಗ್