ಎಲ್ಲರೂ ‘ಗದೆ ಎಲ್ಲಿ?’ ಎಂದೇ ಕೇಳಿದರು! ಟೆಸ್ಟ್ ಚಾಂಪಿಯನ್ಶಿಪ್ ಟ್ರೋಫಿ ಗೆದ್ದು ತವರಿಗೆ ಮರಳಿದ ಅನುಭವ ವಿವರಿಸಿದ ನೀಲ್ ವಾಗ್ನರ್
ಮೊತ್ತಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದವರು ಎಂಬ ಪಟ್ಟ ಪಡೆದುಕೊಂಡ ನ್ಯೂಜಿಲ್ಯಾಂಡ್ ಪರವಾಗಿ ವಾಗ್ನರ್ ಮೂರು ವಿಕೆಟ್ ಪಡೆದಿದ್ದರು. ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಎರಡು ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಒಂದು ವಿಕೆಟ್ ಕಿತ್ತಿದ್ದರು.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲ್ಯಾಂಡ್ ತಂಡ ಗೆದ್ದಿರುವುದು ನಮಗೆಲ್ಲಾ ತಿಳಿದಿರುವ ವಿಚಾರವೇ ಆಗಿದೆ. ಮಳೆ, ಹವಾಮಾನ ಸಮಸ್ಯೆಯ ಕಾರಣದಿಂದ ಆರು ದಿನಗಳ ಕಾಲ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಮಣಿಸಿ ನ್ಯೂಜಿಲ್ಯಾಂಡ್ ಟೆಸ್ಟ್ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತ್ತು. ಕೇನ್ ವಿಲಿಯಮ್ಸನ್ ತಂಡ 8 ವಿಕೆಟ್ಗಳ ಗೆಲುವು ದಾಖಲಿಸಿಕೊಂಡಿತ್ತು. ಐಸಿಸಿ ಟ್ರೋಫಿಗೆ ಹಲವು ಕಾಲದಿಂದ ಕಾದು ಕೂತಿದ್ದ ನ್ಯೂಜಿಲ್ಯಾಂಡ್ಗೆ ಭರ್ಜರಿ ಗೆಲುವು ಸಿಕ್ಕಂತಾಗಿದೆ. ಈ ವಿಶೇಷ ಗೆಲುವಿನ ಬಳಿಕ ತವರಿಗೆ ವಾಪಾಸಾದ ಅನುಭವವನ್ನು ನ್ಯೂಜಿಲ್ಯಾಂಡ್ ಆಟಗಾರ ನೀಲ್ ವಾಗ್ನರ್ ಹಂಚಿಕೊಂಡಿದ್ದಾರೆ.
ನಾನು ಹಿಂದೆಂದೂ ಇಂತಹ ಸ್ವಾಗತ ಕಂಡಿರಲಿಲ್ಲ. ಎದುರಿಸಿರಲಿಲ್ಲ. ಎಲ್ಲರೂ ನಮ್ಮನ್ನು ಖುಷಿಯಿಂದ ಸ್ವಾಗತಿಸಿದರು. ಎಲ್ಲರೂ ನೇರವಾಗಿ ಶುಭಾಶಯಗಳನ್ನು ತಿಳಿಸುತ್ತಿದ್ದರು. ನಮ್ಮ ಪಾಸ್ಪೋರ್ಟ್ಗಳನ್ನೂ ಕಸಿದುಕೊಂಡು ನಿಂತು ಮಾತನಾಡಿಸುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ನಾವು ಗೆದ್ದ ಟ್ರೋಫಿ ಬೇಕಾಗಿತ್ತು. ಅದೆಲ್ಲಿದೆ? ಅದೆಲ್ಲಿದೆ? ಎಂದು ಕೇಳುತ್ತಿದ್ದರು. ಅದರ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಳ್ಳಲು ಕಾಯುತ್ತಿದ್ದರು. ಪೊಲೀಸ್ ಅಧಿಕಾರಿಗಳು ಕೂಡ ಅದರೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಇದು ಬಹಳ ಉತ್ತಮ ಅನುಭವ ಎಂದು ವಾಗ್ನರ್ ಹೇಳಿಕೊಂಡಿದ್ದಾರೆ.
ಮೊತ್ತಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದವರು ಎಂಬ ಪಟ್ಟ ಪಡೆದುಕೊಂಡ ನ್ಯೂಜಿಲ್ಯಾಂಡ್ ಪರವಾಗಿ ವಾಗ್ನರ್ ಮೂರು ವಿಕೆಟ್ ಪಡೆದಿದ್ದರು. ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಎರಡು ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಒಂದು ವಿಕೆಟ್ ಕಿತ್ತಿದ್ದರು.
ಪಂದ್ಯ ಗೆದ್ದು ಹಿಂತಿರುಗಿದ ಅನುಭವ ಈಗಲೂ ನಂಬಲಾಗುತ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದ್ದದ್ದರಿಂದ ಯಾರೂ ಶೇಕ್ ಹ್ಯಾಂಡ್ ಮಾಡಲೂ ಆಗುತ್ತಿರಲಿಲ್ಲ. ಅಷ್ಟಲ್ಲದೇ ನಮ್ಮ ಜೊತೆಗೆ ಟ್ರೋಫಿ ಇತ್ತು. ಅದರೊಂದಿಗೆ ಫೋಟೊ ತೆಗೆಯದೆ ಅವರ್ಯಾರೂ ಮುಂದೆ ಹೋಗುತ್ತಿರಲಿಲ್ಲ. ಹಾಗೆಂದು ಅದನ್ನು ಎಲ್ಲರ ಕೈಗೆ ಕೊಡುವಂತೆಯೂ ಇರಲಿಲ್ಲ ಎಂದು ವಾಗ್ನರ್ ಸನ್ನಿವೇಶವನ್ನು ವಿವರಿಸಿದ್ದಾರೆ.
ಪಂದ್ಯ ಗೆದ್ದ ದಿನ ನಾವು ಟ್ರೋಫಿಯನ್ನು ಎಲ್ಲರೂ ಹಂಚಿಕೊಂಡು, ಅವರ ಅವರ ಸರದಿಯಲ್ಲಿ ಹಿಡಿದುಕೊಂಡು ಫೋಟೊ ತೆಗೆಸಿಕೊಂಡಿದ್ದೆವು. ವಿವಿಧ ರೀತಿಯಲ್ಲಿ ಸಂಭ್ರಮ ಪಟ್ಟಿದ್ದೆವು. ವಿಮಾನದಲ್ಲಿ ಕೂಡ ಕೈಯಿಂದ ಕೈಗೆ ಅದು ಒಂದೆರಡು ಬಾರಿ ಹಸ್ತಾಂತರವಾಗಿತ್ತು. ಬಳಿಕ, ರಾಸ್ ಟಯ್ಲರ್ ಟ್ರೋಫಿಯನ್ನು ವಾಟ್ಲಿಂಗ್ಗೆ ಕೊಟ್ಟಿದ್ದರು. ಮುಂದಿನ ಎರಡು ವಾರಗಳ ಕಾಲ ಟ್ರೋಫಿಯನ್ನು ವಾಟ್ಲಿಂಗ್ ಇಟ್ಟುಕೊಳ್ಳಲಿದ್ದಾರೆ.
ವಾಟ್ಲಿಂಗ್ಗೆ ಇದು ಶುಭವಿದಾಯ. ಅವರ ವೃತ್ತಿಜೀವನದ ಕೊನೆಯ ಪಂದ್ಯದಲ್ಲಿ ಗೆಲುವಿನ ಉಡುಗೊರೆ ಸಿಕ್ಕಿದೆ. ವಾಟ್ಲಿಂಗ್ ಒಬ್ಬ ಉತ್ತಮ ವ್ಯಕ್ತಿ. ಅವರು ತಂಡದ ಹೃದಯ ಮತ್ತು ಮನಸೂ ಆಗಿದ್ದಾರೆ. ಆರಂಭದಿಂದಲೂ ಇಲ್ಲಿಯತನಕ ಕ್ರಿಕೆಟ್ ಜೀವನದಲ್ಲಿ ಹಲವು ಏಳುಬೀಳುಗಳನ್ನು ಕಂಡು ಬಂದಿದ್ದಾರೆ. ಈ ತಂಡ ವಾಟ್ಲಿಂಗ್ರನ್ನು ಖಂಡಿತಾ ಮಿಸ್ ಮಾಡಿಕೊಳ್ಳುತ್ತದೆ ಎಂದು ವಾಗ್ನರ್ ಹೇಳಿದ್ದಾರೆ.