ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಮೊದಲು ಟೀಮ್ ಇಂಡಿಯಾ ಅಭ್ಯಾಸ ಪಂದ್ಯಗಳಿಗೆ ಮನವಿ ಮಾಡುತ್ತಿದೆ!
ಡಬ್ಲ್ಯೂಟಿಸಿಯ ನಂತರ ಸುದೀರ್ಘವಾದ ಅಂತರ ಮತ್ತು ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ ಸೋಲನ್ನು ದೃಟ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಕಾರ್ಯದರ್ಶಿ ಜಯ್ ಶಾಹ ಅವರು ಭಾರತದ ಟೀಮ್ ಮ್ಯಾನೇಜ್ಮೆಂಟ್ ಜೊತೆ ಸಮಾಲೋಚನೆ ನಡೆಸಿದ್ದು ಸರಣಿ ಆರಂಭಕ್ಕೆ ಮೊದಲು ಒಂದೆರಡು ಅಭ್ಯಾಸ ಪಂದ್ಯಗಳನ್ನು ಆಡುವುದು ಒಳಿತು ಮತ್ತು ಇದೇ ಸಂಬಂಧವಾಗಿ ಈಸಿಬಿಗೆ ಮನವಿ ಮಾಡುವ ಸಾಮೂಹಿಕ ನಿರ್ಣಯಕ್ಕೆ ಬಂದಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಫೈನಲ್ ಪಂದ್ಯಕ್ಕೆ ಮೊದಲು ತಮ್ಮೊಳಗೆ ಎರಡು ಟೀಮುಗಳನ್ನು ಮಾಡಿಕೊಂಡು ಆಡುವುದನ್ನೇ ಅಭ್ಯಾಸವೆಂದುಕೊಂಡು, ಇಂಗ್ಲೆಂಡ್ ವಿರುದ್ಧ ಆಗಷ್ಟೇ ಸರಣಿ ಗೆದ್ದು ಇಂಗ್ಲಿಷ್ ಕಂಡೀಷನ್ಗಳಿಗೆ ಚೆನ್ನಾಗಿ ಹೊಂದಿಕೊಂಡು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ನ್ಯೂಜಿನೆಂಡ್ ವಿರುದ್ಧ ಮೈದಾನಕ್ಕಿಳಿದು ಅವಮಾನಕರ ಸೋಲು ಅನುಭವಿಸಿದ ವಿರಾಟ್ ಕೊಹ್ಲಿಯ ಟೀಮ್ ಇಂಡಿಯಾ ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಪ್ಪಿನ ಅರಿವಾದಂತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ 5-ಪಂದ್ಯಗಳ ಟೆಸ್ಟ್ ಸರಣಿಗೆ ಮೊದಲು ಒಂದೆರಡು ಅಭ್ಯಾಸದ ಪಂದ್ಯಗಳನ್ನು ಆಯೋಜಿಸುವಂತೆ ಬಿಸಿಸಿಐ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ಪತ್ರವೊಂದನ್ನು ಬರೆಯಲಿದೆ. ಈ ಸರಣಿಯು ಹೆಚ್ಚು-ಕಡಿಮೆ ಒಂದೂವರೆ ತಿಂಗಳಿನ ನಂತರ (ಆಗಸ್ಟ್ 4) ಆರಂಭವಾಗಲಿದೆ.
ಡಬ್ಲ್ಯೂಟಿಸಿಯ ನಂತರ ಸುದೀರ್ಘವಾದ ಅಂತರ ಮತ್ತು ನ್ಯೂಜಿಲೆಂಡ್ ವಿರುದ್ಧ ಅನುಭವಿಸಿದ ಸೋಲನ್ನು ದೃಟ್ಟಿಯಲ್ಲಿಟ್ಟುಕೊಂಡು ಬಿಸಿಸಿಐ ಕಾರ್ಯದರ್ಶಿ ಜಯ್ ಶಾಹ ಅವರು ಭಾರತದ ಟೀಮ್ ಮ್ಯಾನೇಜ್ಮೆಂಟ್ ಜೊತೆ ಸಮಾಲೋಚನೆ ನಡೆಸಿದ್ದು ಸರಣಿ ಆರಂಭಕ್ಕೆ ಮೊದಲು ಒಂದೆರಡು ಅಭ್ಯಾಸ ಪಂದ್ಯಗಳನ್ನು ಆಡುವುದು ಒಳಿತು ಮತ್ತು ಇದೇ ಸಂಬಂಧವಾಗಿ ಈಸಿಬಿಗೆ ಮನವಿ ಮಾಡುವ ಸಾಮೂಹಿಕ ನಿರ್ಣಯಕ್ಕೆ ಬಂದಿದ್ದಾರೆ.
ಇಂಡಿಯನ್ ಎಕ್ಸ್ಪ್ರೆಸ್ ಜೊತೆ ಮಾತಾಡಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್, ‘ಜಯ್ ಶಾಹ ಅವರು ಈಸಿಬಿ ಮತ್ತು ಅದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಾಮ್ ಹ್ಯಾರಿಸನ್ ಜೊತೆ ಮಾತಾಡಿ, ಟೆಸ್ಟ್ ಸರಣಿ ಆರಂಭವಾಗುವ ಮೊದಲು, ಒಂದೆರಡು ಅಭ್ಯಾಸದ ಪಂದ್ಯಗಳ ಏರ್ಪಾಟು ಮಾಡುವಂತೆ ವಿನಂತಿಸಿಕೊಳ್ಳಲಿದ್ದಾರೆ,’ ಎಂದು ಹೇಳಿದ್ದಾರೆ. ಟೆಸ್ಟ್ ಸರಣಿಗೆ ಮೊದಲು ಭಾರತ ಕನಿಷ್ಟ ಎರಡು ಅಭ್ಯಾಸದ ಪಂದ್ಯಗಳನ್ನು ಆಡಬೇಕೆಂಬ ಅಂಶವನ್ನು ಕಾರ್ಯದರ್ಶಿಗಳು ಮನಗಂಡಿದ್ದಾರೆ ಎಂದು ಧುಮಾಲ್ ಹೇಳಿದ್ದಾರೆ.
ಕೋವಿಡ್-19 ಪಿಡುಗು ಸಂಬಂಧಿಸಿದ ನಿಯಮಾವಳಿಗಳು, ಕ್ವಾರಂಟೀನ್ ಮೊದಲಾದವುಗಳಿಂದಾಗಿ ಯಾವುದೇ ಅತಿಥೇಯ ರಾಷ್ಟ್ರಕ್ಕೆ ಅಭ್ಯಾಸ ಪಂದ್ಯಗಳನ್ನು ಆಯೋಜಿಸಿವುದು ಕಷ್ಟವಾಗುತ್ತಿದೆ. ಸಾಮಾನ್ಯವಾಗಿ ಪ್ರವಾಸಿ ತಂಡ ಅತಿಥೇಯ ರಾಷ್ಟ್ರದ ವಾತಾವರಣಕ್ಕೆ ಹೊಂದಿಕೊಳ್ಳಲು ಅನುವು ಮಾಡಿಕೊಡುವುದಕ್ಕೋಸ್ಕರ ಒಂದು ಪ್ರಮುಖ ಸರಣಗೆ ಮೊದಲು ಕನಿಷ್ಟ ಒಂದು 3-ದಿನಗಳ ಅಭ್ಯಾಸ ಪಂದ್ಯವನ್ನು ಆಯೋಜಿಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಭಾರತದ ಎ ಟೀಮ್ಗಳು ಇಂಗ್ಲೆಂಡ್ ಪ್ರವಾಸ ಕೈಗೊಂಡಿವೆ.
ಆದರೆ ಡಬ್ಲ್ಯೂಟಿಸಿಗೆ ಮೊದಲು ಟೀಮ್ ಇಂಡಿಯಾ ತಮ್ಮ ನಡುವೆ ಆಡಿದ ಪಂದ್ಯಗಳನ್ನು ಬಿಟ್ಟರೆ, ಸ್ಪರ್ಧಾತ್ಮಕ ಎನಿಸಿಕೊಳ್ಳುವಂಥ ಪಂದ್ಯ ಆಡಲೇ ಇಲ್ಲ. ಈ ಅಕ್ಷಮ್ಯ ತಪ್ಪಿಗಾಗಿ ಭಾರತ ಈಗಷ್ಟೇ ಅಲ್ಲ ಶಾಶ್ವತವಾಗಿ ಪರಿತಪಿಸಬೇಕಾಗುತ್ತದೆ, ಯಾಕೆಂದರೆ, ಚೊಚ್ಚಲು ಡಬ್ಲ್ಯೂಟಿಸಿ ಗೆಲ್ಲವ ಮಹತ್ವವೇ ಬೇರೆಯಾಗಿರುತಿತ್ತು.
ಟೀಮ್ ಇಂಡಿಯಾದ ಸದಸ್ಯರು ಮೂರು ವಾರಗಳ ಅವಧಿಗೆ ಬಬಲ್ನಿಂದ ಹೊರಬಂದು ಮತ್ತೆ ಜುಲೈ 14 ರಂದು ಜೊತೆಗೂಡಲಿದ್ದಾರೆ. ಈ ಮೂರು ವಾರಗಲ್ಲಿ ಅವರು ಇಂಗ್ಲೆಂಡ್ನಲ್ಲಿ ಆರಾಮವಾಗಿ ಸುತ್ತಾಡಬಹುದು, ತಮ್ಮ ಸ್ನೇಹಿತರನ್ನು, ಬಂಧುಗಳನ್ನು ಭೇಟಿ ಮಾಡಬಹುದು. ಎಲ್ಲಿದ್ದೀರಾ, ಏನು ಮಾಡುತ್ತೀದ್ದೀರಾ ಅಂತ ಯಾರೂ ಅವರನ್ನು ಕೇಳುವುದಿಲ್ಲ.
ನಂಬಲರ್ಹ ಮೂಲಗಳ ಪ್ರಕಾರ ಖುದ್ದು ಕೊಹ್ಲಿಯೇ, ಅಭ್ಯಾಸದ ಪಂದ್ಯಗಳಿಗಾಗಿ ಮನವಿ ಮಾಡಿದ್ದರು. ಆದರೆ ಅದನ್ನು ಈಸಿಬಿ ತಿರಸ್ಕರಿಸಿತ್ತು.
‘ಅದು ನಮ್ಮ ಕೈಯಲಿಲ್ಲ, ಸರಣಿಗೆ ಮೊದಲು ಒಂದೆರಡು ಪ್ರಥಮ ದರ್ಜೆ ಪಂದ್ಯಗಳನ್ನಾಡುವ ಇರಾದೆ ನಮಗಿತ್ತು ಮತ್ತು ಅದಕ್ಕಾಗಿ ಈಸಿಬಿಗೆ ಮನವಿಯನ್ನೂ ಮಾಡಲಾಗಿತ್ತು. ಆದರೆ ನಮ್ಮ ಮನವಿಯನ್ನು ಯಾಕೆ ತಿರಸ್ಕರಿಸಿದ್ದು ಅನ್ನೋದು ಅರ್ಥವಾಗಲಿಲ್ಲ,’ ಎಂದು ನ್ಯೂಜಿಲೆಂಡ್ ವಿರುದ್ಧ ಡಬ್ಲ್ಯೂಟಿಸಿ ಫೈನಲ್ ಸೋತ ನಂತರ ಕೊಹ್ಲಿ ಹೇಳಿದರು.