ಇಂಗ್ಲೆಂಡ್-ಶ್ರೀಲಂಕಾ ಒಡಿಐ ಸರಣಿ: ಮಿಂಚಿದ ವೋಕ್ಸ್ ಮತ್ತು ರೂಟ್, ಇಂಗ್ಲೆಂಡ್ಗೆ 5 ವಿಕೆಟ್ ಜಯ
ಮುಳುಗುತ್ತಿದ್ದ ನಾವೆಯನ್ನು ಉಳಿಸುವ ಜವಾಬ್ದಾರಿ ಆಗ ಸೀನಿಯರ್ ಆಟಗಾರರಾದ ರೂಟ್ ಮತ್ತು ಮೊಯೀನ್ ಅಲಿ ಅವರ ಮೇಲೆ ಬಿತ್ತು, ಹೊಣೆಯರಿತು ಆಟವಾಡಿದ ಈ ಜೋಡಿಯು ಗೆಲುವಿಗೆ ಬೇಕಿದ್ದ 106 ರನ್ಗಳಲ್ಲಿ 91 ರನ್ ಕಲೆಹಾಕಿ ಟೀಮನ್ನು ಗೆಲುವಿನ ಹತ್ತಿರಕ್ಕೆ ತೆಗೆದುಕೊಂಡು ಹೋದರು
ಕ್ರಿಸ್ ವೋಕ್ಸ್ ಅವರ ಅದ್ಭುತ ಬೌಲಿಂಗ್ ಮತ್ತು ಜೋ ರೂಟ್ ಅವರ ಜವಾಬ್ದಾರಿಯುತ ಅಜೇಯ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ಮಂಗಳವಾರದಂದು ಚೆಸ್ಟರ್-ಲೀ ಸ್ಟ್ರೀಟ್ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಮೊದಲ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ 5 ವಿಕೆಟ್ಗಳ ಸುಲಭ ಗೆಲುವು ಸಾಧಿಸಿ 3ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಗೆಲುವಿಗೆ 186 ರನ್ಗಳ ಬೆನ್ನಟ್ಟಿದ ಅತಿಥೇಯರಿಗೆ ಆರಂಭ ಆಟಗಾರರಾದ ಲಿಯಾಮ್ ಲಿವಿಂಗ್ಸ್ಟೋನ್ ಮತ್ತು ಜಾನಿ ಬೇರಸ್ಟೋ 5 ಓವರ್ಗಳಲ್ಲಿ 54 ರನ್ ಬಾರಿಸಿ ತಂಡಕ್ಕೆ ಉತ್ತಮ ಆರಂಭ ದೊರಕಿಸಿದರು.
ಆದರೆ ಲಿವಿಂಗ್ಸ್ಟೋನ್ (9), ಬೇರಸ್ಟೋ (43) ಮೋರ್ಗನ್ (6) ಮತ್ತು ಸ್ಯಾಮ್ ಬಿಲ್ಲಿಂಗ್ಸ (3) ಅವರ ವಿಕೆಟ್ಗಳನ್ನು ಕೇವಲ 7 ಓವರ್ಗಳ ಅಂತರದಲ್ಲಿ ಕಳೆದುಕೊಂಡಾಗ ಶ್ರೀಲಂಕಾ ಪಂದ್ಯದಲ್ಲಿ ವಾಪಸ್ಸು ಬರುವ ಲಕ್ಷಣಗಳು ಕಾಣಿಸಿದವು. ಬೇರ್ಸ್ಟೋ ಅವರನ್ನು ಬಿನುರಾ ಫರ್ನ್ಯಾಂಡೋ ಔಟ್ ಮಾಡಿದರೆ ದುಷ್ಮಂತ ಚಮೀರ ಅವರು ಮೋರ್ಗನ್ ಮತ್ತು ಬಿಲ್ಲಿಂಗ್ಸ್ ಅವರನ್ನು ಪೆವಿಲಿಯನ್ಗೆ ವಾಪಸ್ಸು ಕಳಿಸಿದರು.
ಮುಳುಗುತ್ತಿದ್ದ ನಾವೆಯನ್ನು ಉಳಿಸುವ ಜವಾಬ್ದಾರಿ ಆಗ ಸೀನಿಯರ್ ಆಟಗಾರರಾದ ರೂಟ್ ಮತ್ತು ಮೊಯೀನ್ ಅಲಿ ಅವರ ಮೇಲೆ ಬಿತ್ತು, ಹೊಣೆಯರಿತು ಆಟವಾಡಿದ ಈ ಜೋಡಿಯು ಗೆಲುವಿಗೆ ಬೇಕಿದ್ದ 106 ರನ್ಗಳಲ್ಲಿ 91 ರನ್ ಕಲೆಹಾಕಿ ಟೀಮನ್ನು ಗೆಲುವಿನ ಹತ್ತಿರಕ್ಕೆ ತೆಗೆದುಕೊಂಡು ಹೋದರು. ಮೊಯೀನ್ ಅಲಿ 28 ರನ್ ಗಳಿಸಿ ನಿರ್ಗಮಿಸಿದರೆ ರೂಟ್ 87 ಎಸೆತಗಳಲ್ಲಿ ಅಜೇಯ 79 ರನ್ ಬಾರಿಸಿದರು.
ಇಂಗ್ಲೆಂಡ್ ಇನ್ನೂ 15.1 ಓವರ್ ಬಾಕಿಯಿರುವಂತೆಯೇ ಗೆಲುವಿನ ರೇಖೆ ದಾಟಿತು.
ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್ಗೆ ಕಳಿಸಲ್ಪಟ್ಟ ಶ್ರೀಲಂಕಾಗೆ ಇಂಗ್ಲೆಂಡ್ ವೇಗದ ಬೌಲರ್ಗಳಾದ ಕ್ರಿಸ್ ವೋಕ್ಸ್ ಮತ್ತು ಡೇವಿಡ್ ವಿಲ್ಲೀ ದುಸ್ವಪ್ನವಾಗಿ ಕಾಡಿದರು. 24 ರನ್ಗಳಾಗುವಷ್ಟರಲ್ಲಿ ಪಥುಮ ನಿಸ್ಸಾಂಕ ಮತ್ತು ಅಸಲಂಕಾ ವೇಗಿಗಳಿಗೆ ಬಲಿಯಾದರು. ವೋಕ್ಸ್ ಮತ್ತು ವಿಲ್ಲೀ ತಲಾ ಒಂದು ವಿಕೆಟ್ ಪಡೆದರು.
ನಂತರ ಬಿದ್ದ ಮೂರು ವಿಕೆಟ್ಗಳನ್ನು ವೋಕ್ಸ್ ಅವರೇ ಪಡೆದರು. ಶನಕ ಕೇವಲ 1 ರನ್ ಗಳಿಸಿ ಔಟಾದರೂ, ನಾಯಕ ಕುಸಲ ಪೆರೆರಾ ಮತ್ತು ವನಿಂದು ಹಸರಂಗ (54) 4ನೇ ವಿಕೆಟ್ಗೆ 99 ರನ್ ಸೇರಿಸಿದ್ದಾಗ ಹಸರಂಗ ಅವರನ್ನು ಔಟ್ ಮಾಡುವ ಮೂಲಕ ವೋಕ್ಸ್ ಜೊತೆಗಾರಿಕೆಯನ್ನು ಮುರಿದರು.
ಎರಡು ಓವರಗಳ ನಂತರ ದನಂಜಯ ಲಕ್ಷನ್ ಅವರ ವಿಕೆಟ್ ಪಡೆದ ನಂತರ ವೋಕ್ಸ್ ಅವರ 4-ವಿಕೆಟ್ ಸಾಧನೆ ಪೂರ್ತಿಗೊಂಡಿತು. ಅಲ್ಲಿಂದ ಪ್ರವಾಸಿ ತಂಡದ ಪತನ ಶುರುವಾಯಿತು. ಅದು ಕೊನೆಯ 7 ವಿಕೆಟ್ಗಳನ್ನು 40 ರನ್ ಸೇರಿಸುವಷ್ಟರಲ್ಲಿ ಕಳದುಕೊಂಡಿತು. 73 ರನ್ ಗಳಿಸಿದ ಪೆರೆರಾ ಅವರನ್ನು ಬಲಿ ಪಡೆದ ವಿಲ್ಲೀ 44 ರನ್ಗಳಿಗೆ 3 ವಿಕೆಟ್ ಪಡೆದರು.
ಸ್ಯಾಮ್ ಬಿಲ್ಲಿಂಗ್ಸ್ ಅವರು ನೇರ ಎಸೆತವೊಂದರ ಮೂಲಕ ಪ್ರವೀಣ್ ಜಯವಿಕ್ರಮ ಅವರನ್ನು ರನೌಟ್ ಮಾಡುವುದರೊಂದಿಗೆ ಲಂಕಾ ತಂಡದ ಇನ್ನಿಂಗ್ಸ್ 185 ರನ್ಗಳಿಗೆ ಕೊನೆಗೊಂಡಿತು.
ಸಂಕ್ಷಿಪ್ತ ಸ್ಕೋರ್ಗಳು:
ಶ್ರೀಲಂಕಾ: 185/10 (42.3 ಓವರ್) ವನಿಂದು ಹಸರಂಗ 54, ಕುಸಲ ಪೆರೆರಾ 73, ವೋಕ್ಸ್ 4/18, ವಿಲ್ಲೀ 3/44
ಇಂಗ್ಲೆಂಡ್: 189/5 (34.1 ಓವರ್) ಜಾನಿ ಬೇರ್ಸ್ಟೋ 43, ಜೋ ರೂಟ್ ಔಟಾಗದೆ 79, ಮೊಯೀನ್ ಅಲಿ 28. ದುಷ್ಮಂತ ಚಮೀರ 3/50
ಇಂಗ್ಲೆಂಡ್ಗೆ 5 ವಿಕೆಟ್ಗಳ ಜಯ
ಇದನ್ನೂ ಓದಿ: India Cricket Schedule 2021-23: ಸೀನಿಯರ್ ಅಟಗಾರರಿಗೆ ಬ್ರೇಕ್ ನೀಡುವ ಪ್ರಸ್ತಾಪ ಬಿಸಿಸಿಐ ಮುಂದಿಟ್ಟ ಕೋಚ್ ರವಿ ಶಾಸ್ತ್ರೀ