ಬಿಸಿಲ ನಾಡು ಕಲಬುರಗಿಯಲ್ಲಿ ನಾಳೆಯಿಂದ ಅಂದರೆ, ನವೆಂಬರ್ 17 ರಿಂದ ಒಂದು ವಾರಗಳ ಕಾಲ ಟೆನ್ನಿಸ್ ಹಬ್ಬ ಶುರುವಾಗಲಿದೆ. ನಾಳೆಯಿಂದ ಆರಂಭವಾಗಿರುವ ಈ ಅಂತಾರಾಷ್ಟ್ರೀಯ ಟೆನಿಸ್ ಟೂರ್ನಿ (ಐಟಿಎಫ್) ನವೆಂಬರ್ 24 ರವರೆಗೆ ನಡೆಯಲ್ಲಿದ್ದು, ಈ ಪಂದ್ಯಾವಳಿಗೆ ಕಲಬುರಗಿ ಎರಡನೇ ಬಾರಿ ಆತಿಥ್ಯವಹಿಸುತ್ತಿದೆ. ಇನ್ನು ಈ ಟೂರ್ನಿಯಲ್ಲಿ 8 ರಾಷ್ಟ್ರಗಳ 15 ವಿದೇಶಿ ಆಟಗಾರರು ಪಾಲ್ಗೊಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ರಾಜ್ಯ ಲಾನ್ಟೆನ್ನಿಸ್ ಸಂಸ್ಥೆ ಆಶ್ರಯದಲ್ಲಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಟೂರ್ನಿ ಆಯೋಜಿಸಲಾಗಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆ ಬರದಿಂದ ಸಾಗಿವೆ. ವಿವಿಧ ಇಲಾಖೆಯ ಅಧಿಕಾರಿಗಳನ್ನು ಮೇಲುಸ್ತುವಾರಿ ವಹಿಸಲಿದ್ದಾರೆ. ನಾಲ್ವರು ಕನ್ನಡಿಗರು ಸೇರಿ 75 ದೇಶಿಯ, ವಿದೇಶಿ ಪ್ರತಿಭಾನ್ವಿತ ಆಟಗಾರರು ಭಾಗವಹಿಸಲಿದ್ದಾರೆ. ಇದರಲ್ಲಿ ನಾಲ್ವರು ಕ್ರೀಡಾಪಟುಗಳು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆಯುವುದು ಸೇರಿ ಒಟ್ಟು 20 ಆಟಗಾರರ ಮುಖ್ಯ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 8 ಆಟಗಾರರು ಎರಡು ಸುತ್ತಿನ ಅರ್ಹತಾ ಪಂದ್ಯಗಳ ನಂತರ ಪ್ರವೇಶ ಪಡೆಯಲಿದ್ದಾರೆ ಎಂದು ವಿವರಿಸಿದರು.
ನವೆಂಬರ್ 18 ರಂದು ಮಧ್ಯಾಹ್ನ 3 ಗಂಟೆಗೆ ಆಟಗಾರರ ಡ್ರಾ ನಡೆಯಲಿದ್ದು, ನವೆಂಬರ್ 19 ರಂದು ಬೆಳಗ್ಗೆ 8: 30 ಕ್ಕೆ ಉದ್ಘಾಟನಾ ಪಂದ್ಯಾವಳಿ ಜರುಗಲಿದೆ. ಹಾಗೆಯೇ ನವೆಂಬರ್ 23 ರಂದು ಡಬಲ್ಸ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ನವೆಂಬರ್ 24 ರಂದು ಮಧ್ಯಾಹ್ನ 12: 30 ಕ್ಕೆ ಸಿಂಗಲ್ಸ್ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಈ ಈವೆಂಟ್ಗಳ ವಿಜೇತರಿಗೆ 25000 ಡಾಲರ್ಸ್ ಅಂದರೆ ಭಾರತೀಯ ರೂಪಾಯಿಯಲ್ಲಿ ಅಂದಾಜು 23 ಲಕ್ಷ ರೂ. ಬಹುಮಾನ ವಿತರಿಸಲಾಗುವುದು. ವಿಜೇತ ಕ್ರೀಡಾಪಟು 25 ರ್ಯಾಂಕಿಂಗ್ ಅಂಕಗಳನ್ನು ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದು, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಇನ್ನು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಆಯೋಜನಾ ಸಮಿತಿ ಸದಸ್ಯರಾದ ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್, ಅಬ್ದುಲ್ ಅಜಿಂ, ಕರ್ನಾಟಕದ ವೃತ್ತಿ ಪರ ಟೆನಿಸ್ ಆಟಗಾರ ಪೀಟರ್ ವಿಜಯಕುಮಾರ, ಕ್ರೀಡಾ ಇಲಾಖೆಯ ಸಹಾಯಕ ಆಯುಕ್ತರು ಮತ್ತಿತರರರಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:27 pm, Sat, 16 November 24