AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಷ್ಯನ್ ಗೇಮ್ಸ್​ 2026: ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ 2ನೇ ಚಿನ್ನ

2026ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕ ಲಭಿಸಿದೆ. ಕಮಲ್‌ಜೀತ್ ಮತ್ತು ಸುರುಚಿ ಇಂದರ್ ಸಿಂಗ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಹೊಸ ಏಷ್ಯನ್ ದಾಖಲೆಯೊಂದಿಗೆ ಚಿನ್ನ ಗೆದ್ದರು. ರೈಫಲ್ ಶೂಟಿಂಗ್‌ನಲ್ಲಿ ಬೆಳ್ಳಿ, ಟೇಬಲ್ ಟೆನಿಸ್ ಮತ್ತು ಸ್ಕ್ವಾಷ್‌ನಲ್ಲಿ ಪದಕ ಖಚಿತಪಡಿಸಿಕೊಳ್ಳುವ ಮೂಲಕ ಭಾರತದ ಪದಕ ಭರವಸೆ ಹೆಚ್ಚಿದೆ.

ಏಷ್ಯನ್ ಗೇಮ್ಸ್​ 2026: ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ 2ನೇ ಚಿನ್ನ
ಕಲ್ಜೀತ್ ಮತ್ತು ಸುರುಚಿ Image Credit source: PTI
ಪೃಥ್ವಿಶಂಕರ
|

Updated on:Sep 25, 2026 | 3:40 PM

Share

2026 ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕೊನೆಗೂ ತನ್ನ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿತ್ತು. ಇದೀಗ ಪಿಸ್ತೂಲ್ ಶೂಟಿಂಗ್‌ನಲ್ಲಿ ಎರಡನೇ ಚಿನ್ನದ ಪದಕ ಧಕ್ಕಿದೆ. ಕಮಲ್‌ಜೀತ್ ಮತ್ತು ಸುರುಚಿ ಇಂದರ್ ಸಿಂಗ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಏಷ್ಯನ್ ಕ್ರೀಡಾಕೂಟದಲ್ಲಿ ಪಿಸ್ತೂಲ್ ಶೂಟಿಂಗ್‌ನಲ್ಲಿ ಇದು ಭಾರತದ ಮೊದಲ ಪದಕವಾಗಿದೆ.

ಐಚಿ-ನಗೋಯಾ ಕ್ರೀಡಾಕೂಟದ ಆರನೇ ದಿನ ಎರಡು ಪದಕಗಳು ಖಚಿತವಾಗುವುದರೊಂದಿಗೆ ಪ್ರಾರಂಭವಾಯಿತು. ಮೊದಲು, ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ ಜೋಡಿ ಸೆಮಿಫೈನಲ್‌ಗೆ ಮುನ್ನಡೆದು ಪದಕವನ್ನು ಖಚಿತಪಡಿಸಿಕೊಂಡರೆ ನಂತರ, ಸ್ಕ್ವಾಷ್ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೇರುವ ಮೂಲಕ ಭಾರತದ ಜೋಡಿ ಪದಕವನ್ನು ಖಚಿತಪಡಿಸಿಕೊಂಡಿದೆ.

ದಾಖಲೆಯೊಂದಿಗೆ ಚಿನ್ನದ ಪದಕ

23 ವರ್ಷದ ಕಮಲ್‌ಜೀತ್ ಮತ್ತು 20 ವರ್ಷದ ಸುರುಚಿ ವೈಯಕ್ತಿಕ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದರಾದೂ ತಮ್ಮ ತಮ್ಮ ಸ್ಪರ್ಧೆಗಳಲ್ಲಿ ಫೈನಲ್ ತಲುಪಲು ವಿಫಲರಾದರು. ಆದಾಗ್ಯೂ ತಂಡವಾಗಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಅರ್ಹತಾ ಸುತ್ತಿನಲ್ಲಿ 587 ಅಂಕಗಳನ್ನು ಕಲೆಹಾಕಿ ಫೈನಲ್‌ ತಲುಪಿದ್ದ ಈ ಜೋಡಿ, ಅಲ್ಲಿಯೂ ತಮ್ಮ ಫಾರ್ಮ್ ಅನ್ನು ಮುಂದುವರೆಸಿ, ಮೊದಲ ಸುತ್ತಿನ ನಂತರ ಮೊದಲ ಸ್ಥಾನದಲ್ಲಿದ್ದರು. ಇತ್ತ ದಕ್ಷಿಣ ಕೊರಿಯಾ ಕೂಡ ತೀವ್ರ ಪೈಪೋಟಿ ನೀಡಿತು. ಇದರ ಹೊರತಾಗಿಯೂ, ಈ ಜೋಡಿ ಧೃತಿಗೆಡದೆ 484.6 ಅಂಕಗಳೊಂದಿಗೆ ಚಿನ್ನದ ಪದಕವನ್ನು ಗೆದ್ದರು, ಇದು ಈ ಸ್ಪರ್ಧೆಯ ಹೊಸ ಏಷ್ಯನ್ ದಾಖಲೆಯಾಗಿದೆ. ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ಬೆಳ್ಳಿ ಪದಕ ಗೆದ್ದರೆ, ಇರಾನಿನ ಜೋಡಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.

ಏಷ್ಯನ್ ಗೇಮ್ಸ್‌ ಕ್ರಿಕೆಟ್​ನಲ್ಲಿ ಭಾರತ-ಪಾಕಿಸ್ತಾನ್ ಪಂದ್ಯ ಯಾವಾಗ ನಡೆಯಲಿದೆ?

ರೈಫಲ್ 3 ಪೊಸಿಷನ್‌ನಲ್ಲಿ ಬೆಳ್ಳಿ

ಏತನ್ಮಧ್ಯೆ, ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ನೀರಜ್ ಕುಮಾರ್ ಮತ್ತು ರುದ್ರಾಕ್ಷ ಪಾಟೀಲ್ ರೈಫಲ್ 3 ಪೊಸಿಷನ್​ನಲ್ಲಿ 1762 ಅಂಕಗಳನ್ನು ಗಳಿಸಿದರಾದರೂ ಚೀನಾವನ್ನು ಮೀರಿಸುವಲ್ಲಿ ವಿಫಲರಾದರು. ಇದರ ಹೊರತಾಗಿಯೂ, ಅವರು ಬೆಳ್ಳಿ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು, ಇದರಿಂದಾಗಿ ಭಾರತಕ್ಕೆ ರೈಫಲ್ ಶೂಟಿಂಗ್‌ನಲ್ಲಿ ಮತ್ತೊಂದು ಪದಕ ದೊರೆಯಿತು.

ಇದರ ಜೊತೆಗೆ ಐಶ್ವರ್ಯಾ ಮತ್ತು ನೀರಜ್ ವೈಯಕ್ತಿಕ ಸ್ಪರ್ಧೆಯ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಐಶ್ವರ್ಯಾ 589 ಅಂಕಗಳನ್ನು ಕಲೆಹಾಕಿದರೆ, ನೀರಜ್ 588 ಅಂಕಗಳನ್ನು ಸಂಪಾಧಿಸಿದ್ದಾರೆ. ಭಾರತವು ಈಗಾಗಲೇ ರೈಫಲ್ ಶೂಟಿಂಗ್‌ನಲ್ಲಿ ಹಲವಾರು ಪದಕಗಳನ್ನು ಗೆದ್ದಿದೆಯಾದರೂ ಚಿನ್ನದ ಪದಕದ ಬರ ಈಗಲೂ ಮುಂದುವರೆದಿದೆ. ಆದ್ದರಿಂದ, ಈಗ ರೈಫಲ್ ತ್ರೀ-ಪೋಸಿಷನ್ ಫೈನಲ್‌ನಲ್ಲಿ ಐಶ್ವರ್ಯಾ ಮತ್ತು ನೀರಜ್ ಮೇಲೆ ಭರವಸೆ ಇಡಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:56 pm, Fri, 25 September 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More