ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ರಾಜ್ಯದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ

|

Updated on: Aug 04, 2024 | 4:55 PM

ಗೃಹ ಕಚೇರಿ ಕೃಷ್ಣಾದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯನವರು ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್ ಹಾಗೂ ಕಾಮನ್‍ವೆಲ್ತ್ ಗೇಮ್ಸ್​ಗಳಲ್ಲಿ ಪದಕ ಗೆದ್ದಿದ್ದ ರಾಜ್ಯದ 12 ಕ್ರೀಡಾಪಟುಗಳಿಗೆ ಆಫರ್ ಲೆಟರ್ ನೀಡಿದರು.

ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ರಾಜ್ಯದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ
ರಾಜ್ಯ ಕ್ರೀಡಾ ಸಾಧಕರೊಂದಿಗೆ ಸಿಎಂ ಸಿದ್ದರಾಮಯ್ಯ
Follow us on

ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ಹೆಮ್ಮೆ ತಂದ ರಾಜ್ಯದ ಕ್ರೀಡಾಪಟುಗಳಿಗೆ ಕರ್ನಾಟಕ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಅದರಂತೆ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯನವರು ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್ ಹಾಗೂ ಕಾಮನ್‍ವೆಲ್ತ್ ಗೇಮ್ಸ್​ಗಳಲ್ಲಿ ಪದಕ ಗೆದ್ದಿದ್ದ ರಾಜ್ಯದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದ ಆಫರ್ ಲೆಟರ್ ನೀಡಿದ್ದಾರೆ.

12 ಜನರಿಗೆ ಆಫರ್ ಲೆಟರ್

ಕ್ರೀಡಾಪಟುಗಳಿಗೆ ಆಫರ್ ಲೆಟರ್ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ವಿವಿಧ ಕ್ರೀಡಾಕೂಟಗಳಲ್ಲಿ ಪದಕ‌ ಪಡೆದವರಿಗೆ ರಾಜ್ಯ ಸರ್ಕಾರ ನೆರವಾಗಲಿದೆ. ಅದರಂತೆ ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರಿ‌ ಉದ್ಯೋಗ ನೀಡಲು‌ ತೀರ್ಮಾನಿಸಿದ್ದೇವೆ. ಸುಮಾರು‌ 12 ಜನರಿಗೆ ಅವಕಾಶ ಪತ್ರ ನೇರ ನೇಮಕಾತಿಗೆ ನೀಡುತ್ತಿದ್ದೇವೆ. 2016-17 ಒಲಂಪಿಕ್ಸ್ ಅಸೋಸಿಯೇಷನ್ ಏರ್ಪಾಡು ಮಾಡಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೆ. ಆ ವೇಳೆ ರಾಜ್ಯದ ಕ್ರೀಡಾ ಸಾಧಕರಿಗೆ, ಪದಕ ಪಡೆದವರಿಗೆ ಸರ್ಕಾರದಲ್ಲಿ‌ ಆದ್ಯತೆ ಮೇಲೆ ಕೆಲಸ ನೀಡುವುದಾಗಿ ಘೋಷಣೆ ಮಾಡಿದ್ದೆ.

ಮೀಸಲಾತಿ ಹೆಚ್ಚಿಸಿದ್ದೇನೆ

ಆದರೆ ನಂತರ ಬಂದ ಸರ್ಕಾರ ಅದನ್ನ ಜಾರಿ ಮಾಡುವ ಪ್ರಯತ್ನ ಮಾಡಲಿಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದ್ಮೇಲೆ ಈಗ ಜಾರಿ ಮಾಡಿದ್ದೇನೆ. ಈ ಹಿಂದಿನ ಬೊಮ್ಮಾಯಿ‌ ಸರ್ಕಾರ ಕ್ರೀಡಾ ಸಾಧಕರಿಗೆ ಪೊಲೀಸ್ ಇಲಾಖೆಯಲ್ಲಿ ಶೇ. 2 ರಷ್ಟು ಮೀಸಲಾತಿ ನೀಡಿತ್ತು. ನಾನು ಬಂದ್ಮೇಲೆ ಪೋಲಿಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಶೇ. 3 ರಷ್ಟು ಮೀಸಲಾತಿ ಹೆಚ್ಚಿಸಿದ್ದೇನೆ. ಅಲ್ಲದೆ ಪದವಿ ಪಡೆದವರಿಗೆ ಗ್ರೂಪ್-ಸಿ ಉದ್ಯೋಗ ನೀಡಲು‌ ತೀರ್ಮಾನ ಮಾಡಿದ್ದೇವೆ.

45 ವರ್ಷಗಳ ವಯೋಮಿತಿ

ಅದರಂತೆ 12 ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗ ನೀಡುತ್ತಿದ್ದೇವೆ. ಇದರಲ್ಲಿ ಒಬ್ಬರಿಗೆ ಮಾತ್ರ ಗ್ರೂಪ್ ಎ ಉದ್ಯೋಗ ನೀಡಲಾಗುತ್ತಿದ್ದು, ಬಾಕಿ ಉಳಿದವರಿಗೆ ಗ್ರೂಪ್- ಬಿ ಹುದ್ದೆ ನೀಡುತ್ತಿದ್ದೇವೆ. ಹಾಗೆಯೇ ಉದ್ಯೋಗಕ್ಕೆ ಸೇರಿಕೊಳ್ಳಲು 45 ವರ್ಷಗಳ ವಯೋಮಿತಿಯನ್ನ ನಿಗದಿಪಡಿಸಿದ್ದೇವೆ. ಕ್ರೀಡೆಗೆ ಹೆಚ್ಚು ಒತ್ತು ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡ್ತಿದೆ. ಕರ್ನಾಟಕದವರು ರಾಷ್ಟ್ರೀಯ ಟೀಂನ ಮುಂದಾಳತ್ವ ವಹಿಸೋದು ಸಂತೋಷದ ವಿಷಯ. ರಾಷ್ಟ್ರಕ್ಕೆ ಗೌರವ ತಂದು ಕೊಡುವ ಕೆಲಸವನ್ನು ಕ್ರೀಡಾಪಟುಗಳು ಮಾಡ್ಬೇಕು ಎಂದಿರುವ ಸಿದ್ದರಾಮಯ್ಯ, ಉದ್ಯೋಗ ಪತ್ರ ಪಡೆದ, ಪದಕ‌ ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.

ಯಾರಿಗೆ ಯಾವ ಹುದ್ದೆ ಸಿಕ್ಕಿದೆ ಎಂಬುದನ್ನು ನೋಡುವುದಾದರೆ..

  • ಗಿರೀಶ್ ಹೆಚ್.ಎನ್ – ಕ್ಲಾಸ್ ಒನ್ ಆಫೀಸರ್ ಹುದ್ದೆ
  • ದಿವ್ಯಾ.ಟಿ.ಎಸ್- ಗ್ರೂಪ್ ಬಿ ಹುದ್ದೆ
  • ಉಷಾರಾಣಿ ಎನ್- ಗ್ರೂಪ್ ಬಿ ಹುದ್ದೆ
  • ಸುಷ್ಮಿತ ಪವಾರ್ ಓ- ಗ್ರೂಪ್ ಬಿ ಹುದ್ದೆ
  • ನಿಕ್ಕಿನ್ ತಿಮ್ಮಯ್ಯ ಸಿ.ಎ- ಗ್ರೂಪ್ ಬಿ
  • ಎಸ್.ವಿ.ಸುನೀಲ್ -ಗ್ರೂಪ್ ಬಿ ಹುದ್ದೆ
  • ಕಿಶನ್ ಗಂಗೊಳ್ಳಿ- ಗ್ರೂಪ್ ಬಿ ಹುದ್ದೆ
  • ರಾಘವೇಂದ್ರ- ಗ್ರೂಪ್ ಬಿ ಹುದ್ದೆ
  • ರಾಧಾ ವಿ- ಗ್ರೂಪ್ ಬಿ ಹುದ್ದೆ
  • ಶರತ್ ಎಂ.ಎಸ್- ಗ್ರೂಪ್ ಬಿ ಹುದ್ದೆ
  • ಗುರುರಾಜ – ಗ್ರೂಪ್ ಬಿ ಹುದ್ದೆ
  • ಮಲಪ್ರಭಾ ಯಲ್ಲಪ್ಪ ಜಾಧವ- ಗ್ರೂಪ್ ಬಿ ಹುದ್ದೆ

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:31 pm, Sun, 4 August 24