ಪ್ರತಿ ದಶಕದಲ್ಲಿ ಕ್ರಿಕೆಟ್ ಶ್ರೇಷ್ಠ ಆಟಗಾರನ್ನು ಸೃಷ್ಟಿಸುತ್ತದೆ. ಈ ದಶಕದ ಹಲವಾರು ಗ್ರೇಟ್ ಬ್ಯಾಟ್ಸ್ಮನ್ ಮತ್ತು ಬೌಲರ್ಗಳನ್ನು ನಾವೀಗ ನೋಡುತ್ತಿದ್ದೇವೆ. ಲೆಜೆಂಡ್ಗಳು ಕ್ರಿಕೆಟ್ ಇತಿಹಾಸದಲ್ಲಿ ಶಾಶ್ವತ ಹೆಸರನ್ನು, ಸ್ಥಾನವನ್ನು ಗಳಿಸಿಕೊಂಡುಬಿಡುತ್ತಾರೆ. ನಾವೀಗ ಗಮನಿಸುತ್ತಿರುವ ಮಹಾನ್ ಆಟಗಾರರು ಸಹ ಮುಂದೆ ಇದೇ ಸಾಲಿಗೆ ಸೇರುತ್ತಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಈಗ ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್ ಅಥವಾ ಮೂವರು ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲ್ಪಡುತ್ತಾರೆ. ಹಲವಾರು ಮಾಜಿ ಆಟಗಾರರು, ಕಾಮೆಂಟೇಟರ್ಗಳು ಕೊಹ್ಲಿಯನ್ನು ಸರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು ಅಂತ ಹೇಳುತ್ತಾರೆ. ಕೊಹ್ಲಿ ಶ್ರೇಷ್ಠ ಎನ್ನುವುದನ್ನು ಅಂಗೀಕರಿಸಲು ಅವರ ಅಂಕಿ-ಅಂಶಗಳು ನೆರವಾಗುತ್ತವೆ. ಅವುಗಳನ್ನು ಒಂದು ಉಸುರಿನಲ್ಲಿ ಓದುವುದು ಖಂಡಿತವಾಗಿಯೂ ಸಾಧ್ಯವಿಲ್ಲ.
ಇದುವರೆಗೆ ಆಡಿರುವ 91 ಟೆಸ್ಟ್ಗಳಲ್ಲಿ ಅವರು 52.4 ಸರಾಸರಿಯಲ್ಲಿ 7,490 ರನ್ ಗಳಿಸಿದ್ದಾರೆ 245 ಒಡಿಐ ಪಂದ್ಯಗಳಲ್ಲಿ ಅಭೂತಪೂರ್ವ 59.07 ಸರಾಸರಿಯೊಂದಿಗೆ 12,169 ರನ್ ಗಳಿಸಿದ್ದಾರೆ. ಟಿ20 ಆವೃತ್ತಿಯಲ್ಲೂ ಅವರ ಸರಾಸರಿ 50ಕ್ಕಿಂತ (52.65) ಜಾಸ್ತಿಯಿದೆ. ಈ ಫಾರ್ಮಾಟ್ನಲ್ಲಿ ಆಡಿರುವ 90 ಪಂದ್ಯಗಳಲ್ಲಿ ಅವರು 3,159 ರನ್ ಗಳಿಸಿದ್ದಾರೆ. 32 ವರ್ಷ ವಯಸ್ಸಿನ ಕೊಹ್ಲಿ ಇದುವರೆಗೆ 70 ಅಂತರರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ.
ಒಬ್ಬ ಬ್ಯಾಟ್ಸ್ಮನ್ ಈ ಬಗೆಯ ದಾಖಲೆಗಳನ್ನು ಹೊಂದಿದ್ದರೆ, ಮಾಜಿ ಮತ್ತು ಹಾಲಿ ಆಟಗಾರರು ರಚಿಸುವ ವಿಶ್ವದ ಅತ್ಯುತ್ತಮ ತಂಡದಲ್ಲಿ ಸ್ಥಾನವನ್ನು ತಪ್ಪದೆ ಗಿಟ್ಟಿಸುತ್ತಾರೆ. ಹಿಂದೆ, ಮಾಜಿ ಆಟಗಾರರು ರಚಿಸಿದ ಟೀಮಿನಲ್ಲಿ ಅವರು ಸ್ಥಾನ ಪಡೆದ ಹಾಗೆಯೇ, ಆಸ್ಟ್ರೇಲಿಯಾದ ಮತ್ತು ವಿಶ್ವದ ಹಾಲಿ ಶ್ರೇಷ್ಠ ಬೌಲರ್ ಪ್ಯಾಟ್ ಕಮ್ಮಿನ್ಸ್ ರಚಿಸಿರುವ ಅತ್ಯುತ್ತಮ ಟೆಸ್ಟ್ ಇಲೆವೆನ್ನಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ.
ಅರ್ಧಕ್ಕೆ ಸ್ಥಗಿತಗೊಂಡ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಿ ಸ್ವದೇಶಕ್ಕೆ ಮರಳಿ ಸಿಡ್ನಿಯಲ್ಲಿ ಕ್ವಾರಂಟೈನಲ್ಲಿರುವ ಕಮ್ಮಿನ್ಸ್ ಯೂಟ್ಯೂಬ್ನಲ್ಲು ಸದಾ ಸಕ್ರಿಯರಾಗಿರುತ್ತಾರೆ. ಮಂಗಳವಾರದಂದು ಅವರು ತಮ್ಮ ಅಭಿಮಾನಿಗಳೊಂದಿಗೆ ನಡೆಸಿರುವ ಪ್ರಶ್ನೋತ್ತರ ಕಾರ್ಯಕ್ರಮದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
ತಮ್ಮ ಟೀಮಿಗೆ ಅವರು ಆಯ್ಕೆ ಮಾಡುವ ಮೂರು ಪ್ರಮುಖ ಬ್ಯಾಟ್ಸ್ಮನ್ಗಳು ಯಾರೆಂದು ಅಭಿಮಾನಿಯೊಬ್ಬ ಕೇಳಿರುವ ಪ್ರಶ್ನೆಗೆ ಕಮ್ಮಿನ್ಸ್ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ತಮ್ಮ ಜೊತೆ ಆಟಗಾರ ಸ್ಟೀವ್ ಸ್ಮಿತ್ ಮತ್ತು ಕೊಹ್ಲಿ ಅವರ ಹೆಸರುಗಳನ್ನು ಹೇಳಿದ್ದಾರೆ.
‘ನನ್ನ ತಂಡದಲ್ಲಿ ಕೇನ್ ವಿಲಿಯಮ್ಸನ್ ಮೂರನೇ ಕ್ರಮಾಂಕದಲ್ಲಿ, ಸ್ಮಿತ್ 4 ಮತ್ತು ಕೊಹ್ಲಿ 5 ನೇ ಕ್ರಮಾಂಕದಲ್ಲಿ ಆಡುತ್ತಾರೆ. ಈ ಆರ್ಡರ್ ಹಿಂದೆ ಮುಂದೆ ಆಗಬಹುದು, ಆದರೆ ಈ ಮೂರು ಜನ ಮಾತ್ರ ನನ್ನ ತಂಡದಲ್ಲಿರುತ್ತಾರೆ.’ ಎಂದು ಕಮ್ಮಿನ್ಸ್ ಹೇಳಿದ್ದಾರೆ.
ಕೊಲ್ಕತಾ ನೈಟ್ ರೈಡರ್ಸ್ ಪರ ಆಡುವ ಕಮ್ಮಿನ್ಸ್, ಐಪಿಎಲ್ 2021ರಲ್ಲಿ ತಮ್ಮ ಜ್ ಟೀಮಿಗೆ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದರು. ಟೂರ್ನಿ ಸ್ಥಗಿತಗೊಳ್ಳುವ ಮೊದಲು ಆಡಿದ 7 ಪಂದ್ಯಗಳಿಂದ ಅವರು 9 ವಿಕೆಟ್ ಪಡೆದರು. ಪಾಯಿಂಟ್ಸ್ ಟೇಬಲ್ನಲ್ಲಿ ಕೆಕೆಆರ್ 7ನೇ ಸ್ಥಾನದಲ್ಲಿತ್ತು.
ಕೊಹ್ಲಿ ಸಹ ಕೊನೆಯ ಬಾರಿ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿದ್ದು ಇದೇ ಐಪಿಎಲ್ ಟೂರ್ನಿಯಲ್ಲಿ. ಅವರು ಆಡಿದ 7 ಪಂದಯಗಳಲ್ಲಿ 198 ರನ್ ಗಳಿಸಿದ್ದರು. ಪಾಯಿಂಟ್ಸ್ ಟೇಬಲ್ನಲ್ಲಿ ಕೊಹ್ಲಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂರನೇ ಸ್ಥಾನದಲ್ಲಿತ್ತು.
ಮುಂದಿನ ತಿಂಗಳು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಡಲು ಟೀಮ್ ಇಂಡಿಯಾದೊಂದಿಗೆ ಕೊಹ್ಲಿ ಇಂಗ್ಲೆಂಡ್ಗೆ ಪ್ರಯಾಣ ಬೆಳಸಲಿದ್ದಾರೆ. ಅದಾದ ನಂತರ ಭಾರತ ಇಂಗ್ಲೆಂಡ್ ಇರುದ್ಧ 5-ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
ಇದನ್ನೂ ಓದಿ: IPL 2021: ಐಪಿಎಲ್ ಮುಂದುವರೆದಿದ್ದರೂ ನಾನು ಕಣಕ್ಕಿಳಿಯುತ್ತಿರಲಿಲ್ಲ; ಯಜ್ವೇಂದ್ರ ಚಹಲ್ ಈ ನಿರ್ಧಾರಕ್ಕೆ ಕಾರಣವೇನು?