ಭಾರತ ಕಂಡಿರುವ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಹೈದರಾಬಾದಿನ ವಿವಿಎಸ್ ಲಕ್ಷ್ಮಣ್ ಸಹ ಒಬ್ಬರು. ನಿಸ್ಸಂದೇಹವಾಗಿ ಅವರು ಬೇರೆ ಆಟಗಾರರಿಗಿಂತ ಭಿನ್ನರಾಗಿದ್ದರು. ಅತ್ಯಂತ ಕಲಾತ್ಮಕವಾಗಿ ಬ್ಯಾಟ್ ಮಾಡುತ್ತಿದ್ದ ಅವರನ್ನು ಆಸ್ಟ್ರೇಲಿಯ ಮಾಜಿ ನಾಯಕ ಮತ್ತು ಈಗ ಟಿವಿ ವೀಕ್ಷಕ ವಿವರಣೆಕಾರರಾಗಿರುವ ಇಯಾನ್ ಚಾಪೆಲ್, ‘ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್’ ಎಂದು ಕರೆಯುತ್ತಿದ್ದರು.
ಅತ್ಯಂತ ಸಭ್ಯ ಮತ್ತು ವಿವಾದಗಳಿಂದ ಗಾವುದ ದೂರವಿರುತ್ತಿದ್ದ ಲಕ್ಷ್ಮಣ್ ಯಾರನ್ನೂ ಸುಮ್ಮನೆ ಹೊಗಳಿದವರಲ್ಲ. ಹಾಗೆಯೇ ಯಾರ ಮರ್ಜಿಗೂ ಬಿದ್ದವರಲ್ಲ. ತಾವಾಡುತ್ತಿದ್ದ ದಿನಗಳಲ್ಲಿ ತಮಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಕೊಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಅವರು ಆಸ್ಟ್ರೇಲಿಯ ವಿರುದ್ಧ ಬಾರಿಸಿದ 281 ರನ್ಗಳ ಇನ್ನಿಂಗ್ಸ್ ಅನ್ನು ಕ್ರಿಕೆಟ್ ಇತಿಹಾಸದ ಸರ್ವಶ್ರೇಷ್ಠ ಇನ್ನಿಂಗ್ಸ್ಗಳಲ್ಲೊಂದು ಅಂತ ಪರಿಗಣಿಸಲಾಗಿದೆ. ಈಗ ಅವರು ಪರಿಣಿತ ಕ್ರಿಕೆಟ್ ಕಾಮೆಂಟೇಟರ್ ಅಗಿ, ಸನ್ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿ ತಮ್ಮನ್ನು ತಾವು ಬ್ಯುಸಿಯಾಗಿಟ್ಟುಕೊಂಡಿದ್ದಾರೆ.
ಇಂಥ ಲಕ್ಷ್ಮಣ್, ಕ್ರೀಡಾ ಚಾನೆಲೊಂದರಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ, ಬುಧವಾರದಂದು ಒಂದು ದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್ಗಳಲ್ಲಿ 12,000 ಪೂರೈಸಿದ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಮುಕ್ತವಾಗಿ ಪ್ರಶಂಸಿದ್ದಾರೆ.
‘‘ಅವರ ಸಾಧನೆ ಅಬೂತಪೂರ್ವ. 12-ವರ್ಷಗಳ ಕ್ರಿಕೆಟ್ ಬದುಕಿನ ಯಾವುದಾದರೂ ಒಂದು ಸಂದರ್ಭದಲ್ಲಿ ಅವರು ದಣಿದುಬಿಡುತ್ತಾರೆ ಅಂತ ನಾನು ಭಾವಿಸಿದ್ದೆ. ಆದರೆ ಕೊಹ್ಲಿಗೆ ದಣಿವೆನ್ನುವುದೇ ಗೊತ್ತಿದ್ದಂತಿಲ್ಲ. ಪ್ರತಿ ಸರಣಿ, ಪ್ರತಿ ಪಂದ್ಯ, ಅಷ್ಟ್ಯಾಕೆ ಮೈದಾನಗಳಲ್ಲಿ ಪ್ರತಿ ದಿನ ಅವರಲ್ಲಿ ಕಾಣಿಸುವ ತೀವ್ರತೆ, ಬದ್ಧತೆ ದಂಗುಬಡಿಸುತ್ತದೆ. ಅವರ ಕ್ರಿಕೆಟ್ ಬದುಕಿನಲ್ಲಿದ್ದ ಅತಿ ದೊಡ್ಡ ಸವಾಲೆಂದರೆ ಅದೇ, ದಣಿವುಗೊಳ್ಳದಿರಿವುದು. ಪ್ರತಿ ಪಂದ್ಯದಲ್ಲಿ ತಮಗಿರುವ ರನ್ ಹಸಿವನ್ನು ಪ್ರದರ್ಶಿಸಿ ಅವುಗಳನ್ನು ಸರಾಗವಾಗಿ ಗಳಿಸುತ್ತಾ ಹೋಗುವುದು ಅವರಿಗೆ ಸಿದ್ಧಿಸಿದೆ. ಬ್ಯಾಟಿಂಗ್ ಮಾಡುತ್ತಿರಲಿ ಅಥವಾ ಫಿಲ್ಡಿಂಗ್, ಅವರ ಸಾಮರ್ಥ್ಯ ಒಂದಿಷ್ಟೂ ಕಡಿಮೆಯಾಗಿಲ್ಲ,’’ ಎಂದು ಲಕ್ಷ್ಮಣ್ ಹೇಳಿದ್ದಾರೆ.
ಕೊಹ್ಲಿಯಲ್ಲಿ ಅಡಗಿರುವ ಹಲವಾರು ಆಯಾಮಗಳು ಅವರನ್ನು ಮಾಡರ್ನ್ ಕ್ರಿಕೆಟ್ನ ಶ್ರೇಷ್ಠರನ್ನಾಗಿಸಿವೆಯೆಂದು ಲಕ್ಷ್ಮಣ್ ಹೇಳುತ್ತಾರೆ. ಎದುರಾಳಿ ತಂಡ ನೀಡುವ ಟಾರ್ಗೆಟ್ ಚೇಸ್ ಮಾಡುವ ಕಲೆಯಲ್ಲಿ ಕೊಹ್ಲಿಯನ್ನು ಯಾರೂ ಹಿಂದಿಕ್ಕಲಾರರು ಎಂದು ಹೇಳುವ ಲಕ್ಷ್ಮಣ್, ಅತ್ಯಂತ ಕಠಿಣವೆನಿಸುತ್ತಿದ್ದ ಟಾರ್ಗೆಟ್ಗಳನ್ನೂ ಅವರು ಚೇಸ್ ಮಾಡಿ ಭಾರತವನ್ನು ಗೆಲ್ಲಿಸಿದ್ದಾರೆ ಎಂದಿದ್ದಾರೆ.
‘‘ಒತ್ತಡದ ಸಂದರ್ಭಗಳಲ್ಲಿ ಕೊಹ್ಲಿ ಹೇಗೆ ಬ್ಯಾಟ್ ಮಾಡಿದ್ದಾರೆ ಎನ್ನುವುದು ಅವರ ದಾಖಲೆಗಳನ್ನು ನೋಡಿದರೆ ಗೊತ್ತಾಗುತ್ತದೆ. ಚೇಸ್ ಮಾಡುವಾಗ ಎಷ್ಟು ಶತಕಗಳನ್ನು ಅವರು ಬಾರಿಸಿದ್ದಾರೆ ಅನ್ನುವುದನ್ನು ಗಮನಿಸಿ. ಅಂಥ ಸಂದರ್ಭಗಳನ್ನು ಕೊಹ್ಲಿ ಆನಂದಿಸುತ್ತಾರೆ ಮತ್ತು ಅವುಗಳನ್ನು ಸವಾಲಾಗಿ ಸ್ವೀಕರಿಸುತ್ತಾರೆ. ತಮ್ಮ ಮೇಲಿರುವ ಜವಾಬ್ದಾರಿಯನ್ನೂ ಸಹ ಅವರು ಅಷ್ಟೇ ಸಮರ್ಥವಾಗಿ ನಿಭಾಯಿಸುತ್ತಾರೆ’’ ಎಂದು ಲಕ್ಷ್ಮಣ್ ಹೇಳಿದ್ದಾರೆ.