ಅಳುತ್ತಾ ಕೂತಿದ್ದ ಲಿಯೋನೆಲ್ ಮೆಸ್ಸಿಗೆ ಆಮೇಲೆ ಖುಷಿಯೋ ಖುಷಿ
Argentina vs Colombia: ಕೋಪಾ ಅಮೆರಿಕ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ವಿರುದ್ಧ ಅರ್ಜೆಂಟೀನಾ 1-0 ಅಂತರದಿಂದ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡವೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮುನ್ನ ಉರುಗ್ವೆ ತಂಡವು 15 ಬಾರಿ ಚಾಂಪಿಯನ್ ಆಗಿತ್ತು. ಇದೀಗ 16ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಮೂಲಕ ಅರ್ಜೆಂಟೀನಾ ಹೊಸ ಇತಿಹಾಸ ನಿರ್ಮಿಸಿದೆ.
ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೊಲಂಬಿಯಾ ತಂಡವನ್ನು ಮಣಿಸಿ ಅರ್ಜೆಂಟೀನಾ 16ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ ಫಿಫಾ ವಿಶ್ವಕಪ್ ಬಳಿಕ ಕೋಪಾ ಅಮೆರಿಕ ಟ್ರೋಫಿಯನ್ನು ಎತ್ತಿ ಹಿಡಿದ ವಿಶೇಷ ಸಾಧಕರ ಪಟ್ಟಿಗೆ ಲಿಯೋನೆಲ್ ಮೆಸ್ಸಿ ಕೂಡ ಸೇರ್ಪಡೆಯಾಗಿದ್ದಾರೆ. ಆದರೆ ಇದಕ್ಕೂ ಮುನ್ನ ಮೆಸ್ಸಿ ಡಗೌಟ್ನಲ್ಲಿ ಅಳುತ್ತಾ ಕೂತಿದ್ದರು ಎಂಬುದು ವಿಶೇಷ.
ಪಂದ್ಯದ 36 ನೇ ನಿಮಿಷದಲ್ಲಿ ಸ್ಯಾಂಟಿಯಾಗೊ ಅರಿಯಸ್ ಅವರೊಂದಿಗೆ ಘರ್ಷಣೆಯ ನಂತರ ಲಿಯೋನೆಲ್ ಮೆಸ್ಸಿ ನೋವಿನಿಂದ ಬಳಲುತ್ತಿದ್ದರು. ಇದಾಗ್ಯೂ ಅವರು ಮೈದಾನದಲ್ಲಿ ಮುಂದುವರೆದಿದ್ದರು. ಆದರೆ 66ನೇ ನಿಮಿಷದಲ್ಲಿ ಪಾದದ ನೋವಿನ ಕಾರಣ ಅವರು ಮೈದಾನ ತೊರೆಯಬೇಕಾಯಿತು. ಹೀಗೆ ಮೈದಾನದಿಂದ ಹೊರಗುಳಿದ ಮೆಸ್ಸಿ ಅಳುತ್ತಾ ಡಗೌಟ್ನಲ್ಲಿ ಕುಳಿತಿದ್ದರು. ಅರ್ಜೆಂಟೀನಾ ತಂಡಕ್ಕೆ ಕಪ್ ಗೆಲ್ಲಿಸಿಕೊಡಬೇಕೆಂಬ ನಿರೀಕ್ಷೆಯಲ್ಲಿದ್ದ ಮೆಸ್ಸಿ ಅನಿರೀಕ್ಷಿತವಾಗಿ ಮೈದಾನದಿಂದ ಹೊರ ನಡೆಯಬೇಕಾಯಿತು.
ಈ ನೋವಿನಲ್ಲೇ ಅಳುತ್ತಾ ಕೂತಿದ್ದ ಮೆಸ್ಸಿ ಅಂತಿಮವಾಗಿ ಸಂಭ್ರಮಿಸಿದ್ದು ವಿಶೇಷ. ಅಂದರೆ ಅಂತಿಮ ಕ್ಷಣದಲ್ಲಿ ಅರ್ಜೆಂಟೀನಾ ತಂಡವು ಕೊಲಂಬಿಯಾ ತಂಡವನ್ನು 1-0 ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಗೆಲುವಿನೊಂದಿಗೆ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಬ್ಯಾಕ್ ಟು ಬ್ಯಾಕ್ ಕೋಪಾ ಅಮೆರಿಕ ಟ್ರೋಫಿ ಗೆದ್ದ ವಿಶೇಷ ಸಾಧನೆ ಮಾಡಿದರು. ಇದೀಗ ಅಳುತ್ತಾ ಕೂತಿದ್ದ ಮೆಸ್ಸಿ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.