ಹತ್ತು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಮತ್ತೊಮ್ಮೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪ್ರಶಸ್ತಿಯ ಸನಿಹಕ್ಕೆ ಬಂದಿದ್ದಾರೆ. ಮೆಲ್ಬೋರ್ನ್ ರಾಡ್ ಲೇವರ್ ಅರೆನಾ ಕೋರ್ಟ್ನಲ್ಲಿ ಮಂಗಳವಾರ (ಜ.21) ನಡೆದ ಕ್ವಾರ್ಟರ್ ಫೈನಲ್ನಲ್ಲಿ ಯಂಗ್ ಸೆನ್ಸೇಷನ್ ಕಾರ್ಲೊಸ್ ಅಲ್ಕರಾಝ್ ಅವರನ್ನು ಸೋಲಿಸಿ ಜೊಕೊವಿಚ್ ಸೆಮಿಫೈನಲ್ಗೇರಿದ್ದಾರೆ.
ಓಲ್ಡ್ ಅ್ಯಂಡ್ ಯಂಗ್ ಫೈಟ್ ಎಂದೇ ಬಿಂಬಿತವಾಗಿದ್ದ ಈ ಪಂದ್ಯದಲ್ಲಿ 37 ವರ್ಷದ ನೊವಾಕ್ ಜೊಕೊವಿಚ್ ಪಾರುಪತ್ಯ ಮೆರದಿದ್ದು ವಿಶೇಷ. ಈ ಪಂದ್ಯದ ಮೊದಲ ಸೆಟ್ನಲ್ಲೇ ಉತ್ತಮ ಫೈಪೋಟಿ ಕಂಡು ಬಂತು. ಅದರಲ್ಲೂ 21 ವರ್ಷದ ಕಾರ್ಲೊಸ್ ಅಲ್ಕರಾಝ್ ತಮ್ಮ ಪಾದರಸದಂತಹ ಚಲನೆಯೊಂದಿಗೆ ನೊವಾಕ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಪರಿಣಾಮ ಮೊದಲ ಸೆಟ್ ಅನ್ನು ಅಲ್ಕರಾಝ್ 6-4 ಅಂತರದಿಂದ ಗೆದ್ದುಕೊಂಂಡರು.
ಆದರೆ ದ್ವಿತೀಯ ಸೆಟ್ನಲ್ಲಿ ಸರ್ವ್ಗಳ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ ನೊವಾಕ್ ಜೊಕೊವಿಚ್ ಯುವ ಆಟಗಾರನ ತಂತ್ರಗಳಿಗೆ ಪ್ರತಿತಂತ್ರ ರೂಪಿಸುವಲ್ಲಿ ಯಶಸ್ವಿಯಾದರು. ಅದರಲ್ಲೂ ಅಲ್ಕರಾಝ್ ಅವರನ್ನು ಇಡೀ ಕೋರ್ಟ್ನಲ್ಲಿ ಓಡಾಡಿಸುವ ಮೂಲಕ ಜೊಕೊವಿಚ್ ದ್ವಿತೀಯ ಸೆಟ್ ಅನ್ನು 6-4 ಅಂತರದಿಂದ ಗೆದ್ದುಕೊಂಡರು.
ದ್ವಿತೀಯ ಸೆಟ್ನಲ್ಲೇ ಒತ್ತಡಕ್ಕೆ ಒಳಗಾಗಿದ್ದ ಅಲ್ಕರಾಝ್ ಅವರಿಂದ ಮೂರನೇ ಸೆಟ್ನಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಮೂರನೇ ಸೆಟ್ ಅನ್ನು ಕೂಡ ಜೊಕೊವಿವ್ 6-3 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು.
ಕಾರ್ಲೊಸ್ ಅಲ್ಕರಾಝ್ ಪಾಲಿಗೆ ನಿರ್ಣಾಯಕವಾಗಿದ್ದ ನಾಲ್ಕನೇ ಸೆಟ್ನಲ್ಲಿ ತನ್ನ ಅನುಭವವನ್ನು ಧಾರೆಯೆರೆದ ನೊವಾಕ್ ಜೊಕೊವಿಚ್ ತಾನೇ ಟೆನಿಸ್ ಅಂಗಳದ ಕಿಂಗ್ ಎಂಬುದನ್ನು ನಿರೂಪಿಸಿದರು. ಅಲ್ಲದೆ ಈ ಸೆಟ್ ಅನ್ನು 6-4 ಅಂತರದಿಂದ ಗೆದ್ದುಕೊಂಡರು. ಈ ಮೂಲಕ 37 ವರ್ಷದ ನೊವಾಕ್ ಜೊಕೊವಿಚ್ 3-1 ಅಂತರದಿಂದ ಕ್ವಾರ್ಟರ್ ಫೈನಲ್ ಪಂದ್ಯ ಗೆದ್ದು ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೆಮಿಫೈನಲ್ಗೇರಿದ್ದಾರೆ.
The Great Wall of Djokovic 💪@bondisands • #BondiSands • #StayCool • #AusOpen • #AO2025 • @wwos • @espn • @eurosport • @wowowtennis pic.twitter.com/MYytDbbYSf
— #AusOpen (@AustralianOpen) January 21, 2025
ನೊವಾಕ್ ಜೊಕೊವಿಕ್ ಇಲ್ಲಿಯವರೆಗೆ 24 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಸಾಧನೆಯೊಂದಿಗೆ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಪುರುಷ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಹಾಗೆಯೇ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ದಾಖಲೆ ಮಹಿಳಾ ಆಟಗಾರ್ತಿ ಎಂಬ ದಾಖಲೆ ಮಾರ್ಗರೇಟ್ ಕೋರ್ಟ್ ಹೆಸರಿನಲ್ಲಿದೆ. ಮಾರ್ಗರೇಟ್ ಕೋರ್ಟ್ ಕೂಡ 24 ಗ್ರ್ಯಾಂಡ್ ಸ್ಲಾಮ್ಗಳನ್ನು ಗೆದ್ದಿದ್ದಾರೆ.
ಇದನ್ನೂ ಓದಿ: ಸಿಕ್ಸ್ಗಳ ಸುರಿಮಳೆ… ಟಿ20 ಕ್ರಿಕೆಟ್ನಲ್ಲಿ ಕೀರನ್ ಪೊಲಾರ್ಡ್ ವಿಶ್ವ ದಾಖಲೆ
ಇದೀಗ ಟೆನಿಸ್ ಇತಿಹಾಸದಲ್ಲಿ ಅತೀ ಗ್ರ್ಯಾಂಡ್ ಸ್ಲಾಮ್ ಕಿರೀಟ ಮುಡಿಗೇರಿಸಿಕೊಂಡ ದಾಖಲೆ ಬರೆಯಲು ನೊವಾಕ್ ಜೊಕೊವಿಚ್ಗೆ ಒಂದು ಪ್ರಶಸ್ತಿಯ ಅವಶ್ಯಕತೆಯಿದೆ. ಹೀಗಾಗಿ ಈ ಬಾರಿಯ ಆಸ್ಟ್ರೇಲಿಯನ್ ಓಪನ್‌ನಲ್ಲಿ ನೊವಾಕ್ ಜೊಕೊವಿಚ್ ಪ್ರಶಸ್ತಿ ಮುಡಿಗೇರಿಸಿಕೊಂಡರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
Published On - 8:09 am, Wed, 22 January 25