ಇತ್ತೀಚೆಗಷ್ಟೆ ಮುಕ್ತಾಯಗೊಂಡ ಕಾಮನ್ವೆಲ್ತ್ ಗೇಲ್ಸ್ 2022 ರಲ್ಲಿ (Commonwealth Games 2022) ಭಾರತ ಒಟ್ಟು 61 ಪದಕಗಳನ್ನು ಪಡೆದುಕೊಂಡ ಸಾಧನೆ ಮಾಡಿತು. 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕ ಗೆಲ್ಲುವ ಮೂಲಕ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದೆ. ಇದೀಗ ಭಾರತದ ಭವಾನಿ ದೇವಿ (Bhavani Devi) ಅವರು ಲಂಡನ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಫೆನ್ಸಿಂಗ್ ಚಾಂಪಿಯನ್ಷಿಪ್ನಲ್ಲಿ (Commonwealth Fencing Championship) ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ. ವೈಯಕ್ತಿಕ ಸೇಬರ್ ವಿಭಾಗದ ಫೈನಲ್ನಲ್ಲಿ ಆಸ್ಟ್ರೇಲಿಯಾದ ಎರಡನೇ ಶ್ರೇಯಾಂಕಿತ ವರೋನಿಕಾ ವೇಸ್ಲೆವಾ ವಿರುದ್ಧ 15-10ರ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. ಈ ಮೂಲಕ ಭವಾನಿ ಕಳೆದ ಬಾರಿ ಗೆದ್ದಿದ್ದ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಹಂಗೇರಿಯಲ್ಲಿ ನಡೆದ 2020 ರ ಫೆನ್ಸಿಂಗ್ ವಿಶ್ವಕಪ್ನ ಕ್ವಾರ್ಟರ್–ಫೈನಲ್ ತಲುಪಿದ ನಂತರ ಭವಾನಿ ದೇವಿ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಏಕೈಕ ಭಾರತೀಯ ಫೆನ್ಸರ್ ಆಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಇಸ್ತಾನ್ಬುಲ್ನಲ್ಲಿ ನಡೆದ ವಿಶ್ವಕಪ್ನಲ್ಲಿ 23ನೇ ಸ್ಥಾನ ಗಳಿಸಿದ್ದ ಭವಾನಿ ಕಾಮನ್ವೆಲ್ತ್ ಫೆನ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದಿದ್ದಾರೆ.
ಪಂದ್ಯ ಗೆದ್ದ ಬಳಿಕ ಮಾತನಾಡಿರುವ ಭವಾನಿ, “ಪಂದ್ಯ ಕಠಿಣವಾಗಿತ್ತು, ಗೆಲುವು ಸಾಧಿಸಿ ಭಾರತಕ್ಕೆ ಮತ್ತೊಮ್ಮೆ ಚಿನ್ನದ ಪದಕ ದಕ್ಕಿಸಿಕೊಡುವಲ್ಲಿ ಯಶಸ್ವಿಯಾಗಿರುವುದಕ್ಕೆ ಖುಷಿಯಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಪದಕ ಗೆಲ್ಲುತ್ತೇನೆ,” ಎಂದು ಹೇಳಿದ್ದಾರೆ. ಭಾರತ ಫೆನ್ಸಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ, ಭವಾನಿ ಅವರನ್ನು ಅಭಿನಂದಿಸಿದ್ದಾರೆ. ”ದೇಶದ ಪ್ರತಿ ಫೆನ್ಸರ್ಗಳಿಗೂ ಭವಾನಿ ಅವರು ಪ್ರೇರಕಶಕ್ತಿಯಾಗಿದ್ದಾರೆ. ಹಲವು ಯುವ ಪ್ರತಿಭೆಗಳು ಅವರಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ,” ಎಂದು ಹೇಳಿದ್ದಾರೆ.