National Sports Day 2021: ಇಂದು ರಾಷ್ಟ್ರೀಯ ಕ್ರೀಡಾ ದಿನ: ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಬಗ್ಗೆ ನಿಮಗೆಷ್ಟು ಗೊತ್ತು?
Dhyan Chand: 42ನೇ ವಯಸ್ಸಿನವರೆಗೂ ಹಾಕಿ ಆಡುತ್ತಿದ್ದ ಅವರು, 1948ರಲ್ಲಿ ನಿವೃತ್ತರಾದರು. ವೃತ್ತಿಜೀವನದಲ್ಲಿ ಅವರು 570 ಗೋಲು ಸಿಡಿಸಿದರು. 1956ರಲ್ಲಿ ಪದ್ಮಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾದರು.
ಇಂದು ಹಾಕಿ ದಂತಕತೆ ಧ್ಯಾನ್ ಚಂದ್ (Dhyan Chand) ಅವರ 116ನೇ ಜನ್ನದಿನವಾಗಿದ್ದು, ಈ ದಿನವನ್ನ ದೇಶಾದ್ಯಂತ ‘ರಾಷ್ಟ್ರೀಯ ಕ್ರೀಡಾ ದಿನ’ವಾಗಿ (National Sports Day 2021) ಆಚರಿಸಲಾಗುತ್ತದೆ. ವಿಶ್ವಮಟ್ಟದಲ್ಲಿ ಭಾರತದ ಹಾಕಿ ತಂಡವನ್ನು ಗುರುತಿಸುವಂತೆ ಮಾಡಿದ ಶ್ರೇಷ್ಠ ಆಟಗಾರ ಎಂದರೆ ಅದು ಧ್ಯಾನ್ ಚಂದ್. ದೇಶದ ಕೀರ್ತಿಯನ್ನು ಹೆಚ್ಚಿಸಿದ ಧ್ಯಾನ್ ಚಂದ್ ಅವರು 1905ರ ಆಗಸ್ಟ್ 29ರಂದು ಅಹಮದಾಬಾದ್ನಲ್ಲಿ ಜನಿಸಿದರು. ಒಲಿಂಪಿಕ್ನಲ್ಲಿ ಸಾಲು ಸಾಲು ಚಿನ್ನ ಗೆಲ್ಲಿಸಿ ಕೊಟ್ಟಿರುವ ಧ್ಯಾನ್ ಅವರು 400ಕ್ಕೂ ಅಧಿಕ ಗೋಲು ಗಳಿಸಿದ್ದಾರೆ.
ಭಾರತೀಯ ಹಾಕಿಯನ್ನು ಯಶಸ್ಸಿನ ಶಿಖರಾಗ್ರಕ್ಕೊಯ್ದ ಧ್ಯಾನ್ ಚಂದ್ಗೆ ಇಂದು ಭಾರತೀಯರೆಲ್ಲರೂ ನಮನವನ್ನು ಸಲ್ಲಿಸುತ್ತಿದ್ದಾರೆ. ಸ್ವಾತಂತ್ರ್ಯಪೂರ್ವದಲ್ಲಿ 1928ರಿಂದ ಒಲಿಂಪಿಕ್ಸ್ನಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡದ ಮಹಾನ್ ಆಟಗಾರ ಇವರು.
ಧ್ಯಾನಚಂದ್ ಅವರು ನ್ಯೂಜಿಲ್ಯಾಂಡ್ ನೆಲದಲ್ಲಿ 201 ಗೋಲುಗಳನ್ನು ಬಾರಿಸಿದ ಸುದ್ದಿಯನ್ನು ಕೇಳಿದ ಖ್ಯಾತ ಕ್ರಿಕೆಟರ್ ಡಾನ್ ಬ್ರಾಡಮನ್, ‘ಇದನ್ನು ಹಾಕಿ ಆಟಗಾರ ಹೊಡೆದನೋ ಅಥವಾ ಕ್ರಿಕೆಟ್ ಆಟಗಾರ ಹೊಡೆದನೋ’ ಎಂದು ಅಚ್ಚರಿಯ ಉದ್ಗಾರ ತೆಗೆದಿದ್ದರು. ನೇತಾಜಿ ಸುಭಾಷಚಂದ್ರ ಬೋಸ್ ಧ್ಯಾನಚಂದ್ ಅವರ ಆಟದ ವೈಖರಿಯನ್ನು ಒಮ್ಮೆ ಪ್ರತ್ಯಕ್ಷವಾಗಿ ನೋಡಿ ಮಂತ್ರಮುಗ್ಧರಾದರು. ಮೂರು ದಶಕಗಳ ಕಾಲ ಭಾರತದ ಹಾಕಿ ಆಟಗಾರರ ‘ಅನಭಿಷಿಕ್ತ ದೊರೆ’ ಎಂದೇ ಗುರುತಿಸಲ್ಪಟ್ಟ ಧ್ಯಾನ್ ಚಂದ್ ರನ್ನು ಆಗಸ್ಟ್ 29 ರಂದು ಸ್ಮರಿಸುವುದರ ಜೊತೆಗೆ ಕ್ರೀಡಾರಂಗದ ಬಗ್ಗೆ ಅವಲೋಕನ ಮಾಡುವ ದಿನ ಇದಾಗಿದೆ.
42ನೇ ವಯಸ್ಸಿನವರೆಗೂ ಹಾಕಿ ಆಡುತ್ತಿದ್ದ ಅವರು, 1948ರಲ್ಲಿ ನಿವೃತ್ತರಾದರು. ವೃತ್ತಿಜೀವನದಲ್ಲಿ ಅವರು 570 ಗೋಲು ಸಿಡಿಸಿದರು. 1956ರಲ್ಲಿ ಪದ್ಮಭೂಷಣ ಪ್ರಶಸ್ತಿಯಿಂದ ಪುರಸ್ಕೃತರಾದರು. 1979ರ ಡಿಸೆಂಬರ್ 3ರಂದು ಪಿತ್ತಜನಕಾಂಗದ ಕ್ಯಾನ್ಸರ್ನಿಂದ ಅವರು ಮೃತಪಟ್ಟರು. ಅವರ ಸ್ಮರಣಾರ್ಥ ದೆಹಲಿಯ ರಾಷ್ಟ್ರೀಯ ಹಾಕಿ ಕ್ರೀಡಾಂಗಣಕ್ಕೆ ಧ್ಯಾನ್ ಚಂದ್ ಹೆಸರನ್ನು ಇಡಲಾಗಿದೆ. ಇತ್ತೀಚೆಗೆ ದೇಶದ ಅತ್ಯುನ್ನತ ಕ್ರೀಡಾ ಪುರಸ್ಕಾರ ‘ಖೇಲ್ ರತ್ನ’ಕ್ಕೆ ಅವರ ಹೆಸರು ಇಡಲಾಗಿದೆ.
ಹೊಸ ಉತ್ಸಾಹದೊಂದಿಗೆ ಪುಟಿದೆದ್ದು ಗತಕಾಲವನ್ನು ಮರೆತು, ಹೊಸ ಮುನ್ನುಡಿಯನ್ನು ಬರೆಯಲು ಸಜ್ಜುಗೊಂಡಿರುವ ಭಾರತದ ಕ್ರೀಡಾಕ್ಷೇತ್ರ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಸ್ವಾತಂತ್ರದ ನಂತರ ಭಾರತದ ಕ್ರೀಡಾರಂಗದಲ್ಲಿ ಅಂತರರಾಷ್ಟ್ರೀಯ ಸಾಧನೆಗಳು ಆಗೊಮ್ಮೆ ಈಗೊಮ್ಮೆ ದಾಖಲಿಸಿಕೊಂಡಿದ್ದರೂ ಗಮನಾರ್ಹ ಸಾಧನೆ ಕೈಗೆ ಎಟಕಲಿಲ್ಲ. ಆದರೆ, ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದ ಕ್ರೀಡಾಕ್ಷೇತ್ರ ಸಮೃದ್ದಿಯತ್ತ ಸಾಗಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿದ್ದರು.
IND vs ENG: 4ನೇ ಟೆಸ್ಟ್ಗೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ: ಹಿಂಟ್ ಕೊಟ್ಟ ವಿರಾಟ್ ಕೊಹ್ಲಿ
Jarvo 69: ಟೀಮ್ ಇಂಡಿಯಾ ಅಭಿಮಾನಿಗೆ ಜೀವನ ಪರ್ಯಂತ ನಿಷೇಧ ಹೇರಿದ ಇಂಗ್ಲೆಂಡ್ ಕ್ರಿಕೆಟ್: ಯಾಕೆ ಗೊತ್ತೇ?
(National Sports Day 2021 Tributes Pour In For Major Dhyan Chand On His Birth Anniversary)
Published On - 11:48 am, Sun, 29 August 21