ಪ್ರೊ ಕಬಡ್ಡಿ ಲೀಗ್ ಪಂದ್ಯಗಳಲ್ಲಿ ಪ್ಲೇ ಆಫ್(Play-off) ಪ್ರವೇಶಿಸಲು ಗೆಲ್ಲಲೇ ಬೇಕಾಗಿದ್ದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ (Bengaluru Bulls) ತಂಡ ಜೈಪುರ ಪಿಂಕ್ ಪ್ಯಾಂಥರ್ಸ್(Jaipur Pink Panthers) ವಿರುದ್ಧ ಗೆಲುವು ಸಾಧಿಸಿದೆ. ಭರತ್ ಮತ್ತು ನಾಯಕ ಪವನ್ ಶೆರಾವತ್ ಅವರ ಅಮೋಘ ಸೂಪರ್ ಟೆನ್ ಸಾಧನೆಯ ಬಲದಿಂದ ಬೆಂಗಳೂರು ಬುಲ್ಸ್ ಭರ್ಜರಿ ಜಯ ಸಾಧಿಸಿ ಪ್ಲೇ ಆಫ್ ಕನಸನ್ನು ಜೀವಂತವಾಗಿ ಇಟ್ಟುಕೊಂಡಿದೆ. ವೈಟ್‌ಫೀಲ್ಡ್‌ನ ಹೋಟೆಲ್ ಶೆರಟಾನ್ ಗ್ರ್ಯಾಂಡ್‌ನಲ್ಲಿ ನಡೆದ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಬುಲ್ಸ್ 45-37 ಅಂತರದಿಂದ ಜೈಪುರ್ ಪಿಂಕ್ ಪ್ಯಾಂಥರ್ಗೆ ಸೋಲುಣಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಿಯಾಯಿತು.
ಬೆಂಗಳೂರು ಪರ ರೈಡರ್ ಭರತ್ (15 ಅಂಕ), ನಾಯಕ ಪವನ್ ಸೆಹ್ರಾವತ್ (10 ಅಂಕ) ಅವರ ಭರ್ಜರಿ ಆಟ ಬುಲ್ಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಇದು 20 ಪಂದ್ಯಗಳಲ್ಲಿ ಬುಲ್ಸ್ ಕಂಡ 10ನೇ ಜಯ. ಜೈಪುರ ಪಿಂಕ್ ಪ್ಯಾಂಥರ್ಸ್ ಅರ್ಜುನ್ ದೇಶ್ವಾಲ್ ಒಬ್ಬರೇ ಮಿಂಚಿದರು. ಅವರು ನಾಲ್ಕು ಬೋನಸ್ ಪಾಯಿಂಟ್ ಸೇರಿದಂತೆ 16 ಪಾಯಿಂಟ್ ಕಲೆ ಹಾಕಿದರು. ದೀಪಕ್ ಹೂಡಾ ಆರು ಪಾಯಿಂಟ್ ಗಳಿಸಿದರು. ಈ ಜಯದೊಂದಿಗೆ ಬುಲ್ಸ್ ತಂಡದಲ್ಲಿ ಪ್ಲೇ ಆಫ್ ಹಂತದ ಕನಸು ಚಿಗುರಿದೆ.
ಪಂದ್ಯದ ಆರಂಭದಲ್ಲಿ ಜೈಪುರ್ ಆಧಿಪತ್ಯ ಸ್ಥಾಪಿಸಿತ್ತು. ಡಿಫೆಂಡರ್‌ಗಳು ತಂಡಕ್ಕೆ ಪಾಯಿಂಟ್‌ಗಳನ್ನು ತಂದುಕೊಟ್ಟರು. ಮೊದಲ ರೇಡ್‌ನಲ್ಲೇ ಸಂದೀಪ್ ಧೂಳ್ ಅವರು ಪವನ್ ಅವರನ್ನು ಟ್ಯಾಕಲ್ ಮಾಡಿದರು. ಆದರೆ ನಂತರ ಪವನ್ ಸಹಜ ಆಟದ ಮೂಲಕ ಮಿಂಚಿದರು. ಈವರೆಗೂ 10 ಗೆಲುವು 8 ಸೋಲುಗಳು ಹಾಗೂ ಎರಡು ಟೈ ಪಂದ್ಯಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇತ್ತ ಜೈಪುರ ಪಿಂಕ್ ಪ್ಯಾಂಥರ್ಸ್ ಎಂಟು ಗೆಲುವುಗಳು, 9 ಸೋಲುಗಳು ಮತ್ತು ಎರಡು ಟೈ ಪಂದ್ಯಗಳೊಂದಿಗೆ ಪಾಯಿಂಟ್‌ಗಳ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ.
ಇನ್ನು ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ಯು ಮುಂಬಾವನ್ನು 37-26 ಅಂತರದಿಂದ ಮಣಿಸಿತು. ಇದು ಹರ್ಯಾಣಕ್ಕೆ 20 ಪಂದ್ಯಗಳಲ್ಲಿ ಒಲಿದ 10ನೇ ಜಯ. ಮುಂಬಾ 19 ಸ್ಪರ್ಧೆಗಳಲ್ಲಿ 7ನೇ ಸೋಲನುಭವಿಸಿತು. ಹರಿಯಾಣ ಪರವಾಗಿ ವಿಕಾಸ್ ಖಂಡೋಲ 14 ಮತ್ತು ಆಶಿಶ್ 13 ಪಾಯಿಂಟ್ ಗಳಿಸಿದರು. ಯು ಮುಂಬಾಗಾಗಿ ಅಭಿಷೇಕ್ ಸಿಂಗ್ 10 ಮತ್ತು ಅಜಿತ್ 7 ಪಾಯಿಂಟ್ ತಂದುಕೊಟ್ಟರು.